ಮಡಿಕೇರಿ, ಆ.25- ಕೊಡಗು ಜಿಲ್ಲೆಯಲ್ಲಿ ಜಾರಿಯಲ್ಲಿರುವ ವೀಕೆಂಡ್ ಕಫ್ರ್ಯೂ ನಿಯಮವನ್ನು ಕೈಬಿಡಬೇಕೆಂದು ಒತ್ತಾಯಿಸಿ ಕೊಡಗು ಜಿಲ್ಲಾ ಪ್ರವಾಸೋದ್ಯಮ ಅವಲಂಬಿತರ ಒಕ್ಕೂಟ ಪ್ರತಿಭಟನೆ ನಡೆಸಿತು.
ನಗರದ ಗಾಂಧಿ ಮೈದಾನದಲ್ಲಿ ಪ್ರತಿಭಟನೆ ನಡೆಸಿದ ಒಕ್ಕೂಟದ ಪ್ರಮುಖರು ಲಾಕ್‍ಡೌನ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಕೊರೊನಾ ಪಾಸಿಟಿವಿಟಿ ಇಳಿಕೆಯಾಗಿದೆ. ಪ್ರವಾಸೋದ್ಯಮ ಒಕ್ಕೂಟ ಸರಕಾರದ ನಿಯಮಗಳನ್ನು ಪಾಲಿಸಿಕೊಂಡು ಉದ್ಯಮ ನಡೆಸಲು ಸಿದ್ಧವಿದೆ. ಹೀಗಿದ್ದರೂ ಲಾಕ್‍ಡೌನ್ ನೆಪದಲ್ಲಿ ಪ್ರವಾಸೋದ್ಯಮ ವನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಬಳಿಕ ಗಾಂಧಿ ಮೈದಾನದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಮೆರವಣಿಗೆಯಲ್ಲಿ ತೆರಳಿದ ಒಕ್ಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರು ಸರ್ಕಾರದ ಕ್ರಮವನ್ನು ತೀವ್ರವಾಗಿ ವಿರೋಧಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಒಕ್ಕೂಟದ ಅಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್ ಮಾತನಾಡಿ, ನಿರಂತರ ಲಾಕ್‍ಡೌನ್ ಕ್ರಮಗಳಿಂದ ಜನಸಾಮಾನ್ಯರು ಮಾತ್ರವಲ್ಲದೆ ವರ್ತಕರು ಹಾಗೂ ಪ್ರವಾಸೋದ್ಯಮವನ್ನೇ ನಂಬಿ ಬದುಕುತ್ತಿರುವ ಸಾವಿರಾರು ಮಂದಿ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ಪ್ರಮಾಣ ಶೇ.2ಕ್ಕಿಂತ ಕಡಿಮೆ ಇದ್ದು, ತಕ್ಷಣ ಲಾಕ್‍ಡೌನ್ ನಿಯಮವನ್ನು ಕೈಬಿಡಬೇಕೆಂದು ಒತ್ತಾಯಿಸಿದರು.
ಕೋವಿಡ್ ಲಾಕ್‍ಡೌನ್‍ನಿಂದಾಗಿ ಪ್ರವಾಸ ಮತ್ತು ಇತರ ಉದ್ಯಮ ಗಳ ಮಾಲೀಕರು, ಕಾರ್ಮಿಕರು, ಸಿಬ್ಬಂದಿಗಳು, ಟ್ಯಾಕ್ಸಿ ವಾಹನ ಚಾಲಕರು, ರೈತರು ಹಾಗೂ ಇತರ ಎಲ್ಲಾ ಅವಲಂಬಿತ ವರ್ಗದವರ ಜೀವನ ಚಿಂತಾಜನಕವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಸುಮಾರು 1 ಲಕ್ಷ ಕುಟುಂಬಗಳು ಸಂಕಷ್ಟದಲ್ಲಿದ್ದು, ಮಕ್ಕಳ ಶಿಕ್ಷಣ ಶುಲ್ಕ, ಬ್ಯಾಂಕ್ ಮತ್ತು ಇತರೆ ಖಾಸಗಿ ಸಂಸ್ಥೆಯ ಸಾಲ ಹಾಗೂ ಬಡ್ಡಿಯನ್ನು ಪಾವತಿಸಲೂ ಸಾಧ್ಯವಾಗದ ಪರಿಸ್ಥಿತಿ ಬಂದೊದಗಿದೆ. ಆದ್ದರಿಂದ ಸರ್ಕಾರ ತಕ್ಷಣ ಲಾಕ್‍ಡೌನ್ ಮತ್ತು ಕಫ್ರ್ಯೂನಂತಹ ಕ್ರಮಗಳನ್ನು ಕೈ ಬಿಡಬೇಕೆಂದು ಮಂಜುನಾಥ್ ಕುಮಾರ್ ಮನವಿ ಮಾಡಿದರು. ಲಾಕ್ ಡೌನ್ ಅನ್ನು ಮುಂದು ವರೆಸಿದ್ದೇ ಆದಲ್ಲಿ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಇದೇ ಸಂದರ್ಭ ಎಚ್ಚರಿಸಿದರು.
ಬೇಡಿಕೆಗಳು: 2 ವರ್ಷಗಳ ಕಾಲ ಎಲ್ಲಾ ಬಗೆಯ ಕಂದಾಯ, ಪರವಾನಗಿ ನವೀಕರಣ ಶುಲ್ಕ ರದ್ದು ಮಾಡಬೇಕು, ಹತ್ತು ತಿಂಗಳ ವಿದ್ಯುತ್ ಬಿಲ್ ಸಂಪೂರ್ಣ ವಿನಾಯಿತಿ ನೀಡಬೇಕು, ಪಾವತಿಯಾಗಿ ರುವ ಬಿಲ್ ಮರುಪಾವತಿ ಮಾಡಬೇಕು, ಬ್ಯಾಂಕ್ ಮತ್ತು ಎಲ್ಲಾ ಖಾಸಗಿ ಸಾಲದ ಬಡ್ಡಿ ಮನ್ನಾ ಮಾಡಬೇಕು, ಆರ್‍ಟಿಓ ಇಲಾಖೆಯ ಅಂತರರಾಜ್ಯ ಪರ್ಮಿಟ್, ಹಳದಿ ಬೋರ್ಡಿನ ಟ್ಯಾಕ್ಸಿಗಳಿಗೆ ತೆರಿಗೆ ವಿನಾಯಿತಿ ನೀಡಬೇಕು, ವಾಹನಗಳು, ಕಟ್ಟಡಗಳು ಮತ್ತು ವ್ಯಾಪಾರ ಉದ್ಯಮಗಳ ವಿಮೆಯನ್ನು ಸರಕಾರವೇ ಪಾವತಿಸಬೇಕು, ರ್ಯಾಫ್ಟಿಂಗ್ ಮತ್ತು ಸಾಹಸ ಕ್ರೀಡೆಗಳಿಗೆ ಅನುಮತಿ ನೀಡಬೇಕು, ಸುರಕ್ಷಿತ ಸ್ಥಳಗಳಲ್ಲಿ ಟ್ರಕ್ಕಿಂಗ್ ಮಾಡಲು ನಿರ್ಬಂಧ ಹೇರಬಾರದು, ಪ್ರವಾಸೋದ್ಯಮ ಅವಲಂಬಿತ ಸಿಬ್ಬಂದಿಗಳು, ಕಾರ್ಮಿಕರಿಗೆ ಸುರಕ್ಷತಾ ಮತ್ತು ಸೇವಾ ಭದ್ರತೆ ನೀಡಬೇಕು, ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳು ಯೋಜನೆಗಳನ್ನು ರೂಪಿಸಬೇಕು ಸೇರಿದಂತೆ ಅನೇಕ ಬೇಡಿಕೆಗಳ ಮನವಿ ಪತ್ರವನ್ನು ಪ್ರತಿಭಟನಾ ಕಾರರು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಿದರು.
ಒಕ್ಕೂಟದ ಉಪಾಧ್ಯಕ್ಷ ಕೆ.ವರದಾ, ಸಂಘಟನಾ ಕಾರ್ಯ ದರ್ಶಿ ಲಕ್ಷ್ಮೀ ನಾರಾಯಣ, ಪ್ರಧಾನ ಕಾರ್ಯದರ್ಶಿ ಕೆ.ಶಿವಕುಮಾರ್, ಖಜಾಂಚಿ ಪದ್ಮ, ಸಲಹಾ ಸಮಿತಿ ಸದಸ್ಯ ಆರ್.ಕೆ.ಭಟ್, ನಿರ್ದೇಶಕ ಹಂಚೆಟ್ಟಿರ ತಮ್ಮಯ್ಯ, ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.