ಮೈಸೂರು: ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ಹಾಗೂ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ನೇರಸಾಲ ಸೌಲಭ್ಯಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಮೈಸೂರು ಜಿಲ್ಲಾ ಶಾಖೆ ವತಿಯಿಂದ ಶನಿವಾರ ಪ್ರತಿಭಟನೆ ನಡೆಸ ಲಾಯಿತು. ಮೈಸೂರು ಡಿಸಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಈ ಎರಡೂ ನಿಗಮಗಳಿಂದ ದೊರೆಯುತ್ತಿದ್ದ ನೇರ ಸಾಲಸೌಲಭ್ಯ ಮಂಜೂರಾತಿಗೆ ಸರ್ಕಾರ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಬಡ ಕುಟುಂಬಗಳು ಜೀವನೋಪಾಯಕ್ಕೆ ಕಷ್ಟಕರ ಪರಿಸ್ಥಿತಿ ಬಂದಿದೆ ಎಂದು ಆರೋಪಿಸಿದರು.
ಸ್ವಯಂ ಉದ್ಯೋಗಕ್ಕಾಗಿ ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕ ನೇರಸಾಲ ಸೌಲಭ್ಯ ದೊರೆ ಯುವ ಯೋಜನೆಗೆ ಮಂಜೂರಾತಿ ನೀಡಲು ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿ ನಿಂದಲೂ ಮೀನಾಮೇಷ ಎಣಿಸುತ್ತಿದೆ. ಪರಿಣಾಮ ದಲಿತ ಸಮುದಾಯದ ಬಡ ಕುಟುಂಬಗಳಿಗೆ ಅನಾನುಕೂಲವಾಗಿದ್ದು, ರಾಷ್ಟ್ರೀಕೃತ ಬ್ಯಾಂಕುಗಳು ದಲಿತ ಬಡ ಕುಟುಂಬಗಳಿಗೆ ಸಾಲಸೌಲಭ್ಯಗಳನ್ನು ಕಲ್ಪಿಸದೇ ಅನ್ಯಾಯ ಮಾಡುತ್ತಿವೆ ಎಂದು ದೂರಿದರು.
ಎರಡೂ ನಿಗಮಗಳಲ್ಲಿ ವಿವಿಧ ಯೋಜನೆಗಳು ಜಾರಿಯಲ್ಲಿದ್ದರೂ ಬ್ಯಾಂಕಿನ ಅಧಿಕಾರಿಗಳು ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಇದರಿಂದ ಪರಿಶಿಷ್ಟ ಜಾತಿ ಹಾಗೂ ಪಂಗಡದ ಬಡ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಹೀಗಾಗಿ ರಾಜ್ಯ ಸರ್ಕಾರ ಈ ಕೂಡಲೇ ಎರಡೂ ನಿಗಮಗಳಿಂದಲೂ ನೇರವಾಗಿ ಸಾಲ ಸೌಲಭ್ಯ ಕಲ್ಪಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಪ್ರತಿಮೆ ಭಗ್ನಗೊಳಿಸಿದ ಕಿಡಿಗೇಡಿಗಳನ್ನು ಬಂಧಿಸಿ: ತಿ.ನರಸೀಪುರ ತಾಲೂಕು ಹಸುವಟ್ಟಿ ಗ್ರಾಮದಲ್ಲಿ ಅಂಬೇಡ್ಕರ್ ಪ್ರತಿಮೆಯನ್ನು ನ.1ರ ರಾತ್ರಿ ಕಿಡಿಗೇಡಿಗಳು ಭಗ್ನಗೊಳಿಸಿ ರಾಷ್ಟ್ರ ನಾಯಕರಾದ ಡಾ.ಅಂಬೇಡ್ಕರ್ ಅವರನ್ನು ಅಪಮಾನಿಸಿದ್ದಾರೆ. ಕೃತ್ಯ ನಡೆಸಿರುವ ಕಿಡಿಗೇಡಿಗಳನ್ನು ಬಂಧಿಸಿ, ಪ್ರತಿಮೆಯನ್ನು ಮರು ಸ್ಥಾಪಿಸಬೇಕೆಂದು ಇದೇ ವೇಳೆ ಪ್ರತಿಭಟನಾಕಾರರು ಒತ್ತಾಯಿಸಿದರು. ಸಂಘಟನೆಯ ಜಿಲ್ಲಾ ಸಂಚಾಲಕ ನಿಂಗರಾಜ್ ಮಲ್ಲಾಡಿ, ಕಾರ್ಯಕರ್ತರಾದ ಹೆಚ್.ಬಿ.ದಿವಾಕರ್, ಕಾರ್ಯ ಬಸವಣ್ಣ, ಪುಟ್ಟಲಕ್ಷ್ಮಮ್ಮ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.