ಕಾಡಾನೆಗಳ ದಾಳಿ: ಬೆಳೆ ನಾಶ
ಮೈಸೂರು

ಕಾಡಾನೆಗಳ ದಾಳಿ: ಬೆಳೆ ನಾಶ

November 4, 2018

ಹುಣಸೂರು: ತಾಲೂಕಿನ ಹನಗೋಡು ಹೋಬಳಿಯ ಗುರುಪುರ ಭಾಗದಲ್ಲಿ ಕಾಡಾನೆಗಳ ಹಿಂಡು ದಾಳಿಗೆ ಭತ್ತ, ರಾಗಿ ಬೆಳೆ ನಾಶವಾಗಿದೆ. ಗುರುಪುರ ಸಮೀಪದ ಗೌಡನಕಟ್ಟೆಯ ಶ್ರೀನಿವಾಸಶೆಟ್ಟಿ ಹಾಗೂ ಬೀರೇಗೌಡರಿಗೆ ಸೇರಿದ ಭತ್ತದ ಗದ್ದೆಗೆ ಆನೆಗಳ ಹಿಂಡು ಲಗ್ಗೆ ಇಟ್ಟಿದ್ದು, ಭತ್ತದ ಫಸಲನ್ನು ತಿಂದು, ತುಳಿದು ನಾಶಪಡಿಸಿವೆ. ಆನೆಗಳು ಕಾಡಿಗೆ ವಾಪಾಸ್ ಆಗುವ ವೇಳೆ ಗ್ರಾಮದ ನಾಗನಾಯ್ಕ ಅವರಿಗೆ ಸೇರಿದ ಸುಮಾರು ಒಂದು ಎಕರೆಯಷ್ಟು ರಾಗಿ ಬೆಳೆಯನ್ನು ತಿಂದು ಹಾಕಿವೆ. ಒಟ್ಟಾರೇ ಬೆಳೆ ನಾಶದಿಂದ 2 ಲಕ್ಷ ರೂ.ಗಳಿಗೂ ಹೆಚ್ಚು ನಷ್ಟವಾಗಿದೆ.

ವೀರನಹೊಸಹಳ್ಳಿ ವಲಯದಲ್ಲಿ ರೈಲ್ವೆ ಹಳಿ ಬೇಲಿ ನಿರ್ಮಿಸಿದ್ದರಿಂದ, ಗುರುಪುರ ಹಾಗೂ ಸುತ್ತ ಮುತ್ತಲ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ಬಂದಿತ್ತು. ಆದರೆ ಪ್ರತಿ ವರ್ಷದ ಕೊಯ್ಲು ಸಂದರ್ಭದಲ್ಲಿ ಭತ್ತ ಹಾಗೂ ರಾಗಿ ಬೆಳೆಯ ರುಚಿಕಂಡಿರುವ ಕಾಡಾನೆಗಳು ಹೇಗಾದರೂ ಸರಿ ಹೊರಬಂದು ದಾಂದಲೆ ನಡೆಸುತ್ತಿದ್ದು, ಅರಣ್ಯ ಇಲಾಖೆಯು ಈ ವೇಳೆ ಹೆಚ್ಚಿನ ಕಾವಲುಗಾರರನ್ನು ನೇಮಿಸಿ, ಕಾಡಾನೆಗಳ ಹಾವಳಿ ನಿಯಂತ್ರಿಸಿ, ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Translate »