ನಂಜನಗೂಡು: ಸಮರ್ಪಕ ಸಂಬಳ ದೊರೆಯದ ಹಿನ್ನೆಲೆ ಅಸಮಾಧಾನಗೊಂಡಿರುವ ಗುತ್ತಿಗೆ ಪೌರಕಾರ್ಮಿಕರು ಸ್ವಚ್ಛತಾ ಕಾರ್ಯ ಕೈಬಿಟ್ಟಿದ್ದು, ನಗರ ಗಬ್ಬುನಾರುವಂತಾಗಿದೆ.
ತಮಗೆ ವರ್ಷದಿಂದ ಸರಿಯಾಗಿ ಸಂಬಳ ನೀಡುತ್ತಿಲ್ಲವೆಂದು ಅಧಿಕಾರಿಗಳ ವಿರುದ್ಧ ಆಪಾದಿಸಿ, ಕಳೆದೆರಡು ದಿನಗಳಿಂದ ನಗರಸಭಾ ಪೌರ ಕಾರ್ಮಿಕರು ಕಸದ ವಿಲೇವಾರಿ ವಾಹನಗಳು, ಕೈಗಾಡಿಗಳನ್ನು ಮುಟ್ಟದೆ ದೂರ ಉಳಿದಿದ್ದು, ಮೌನವಾಗಿ ಪ್ರತಿಭಟಿಸುತ್ತಿದ್ದಾರೆ. ಇದರಿಂದ ನಗರದ ಮುಖ್ಯ ರಸ್ತೆಗಳು, ಚರಂಡಿಗಳು ಸೇರಿದಂತೆ ಎಲ್ಲಾ ವಾರ್ಡ್‍ಗಳಲ್ಲಿ ಕಸ ಸಂಗ್ರಹವಾಗಿದ್ದು, ದಕ್ಷಿಣಕಾಶಿ ನಂಜನಗೂಡು ತ್ಯಾಜ್ಯ ನಗರವಾಗಿದೆ. ನಗರದ ಅಲ್ಲಲ್ಲಿ ಕಸದ ರಾಶಿ ಕಂಡುಬರುತ್ತಿದ್ದು, ದುರ್ವಾಸನೆ ಬೀರುತ್ತಿದೆ. ವಾರ್ಡ್‍ಗಳ ಜನಪ್ರಧಿನಿಧಿಗಳು ಕೂಡ ಮೌನಕ್ಕೆ ಶರಣಾಗಿದ್ದಾರೆ. ಈ ಕುರಿತು ಪ್ರತಿಕ್ರಿಸಿದ ನಗರಸಭಾ ಆಯುಕ್ತ ವಿಜಯ್ ಹಾಗೂ ನಗರಸಭಾ ಅಧ್ಯಕ್ಷೆ ಪುಷ್ಪಲತಾ ಕಮಲೇಶ್ ಅವರು, ಪೌರಕಾರ್ಮಿಕರ ವೇತನ ವಿತರಣೆಗೆ ಈಗಾಗಲೇ ನಗರಸಭೆಯಿಂದ ಜಿಲ್ಲಾಡಳಿತಕ್ಕೆ ಬಿಲ್ ಕಳುಹಿಸಲಾಗಿದೆ. ಕಡತಕ್ಕೆ ಜಿಲ್ಲಾಧಿಕಾರಿ ಸಹಿ ಮಾಡಿದ ಎರಡು ದಿನಗಳಲ್ಲಿ ಪೌರಕಾರ್ಮಿಕರ ವೇತನ ಸಮಸ್ಯೆ ಬಗೆಹರಿಯಲಿದೆ ಎಂದು ಭರವಸೆ ನೀಡಿದರು.