ಕಾರ್ಖಾನೆಗೆ ಭೂಮಿ ನೀಡಿದ ರೈತ ಕುಟುಂಬದವರಿಗೆ ಉದ್ಯೋಗ ನೀಡುವಂತೆ ಆಗ್ರಹ-ಪ್ರತಿಭಟನೆ
ಮೈಸೂರು

ಕಾರ್ಖಾನೆಗೆ ಭೂಮಿ ನೀಡಿದ ರೈತ ಕುಟುಂಬದವರಿಗೆ ಉದ್ಯೋಗ ನೀಡುವಂತೆ ಆಗ್ರಹ-ಪ್ರತಿಭಟನೆ

October 21, 2020

ಮೈಸೂರು, ಅ.20(ಪಿಎಂ)- ನಂಜನಗೂಡು ತಾಲೂಕು ಇಮ್ಮಾವು ಕೈಗಾರಿಕಾ ಪ್ರದೇಶದಲ್ಲಿರುವ ಏಷ್ಯನ್ ಪೇಂಟ್ಸ್ ಕಂಪನಿಗೆ ಕೆಐಎಡಿಬಿ ಮೂಲಕ ಜಮೀನು ನೀಡಿದ ರೈತರ ಮಕ್ಕಳಿಗೆ ಕಂಪನಿಯಲ್ಲಿ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮಂಗಳವಾರ ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿತು.

ಇಮ್ಮಾವು ಗ್ರಾಮದಲ್ಲಿ 175 ಎಕರೆಗೂ ಹೆಚ್ಚಿನ ಭೂಮಿಯನ್ನು ಏಷ್ಯನ್ ಪೇಂಟ್ಸ್ ಕಂಪನಿಗೆ ನೀಡಲು ರೈತರಿಂದ ಕೆಐಎಡಿಬಿ ಭೂ ಸ್ವಾಧೀನಪಡಿಸಿಕೊಂಡಿತು. ಈ ವೇಳೆ ಭೂಮಿ ಕಳೆದುಕೊಳ್ಳುವ ರೈತರ ಕುಟುಂಬದವರಿಗೆ ಸದರಿ ಕಂಪನಿಯಲ್ಲಿ ಉದ್ಯೋಗ ನೀಡುವ ಭರವಸೆ ನೀಡಲಾಗಿತ್ತು. ಉದ್ಯೋಗ ನೀಡುವ ಸಂಬಂಧ ಕಂಪನಿಯಿಂದ 61 ಮಂದಿಗೆ ತರಬೇತಿಯನ್ನೂ ನೀಡಲಾಗಿತ್ತು. ಆದರೆ ಈವರೆಗೂ ಉದ್ಯೋಗ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈಗ ಕಂಪನಿಯ ಬೇರೆಡೆ ಇರುವ ಘಟಕದಲ್ಲಿ ಕೆಲಸ ಕೊಡುವುದಾಗಿ ಹೇಳುತ್ತಿದ್ದಾರೆ. ಇದು ಸರಿಯಲ್ಲ. ಇಮ್ಮಾವು ಘಟಕದಲ್ಲೇ ಉದ್ಯೋಗ ನೀಡಬೇಕು ಎಂದು ಆಕ್ಷೇಪ ವ್ಯಕ್ತಪಡಿಸಿದರು. ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ತಾಲೂಕು ಅಧ್ಯಕ್ಷ ಪಿ.ಮರಂಕಯ್ಯ, ರೈತ ಮುಖಂಡ ಪ್ರಸನ್ನಗೌಡ ಸೇರಿದಂತೆ ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »