ಅಡುಗೆ ಅನಿಲ ಸಿಲಿಂಡರ್ ಬೆಲೆ ಹೆಚ್ಚಳ ಖಂಡಿಸಿ ಪ್ರತಿಭಟನೆ
ಮೈಸೂರು

ಅಡುಗೆ ಅನಿಲ ಸಿಲಿಂಡರ್ ಬೆಲೆ ಹೆಚ್ಚಳ ಖಂಡಿಸಿ ಪ್ರತಿಭಟನೆ

September 3, 2021

ಮೈಸೂರು,ಸೆ.2(ಪಿಎಂ)-ಪದೇ ಪದೆ ಅಡುಗೆ ಅನಿಲದ ಸಿಲಿಂಡರ್ ಬೆಲೆ ಏರಿಕೆ ಮಾಡುತ್ತಿರುವುದನ್ನು ಖಂಡಿಸಿ ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾಪನ ಸಮಿತಿಯ ವತಿಯಿಂದ ಸಿಲಿಂಡರ್‍ಗೆ ಎಳ್ಳು-ನೀರು ಬಿಡುವ ಮೂಲಕ ಗುರುವಾರ ವಿನೂತನವಾಗಿ ಪ್ರತಿಭಟನೆ ನಡೆಸಲಾಯಿತು.
ಮೈಸೂರಿನ ನ್ಯಾಯಾಲಯದ ಎದುರಿನ ಗಾಂಧಿ ಪುತ್ತಳಿ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ಸಿಲಿಂಡರ್ ಒಂದಕ್ಕೆ ಎಳ್ಳು-ನೀರು ಬಿಟ್ಟು ಬೆಲೆ ಹೆಚ್ಚಳದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಮಿತಿ ಅಧ್ಯಕ್ಷ ಜಾಕೀರ್ ಹುಸೇನ್ ಮಾತನಾಡಿ, ಸದ್ಯದ ಗ್ಯಾಸ್ ಸಿಲಿಂಡರ್ ಬೆಲೆಗೆ ಹೋಲಿಸಿದರೆ, ವಿದ್ಯುತ್ ದರವೇ ಕಡಿಮೆ ಇದೆ. ಜ.1ರಿಂದ ಸೆ.1ರ ನಡುವೆ ಎಲ್‍ಪಿಜಿ ಸಿಲಿಂಡರ್ ಬೆಲೆ ಬರೋಬ್ಬರಿ 190 ರೂ. ಹೆಚ್ಚಾಗಿದೆ ಎಂದು ಕಿಡಿಕಾರಿದರು.

ಅಡುಗೆ ಎಣ್ಣೆ ಬೆಲೆ ಹೆಚ್ಚಿಸಿದ್ದ ಸರ್ಕಾರ, ಬಳಿಕ ಗ್ಯಾಸ್ ಸಿಲಿಂ ಡರ್ ಬೆಲೆ ಏರಿಸಿತ್ತು. ಈಗಾಗಲೇ 100 ರೂ. ಗಡಿ ದಾಟಿ ಶತಕ ಭಾರಿಸಿರುವ ಪೆಟ್ರೋಲ್-ಡೀಸೆಲ್ ಬೆಲೆ ಸದ್ಯ ಕಳೆದ ಎರಡು ತಿಂಗಳಿನಿಂದ ಹೆಚ್ಚಳವಾಗಿಲ್ಲ. ಅಡುಗೆ ಎಣ್ಣೆಯ ಬೆಲೆಯೂ ಸ್ಥಿರತೆ ಕಾಯ್ದುಕೊಂಡಿದೆ. ಆದರೆ ಈಗ ಪ್ರತಿದಿನ ಬಳಸುವ ಎಲ್‍ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಏರಿಸುವ ಮೂಲಕ ಜನತೆಗೆ ಮತ್ತೆ ಬರೆ ಹಾಕಲಾಗಿದೆ ಎಂದು ಖಂಡಿಸಿದರು.
ಸಮಿತಿ ರಾಜ್ಯ ಪ್ರಧಾನ ಸಂಚಾಲಕ ಡೈರಿ ವೆಂಕಟೇಶ್, ರಂಗಕರ್ಮಿ ಕೆ.ಆರ್.ಗೋಪಾಲಕೃಷ್ಣ, ಕಾಂಗ್ರೆಸ್ ನಗರ ಉಪಾಧ್ಯಕ್ಷ ರಾಜಾರಾಮ್, ಮುಖಂಡರಾದ ಪಿ.ರಾಜು, ದ್ಯಾವಪ್ಪ ನಾಯಕ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »