ಕೇಂದ್ರದ ಶಿಕ್ಷಣ ನೀತಿ ವಿರುದ್ಧ ಎಐಡಿಎಸ್‍ಓನಿಂದ ಇಂದು `ಕರ್ನಾಟಕ ಪ್ರತಿರೋಧ ದಿನ’
ಮೈಸೂರು

ಕೇಂದ್ರದ ಶಿಕ್ಷಣ ನೀತಿ ವಿರುದ್ಧ ಎಐಡಿಎಸ್‍ಓನಿಂದ ಇಂದು `ಕರ್ನಾಟಕ ಪ್ರತಿರೋಧ ದಿನ’

August 7, 2020

ಮೈಸೂರು, ಆ.6(ಪಿಎಂ)- ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿರುವ `ರಾಷ್ಟ್ರೀಯ ಶಿಕ್ಷಣ ನೀತಿ-2020’ ಶಿಕ್ಷಣದ ಖಾಸಗೀಕರಣ, ವ್ಯಾಪಾರೀಕರಣ ಮತ್ತು ವಿದೇಶಿ ಬಂಡವಾಳಕ್ಕೆ ಅವಕಾಶ ಕಲ್ಪಿಸುವ ಅಂಶ ಒಳಗೊಂಡಿದೆ ಎಂದು ಆರೋಪಿಸಿರುವ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‍ಓ), ನೂತನ ಶಿಕ್ಷಣ ನೀತಿ ಖಂಡಿಸಿ ಆ.7ರಂದು `ಅಖಿಲ ಕರ್ನಾಟಕ ಪ್ರತಿರೋಧ ದಿನ’ ಆಚರಿಸಲಿದೆ.

ಮನೆ ಎದುರೇ ಪ್ರತಿಭಟನೆ: ಕೊರೊನಾ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಆ.7ರಂದು ಬೀದಿಗಿಳಿದು ಹೋರಾಟ, ಪ್ರತಿಭಟನೆ ನಡೆಸುವುದನ್ನು ಕೈಬಿಡಲಾಗಿದೆ. ಶಿಕ್ಷಣ ನೀತಿ ಖಂಡಿಸುವ ಫಲಕಗಳನ್ನು ಸಂಘಟನೆ ಕಾರ್ಯಕರ್ತರು ತಮ್ಮ ಮನೆ ಎದುರೇ ಪ್ರದರ್ಶಿಸಿ ಪ್ರತಿಭಟನೆ ವ್ಯಕ್ತಪಡಿಸಲಿದ್ದಾರೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಣ ತಜ್ಞರು ಈ ಪ್ರತಿರೋಧ ದಿನದಲ್ಲಿ ಪಾಲ್ಗೊಳ್ಳಬೇಕು ಎಂದು ಎಐಡಿಎಸ್‍ಓ ಮೈಸೂರು ಜಿಲ್ಲಾಧ್ಯಕ್ಷ ಆಕಾಶ್ ಕುಮಾರ್ ಕೋರಿದ್ದಾರೆ. ವಾಸ್ತವ ಮರೆಮಾಚಿ ಶಿಕ್ಷಣ ನೀತಿಯನ್ನು ಪ್ರಗತಿಪರ, ವಿದ್ಯಾರ್ಥಿಪರ ಎಂದು ಬಿಂಬಿಸಲಾಗುತ್ತಿದೆ. ಆದರೆ ಈ ನೀತಿಯಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ, ಶಿಕ್ಷಣಕ್ಕೆ ಅನುದಾನ ಹೆಚ್ಚಿಸುವ ಅಂಶಗಳಿಲ್ಲ. ಶುಲ್ಕ ಏರಿಕೆ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ನಿರ್ದಿಷ್ಟ ಪರಿಹಾರವೂ ಇಲ್ಲ. ಸರ್ಕಾರಿ ಶಾಲೆಗಳ ಗುಣಮಟ್ಟ ತಗ್ಗಿಸಿ ಪಾಲಕರು ಖಾಸಗಿ ಶಾಲೆಗಳತ್ತ ನೋಡುವಂತೆ ಮಾಡುವ ಅಂಶಗಳನ್ನು ಸೇರಿಸಲಾಗಿದೆ ಎಂದು ಸಂಘಟನೆ ರಾಜ್ಯಾಧ್ಯಕ್ಷೆ ಕೆ.ಎಸ್.ಅಶ್ವಿನಿ, ಕಾರ್ಯದರ್ಶಿ ಅಜಯ್‍ಕಾಮತ್ ಪತ್ರಿಕಾ ಪ್ರಕಟಣೆಯಲ್ಲಿ ಟೀಕಿಸಿದ್ದಾರೆ.