ಮೈಸೂರು,ಜ.29(ಪಿಎಂ)-ಗಣರಾಜ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಫೋಟೋ ತೆಗೆಸಿದ ಆರೋಪ ಎದುರಿಸುತ್ತಿರುವ ರಾಯಚೂರು ಜಿಲ್ಲಾ ನ್ಯಾಯಾ ಧೀಶ ಮಲ್ಲಿಕಾರ್ಜುನಗೌಡರನ್ನು ಸೇವೆಯಿಂದ ವಜಾಗೊಳಿಸ ಬೇಕು. ಅಲ್ಲದೆ, ದೇಶದ್ರೋಹ ಪ್ರಕರಣದಡಿ ಬಂಧಿಸಬೇಕೆಂದು ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಶನಿವಾರ ಪ್ರತಿಭಟನೆ ನಡೆಸಿದರು.
ಮೈಸೂರು ಪುರಭವನ ಆವರಣದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ಮಲ್ಲಿಕಾರ್ಜುನ ಗೌಡ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಮಾತನಾಡಿದ ಸಿಪಿಐ(ಎಂ) ಜಿಲ್ಲಾ ಮುಖಂಡ ಜಗದೀಶ್ ಸೂರ್ಯ, ನ್ಯಾಯಾಧೀಶರಂತಹ ಜವಾಬ್ದಾರಿ ಸ್ಥಾನ ದಲ್ಲಿದ್ದೂ ಮಲ್ಲಿಕಾರ್ಜುನಗೌಡ ಈ ರೀತಿ ವರ್ತಿಸಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದಲ್ಲಿ ಬಿಜೆಪಿ ಆಡಳಿತಕ್ಕೆ ಬಂದ ಬಳಿಕ ಇಂತಹ ಘಟನೆ ಗಳು ವಿಜೃಂಭಿಸುತ್ತಿವೆ. ಮಲ್ಲಿಕಾರ್ಜುನಗೌಡ ಅವರಂತಹ ವಿಕೃತ ಮನಸುಗಳು ನಮ್ಮ ನಡುವೆ ಇನ್ನೂ ಇವೆ. ಹಾಗಾಗಿ ಈ ಸಂಬಂಧ ಹೋರಾಟ ತೀವ್ರಗೊಳ್ಳಬೇಕು ಎಂದು ತಿಳಿಸಿದರು.
ಡಿಎಸ್‍ಎಸ್ ಮುಖಂಡ ಶಂಭುಲಿಂಗಸ್ವಾಮಿ ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಜನತೆ ಭಾವನೆ ಮುಂದಿಟ್ಟು ರಾಜಕೀಯ ನಡೆಸುವುದು ಸಾಮಾನ್ಯವಾಗಿದೆ. ಒಬ್ಬ ಸಾಮಾನ್ಯ ವ್ಯಕ್ತಿ ಈ ರೀತಿ ವರ್ತಿಸಿದ್ದರೆ, ತಿಳಿವಳಿಕೆ ಇಲ್ಲ ಎಂದು ನಿರ್ಲಕ್ಷ್ಯ ಮಾಡಬಹು ದಿತ್ತು. ಆದರೆ ಒಬ್ಬ ನ್ಯಾಯಾಧೀಶರು ಹೀಗೆ ವರ್ತಿಸಿರುವುದು ಸಾಮಾನ್ಯ ಸಂಗತಿಯಲ್ಲ. ಜಾತಿ ಮನಸ್ಥಿತಿಯ ಈ ವ್ಯಕ್ತಿ ನೀಡಿರುವ ಎಲ್ಲಾ ತೀರ್ಪುಗಳ ಸಂಬಂಧ ಪರಿಶೀಲನೆ ನಡೆಯಬೇಕು ಎಂದು ಆಗ್ರಹಿ ಸಿದರು. ಪತ್ರಕರ್ತ ಟಿ.ಗುರುರಾಜ್, ವಿವಿಧ ಸಂಘಟನೆಗಳ ಮುಖಂಡ ರಾದ ಗೋಪಾಲಕೃಷ್ಣ, ಕಲ್ಲಹಳ್ಳಿ ಕುಮಾರ್, ಮರಿದೇವಯ್ಯ, ರಮೇಶ್ ಗಾಂಧಿನಗರ, ಸವಿತಾ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.