ಮೈಸೂರು:- ಮೈಸೂರಿನ ಪಡುವಾರಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗೆ ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಪಡುವಾರಹಳ್ಳಿ ಶ್ರೀಗಂಧ ಯುವಕರ ಸಂಘದ ವತಿಯಿಂದ ಶಾಲೆಯ ಆವರಣದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು. ಶಾಲೆಯಲ್ಲಿ 150ಕ್ಕೂ ಹೆಚ್ಚು ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಶಾಲೆಯ ಕಾಂಪೌಂಡ್ ಬಿದ್ದು ಹಾಗೂ ಕುಡಿಯುವ ನೀರಿನ ಸೌಲಭ್ಯಕ್ಕಿದ್ದ ಬೋರ್‍ವೆಲ್ ಕೆಟ್ಟು ವರ್ಷವಾಗಿದ್ದರೂ ಸಂಬಂಧಿಸಿದವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳ ಉಳಿಸಲು ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದ್ದರೂ ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಲಕ್ಷ್ಯದಿಂದ ಯಾವುದೇ ಪ್ರಯೋ ಜನ ಆಗುತ್ತಿಲ್ಲ. ಈ ಕೂಡಲೇ ಶಿಕ್ಷಣ ಇಲಾಖೆ ಅಧಿಕಾರಿಗಳು ಪಡುವಾರಹಳ್ಳಿ ಸರ್ಕಾರಿ ಶಾಲೆಗೆ ಮೂಲಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಂಘದ ಅಧ್ಯಕ್ಷ ಪಡುವಾರಹಳ್ಳಿ ಎಂ.ರಾಮಕೃಷ್ಣ, ಕಾರ್ಯಕರ್ತರಾದ ರಾಜು ಮಾರ್ಕೆಟ್, ಎಸ್.ಕಾಂತರಾಜು, ವಿ.ರವಿಕುಮಾರ್, ಪುರುಷೋತ್ತಮ್, ಹಿನಕಲ್ ಚಂದ್ರ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.