ಮೈಸೂರಿನ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕ ಕೆಲಸ ಕುಂಠಿತ
ಮೈಸೂರು

ಮೈಸೂರಿನ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕ ಕೆಲಸ ಕುಂಠಿತ

August 9, 2020

ಮೈಸೂರು, ಆ. 8(ಆರ್‍ಕೆ)- ಮೈಸೂರು ನಗರ ಮತ್ತು ಜಿಲ್ಲೆಯಾದ್ಯಂತ ಕೊರೊನಾ ವೈರಸ್ ಸೋಂಕು ವ್ಯಾಪಕ ವಾಗಿ ಹರಡುತ್ತಿರುವುದ ರಿಂದ ಜಿಲ್ಲಾಧಿಕಾರಿ ಕಚೇರಿ, ಮುಡಾ, ನಗರ ಪಾಲಿಕೆ, ತಹಸೀಲ್ದಾರ್, ಜಿಲ್ಲಾ ಪಂಚಾಯ್ತಿ ಸೇರಿ ದಂತೆ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸ ಕುಂಠಿತವಾಗಿದೆ.

ಅಧಿಕಾರಿಗಳು, ಸಿಬ್ಬಂದಿ ಹಾಗೂ ಜನ ಪ್ರತಿನಿಧಿಗಳನ್ನೊರತುಪಡಿಸಿ ಎಲ್ಲಾ ಕಚೇರಿ ಗಳಲ್ಲೂ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿರುವುದರಿಂದ ಸೇವೆ ಸಿಗದೆ ಜನರು ಪರಿತಪಿಸುವಂತಾಗಿದೆ. ಕಚೇರಿ ಪ್ರವೇಶ ದ್ವಾರದಲ್ಲಿ ಅಡ್ಡಲಾಗಿ ಟೇಬಲ್ ಅಡ್ಡಗಟ್ಟಿ ರುವುದು ಇಲ್ಲವೇ ಟೇಪ್ ಕಟ್ಟಿರುವುದ ರಿಂದ ಎಂತಹ ಗಂಭೀರ ಸಮಸ್ಯೆ ಹೊತ್ತು ಬಂದರೂ ಕೊರೊನಾ ಸೋಂಕು ಹರಡುವ ಭೀತಿಯಿಂದಾಗಿ ಜನರು ಅಧಿಕಾರಿ, ಕೇಸ್ ವರ್ಕರ್ ಅನ್ನು ಭೇಟಿ ಮಾಡಲು ಬಿಡುತ್ತಿಲ್ಲ.

ತಮ್ಮ ಅಹವಾಲು, ಕೆಲಸಗಳಿಗಾಗಿ ಅರ್ಜಿ ಯನ್ನು ಬಾಗಿಲಲ್ಲೇ ನಿಂತು ಸಿಬ್ಬಂದಿ ಯೊಬ್ಬರು ಸ್ವೀಕರಿಸುತ್ತಾರೆಯೇ ಹೊರತು, ಸಂಬಂಧಪಟ್ಟವರೊಂದಿಗೆ ಮಾತನಾಡಲು ಅವಕಾಶವಿಲ್ಲ. ತಮ್ಮ ಅರ್ಜಿ ಬಗ್ಗೆ ವಿಚಾ ರಿಸುವ ಅವಕಾಶವೇ ಇಲ್ಲದಿರುವುದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನು ಭವಿಸುವಂತಾಗಿದೆ. ಕೊರೊನಾ ಹಿನ್ನೆಲೆ ಯಲ್ಲಿ 50 ವರ್ಷದ ಮೇಲ್ಪಟ್ಟ ಅಧಿಕಾರಿ, ಸಿಬ್ಬಂದಿ ಕಚೇರಿಗೆ ಹಾಜರಾಗಬೇಡಿ ಎಂದು ಸರ್ಕಾರ ಸೂಚನೆ ನೀಡಿರುವುದರಿಂದ ಪ್ರತೀ ಸರ್ಕಾರಿ ಕಚೇರಿಗಳಲ್ಲಿ ಶೇ.35ರಷ್ಟು ಸಿಬ್ಬಂದಿ ಕೊರತೆ ಎದುರಾಗಿದೆಯಲ್ಲದೆ, ಲಭ್ಯವಿರುವ ಅಧಿಕಾರಿ, ಸಿಬ್ಬಂದಿಯ ಪೈಕಿ ಬಹುತೇಕ ಮಂದಿಯನ್ನು ಕೋವಿಡ್ ಮತ್ತು ವಿಪತ್ತು ನಿರ್ವಹಣೆಗಾಗಿ ಬಳಸುತ್ತಿರುವುದ ರಿಂದ ಕಚೇರಿ ದೈನಂದಿನ ಕೆಲಸ ಹಾಗೂ ಸಾರ್ವಜನಿಕರಿಂದ ಬರುವ ಅರ್ಜಿಗಳ ವಿಲೇವಾರಿ ಪ್ರಕ್ರಿಯೆ ನೆನೆಗುದಿಗೆ ಬಿದ್ದಿವೆ.

ಸಾರ್ವಜನಿಕರು ನೇರ ಸಂಪರ್ಕ ಹೊಂದಿ ರುವ ಜಿಲ್ಲಾಧಿಕಾರಿ ಕಚೇರಿ, ಉಪ ವಿಭಾ ಗಾಧಿಕಾರಿ, ಜಿಲ್ಲಾ ಖಜಾನೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಮೈಸೂರು ಮಹಾನಗರ ಪಾಲಿಕೆ, ಕೃಷಿ, ನೀರಾವರಿ, ತೋಟಗಾರಿಕೆ ಇಲಾಖೆ, ಕಂದಾಯ ಇಲಾಖೆಯ ತಹಸೀಲ್ದಾರ್ ಕಚೇರಿ, ಮುಡಾ, ಚೆಸ್ಕಾಂಗಳಂತಹ ಸರ್ಕಾರಿ ಕಚೇರಿಗಳಿಗೆ ಪ್ರವೇಶಿಸಲು ಸಾರ್ವಜನಿಕರಿಗೆ ಮುಕ್ತ ಅವಕಾಶವಿಲ್ಲ ದಂತಾಗಿರುವುದು ಜನರ ಸಮಸ್ಯೆ ಈಡೇ ರದಿರಲು ಪ್ರಮುಖ ಕಾರಣವಾಗಿದೆ.

ಕೋವಿಡ್-19 ಲಾಕ್‍ಡೌನ್ ನಿರ್ಬಂಧ ಸಂಪೂರ್ಣ ಸಡಿಲಗೊಂಡು ಎಲ್ಲಾ ಚಟು ವಟಿಕೆಗಳು ಮುಕ್ತವಾಗಿವೆಯಾದರೂ ಸಾರ್ವಜನಿಕರ ಸೇವೆಗಾಗಿಯೇ ಇರುವ ಸರ್ಕಾರಿ ಇಲಾಖಾ ಕಚೇರಿಗಳು ಮಾತ್ರ ಬಾಗಿಲು ಬಂದ್ ಮಾಡಿಕೊಂಡಿರುವುದ ರಿಂದ ಭಯದ ವಾತಾವರಣ ಉಂಟಾಗಿದೆ.

ಕೋವಿಡ್ ಜೊತೆಗೆ ಅತಿವೃಷ್ಠಿಯಿಂದ ವಿಕೋಪ ಸಂಭವಿಸುತ್ತಿರುವುದರಿಂದ ಬಹು ತೇಕ ಅಧಿಕಾರಿ, ಸಿಬ್ಬಂದಿ ನಿರ್ವಹಣೆ ಹಾಗೂ ಪರಿಹಾರ ಕಾರ್ಯದಲ್ಲಿ ತೊಡಗಿರುವ ಕಾರಣ ಸರ್ಕಾರಿ ಕಚೇರಿಗಳೀಗ ಸಾರ್ವಜನಿಕರಿಗೆ ಸಂಪೂರ್ಣವಾಗಿ ಮುಚ್ಚಿದಂತಾಗಿದೆ.

 

 

 

Translate »