ಬೆಟ್ಟದಪುರ, ಮಾ.12(ಶಿವದೇವ್)- ರಸ್ತೆ ಅವ್ಯವಸ್ಥೆ ಸರಿಪಡಿಸಬೇಕು ಎಂದು ಆಗ್ರಹಿಸಿ ದೊಡ್ಡ ನೇರಳೆ ಗ್ರಾಮದಲ್ಲಿ ಗುರುವಾರ ಮಹಿಳಾ ಸಂಘಟಣೆಗಳಿಂದ ಪ್ರತಿಭಟನೆ ನಡೆಯಿತು.
ಚಿಕ್ಕನೇರಳೆ, ದೊಡ್ಡನೇರಳೆ, ನಿಲವಾಡಿ ಗ್ರಾಮಗಳ ರಸ್ತೆಗಳು 15 ವರ್ಷಗಳಿಂದಲೂ ಹದಗೆಟ್ಟಿದ್ದು, ವಾಹನ ಸವಾರರು ಸಂಚಾರಿಸಲು ಪ್ರತಿನಿತ್ಯ ಪರದಾಡುವಂತಾಗಿದೆ. ಗರ್ಭಿಣಿಯರು ಮತ್ತು ಬಾಣಂತಿಯರನ್ನು ಆರೋಗ್ಯ ಕೇಂದ್ರಗಳಿಗೆ ಕರೆದೊಯ್ಯಲು ಯಾವುದೇ ಬಾಡಿಗೆ ವಾಹನಗಳು ಬರುವುದಿಲ್ಲ. ಶಾಲಾ- ಕಾಲೇಜು ಮಕ್ಕಳು ಹಾಗೂ ಆರೋಗ್ಯ ಹದಗೆಟ್ಟರೇ ಸುಮಾರು 3, 4 ಕಿ.ಮೀ. ನಡೆದುಕೊಂಡು ಆರೋಗ್ಯ ಕೇಂದ್ರಕ್ಕೆ ಬರಬೇಕಾಗಿದೆ. ಸರ್ಕಾರಿ ಬಸ್‍ಗಳು ರಸ್ತೆ ಹದಗೆಟ್ಟಿರುವ ಕಾರಣ ಹೇಳಿ ಒಮ್ಮೆ ಬಂದರೆ ಮತ್ತೊಮ್ಮೆ ಬರುವುದಿಲ್ಲ. ಹೀಗಾಗಿ ತಕ್ಷಣವೇ ರಸ್ತೆಯನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಪಂಚಾಯಿತಿ ಎಇಇ ಪ್ರಭು ಮಾತನಾಡಿ, ಈಗಾಗಲೇ ಒಂದು 1.20ಲಕ್ಷಕ್ಕೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಆರಂಭವಾಗಿದ್ದು, ಕೆಲವೇ ದಿನಗಳಲ್ಲಿ ಶಾಸಕರು ಭೂಮಿಪೂಜೆ ಮಾಡಲಿದ್ದಾರೆ ಎಂದು ಹೇಳಿದರು. ಪ್ರತಿಭಟನೆಯಲ್ಲಿ ದೊಡ್ಡನೇರಳೆ ಗ್ರಾಮದ ಲಕ್ಷ್ಮಿದೇವಿ, ದೊಡ್ಡಮ್ಮ ತಾಯಿ ಮತ್ತು ಮಹಿಳಾ ಸಂಘದ ಸದಸ್ಯರು ಇದ್ದರು.