`ಈಗಿದ್ದ ಸೂರ್ಯ ಕ್ಷಣದಲ್ಲಿ ಇಲ್ಲ’ ಎಂಬಂತೆ ಮರೆಯಾದ ಪುನೀತ್
ಮೈಸೂರು

`ಈಗಿದ್ದ ಸೂರ್ಯ ಕ್ಷಣದಲ್ಲಿ ಇಲ್ಲ’ ಎಂಬಂತೆ ಮರೆಯಾದ ಪುನೀತ್

November 3, 2021

ಮೈಸೂರು, ನ.2(ಆರ್‍ಕೆಬಿ)- ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು `ಈಗಿದ್ದ ಸೂರ್ಯ ಕ್ಷಣದಲ್ಲಿ ಇಲ್ಲ’ ಎಂಬಂತೆ ತಕ್ಷಣ ಮರೆ ಯಾಗಿ ಹೋಗಿದ್ದಾರೆ. ಅವರ ಅಕಾಲಿಕ ನಿಧನದಿಂದ ಕನ್ನಡ ಲೋಕಕ್ಕೆ ದೊಡ್ಡ ನಷ್ಟವಾಗಿದೆ ಎಂದು ಮೈಸೂರು ವಿಶ್ವ ವಿದ್ಯಾನಿಲಯದ ಕುಲಸಚಿವ ಪ್ರೊ. ಆರ್.ಶಿವಪ್ಪ ಕಂಬನಿ ಮಿಡಿದಿದ್ದಾರೆ.

ಮೈಸೂರು ವಿವಿ ಸಂಜೆ ಕಾಲೇಜು ಆವರಣದಲ್ಲಿ ಮೈಸೂರು ವಿವಿ ನೌಕರರ ವೇದಿಕೆ ಮಂಗಳವಾರ ಏರ್ಪಡಿಸಿದ್ದ ಪುನೀತ್ ರಾಜ್‍ಕುಮಾರ್‍ಗೆ ಶ್ರದ್ಧಾಂ ಜಲಿ ಕಾರ್ಯಕ್ರಮದಲ್ಲಿ ಪುನೀತ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

ದೈಹಿಕ ಸದೃಢತೆಗೆ ಮತ್ತೊಂದು ಹೆಸರೇ ಪುನೀತ್ ರಾಜ್‍ಕುಮಾರ್. ಎಲ್ಲರೊಂದಿಗೆ ಒಡನಾಟದಿಂದ ಬೆರೆತು ಸದಾ ನಗು ನಗುತ್ತಲೇ ಎಲ್ಲರನ್ನು ನಗಿಸುತ್ತಿ ದ್ದವರು. ತಮ್ಮ 46 ವರ್ಷಗಳ ಜೀವನದಲ್ಲಿ ಅತೀ ಹೆಚ್ಚು ಸಾಧನೆ ಮಾಡಿದ ಕೀರ್ತಿ ಅವರದ್ದು. ಮಕ್ಕ ಳಿಂದ ಹಿಡಿದು ವೃದ್ಧರವರೆಗೂ ಅವರಿಗೆ ಅಭಿಮಾನಿ ಗಳಿದ್ದಾರೆ. ಅವರು ಬಹು ದೊಡ್ಡ ನೆನಪನ್ನು ಬಿಟ್ಟು ಹೋಗಿದ್ದಾರೆ. ಅವರ ಹೆಸರು ಕನ್ನಡ, ಕರ್ನಾಟಕ ದಲ್ಲಿ ಚಿರಸ್ಥಾಯಿಯಾಗಿ ಉಳಿಯಲಿದೆ ಎಂದರು.

ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್ ಮಾತನಾಡಿ, ನೂರಾರು ಮಂದಿ ನಟರು ಬರಬಹುದು. ಆದರೆ ಸಾಮಾಜಿಕ ಪ್ರಜ್ಞೆಯುಳ್ಳ ಪುನೀತ್ ವ್ಯಕ್ತಿತ್ವದ ಮತ್ತೊಬ್ಬ ನಟ ಹುಟ್ಟುವುದು ಕಷ್ಟ. ಪುನೀತ್ ಅವರ ನಟನೆಯ ಚಿತ್ರಗಳು ಭ್ರಷ್ಟಾಚಾರ, ದೇಶದ ಶಿಕ್ಷಣ ವ್ಯವಸ್ಥೆ ಇನ್ನಿತರೆ ಸಾಮಾಜಿಕ ಕಾಳಜಿ ಯುಳ್ಳ ಅನೇಕ ಸಂದೇಶಗಳನ್ನು ನೀಡಿವೆ. ಅವರ ಬದುಕು ಮತ್ತು ನಟನೆ ಒಂದೇ ಆಗಿತ್ತು ಎಂದರು.

ಕಾರ್ಯಕ್ರಮದಲ್ಲಿ ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್, ಮೈಸೂರು ವಿವಿ ಸಂಜೆ ಕಾಲೇಜು ಪ್ರಾಂಶುಪಾಲ ಡಾ.ಹೆಚ್.ಸಿ.ದೇವರಾಜೇಗೌಡ, ಮಹಾರಾಜ ಕಾಲೇಜು ಪ್ರಾಂಶುಪಾಲ ಅನಿತಾ ವಿಮಲ ಬ್ರ್ಯಾಗ್ಸ್, ಮಾನಸಗಂಗೋತ್ರಿ ಸಮಾಜ ಕಾರ್ಯ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ.ಹೆಚ್.ಪಿ.ಜ್ಯೋತಿ, ಸಹ ಪ್ರಾಧ್ಯಾಪಕರಾದ ಡಾ. ಶೇಖರ್ ನಾಯಕ್, ಡಾ.ವಿಜಯಲಕ್ಷ್ಮೀ, ಡಾ. ವಿಜಯ ಲಕ್ಷ್ಮೀ ಮನ್ನಪುರ, ವಕೀಲ ಉಮೇಶ್, ವಿಶ್ವಮಾನವ ಮೈಸೂರು ವಿವಿ ನೌಕರರ ವೇದಿಕೆ ಅಧ್ಯಕ್ಷ ಆರ್.ವಾಸುದೇವ ಇನ್ನಿತರರು ಉಪಸ್ಥಿತರಿದ್ದರು.

Translate »