ಚಾ.ಬೆಟ್ಟದ ಭೂಕುಸಿತ: ದುರಸ್ತಿ ಕಾಮಗಾರಿ ತಿಂಗಳಲ್ಲಿ ಪ್ರಾರಂಭ
ಮೈಸೂರು

ಚಾ.ಬೆಟ್ಟದ ಭೂಕುಸಿತ: ದುರಸ್ತಿ ಕಾಮಗಾರಿ ತಿಂಗಳಲ್ಲಿ ಪ್ರಾರಂಭ

April 8, 2022

ಮೈಸೂರು, ಏ.7(ಆರ್‍ಕೆ)- ಚಾಮುಂಡಿಬೆಟ್ಟದಲ್ಲಿ ಉಂಟಾಗಿದ್ದ ಭೂ ಕುಸಿತವನ್ನು ದುರಸ್ತಿ ಮಾಡಿ ಸಂಚಾರಕ್ಕೆ ಅನುವು ಮಾಡಿಕೊಡಲು ತಿಂಗಳಲ್ಲಿ ಕಾಮಗಾರಿ ಆರಂಭವಾಗಲಿದೆ.

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಇಂಡಿಯನ್ ಇನ್ಸ್‍ಟಿ ಟ್ಯೂಟ್ ಆಫ್ ಸೈನ್ಸಸ್) ತಜ್ಞರ ವರದಿಯಂತೆ ವೈಜ್ಞಾನಿಕವಾಗಿ ಕಾಮ ಗಾರಿ ಕೈಗೊಳ್ಳಲು ಲೋಕೋಪಯೋಗಿ ಇಲಾಖೆಯು ಇ-ಪ್ರೊಕ್ಯೂರ್ ಮೆಂಟ್ ಮೂಲಕ ಅರ್ಹ ಗುತ್ತಿಗೆದಾರರಿಂದ ಟೆಂಡರ್ ಕರೆದಿದೆ. ಐಐಎಸ್ ನಿಂದಲೇ ತಾಂತ್ರಿಕ ಸಲಹೆ ಹಾಗೂ 9.75 ಕೋಟಿ ರೂ. ಅಂದಾಜು ವೆಚ್ಚ ತಯಾರಿಸಿದ್ದು, ಯಶಸ್ವಿ ಬಿಡ್ಡುದಾರರಿಗೆ ಕಾರ್ಯಾದೇಶ (ವರ್ಕ್ ಆರ್ಡರ್) ನೀಡಿ ತಿಂಗಳೊಳಗಾಗಿ ಕಾಮಗಾರಿ ಆರಂಭಿಸಲಾಗುವುದು ಎಂದು ಲೋಕೋಪಯೋಗಿ ಅಧಿಕಾರಿಗಳು ತಿಳಿಸಿದ್ದಾರೆ.

ಚಾಮುಂಡಿಬೆಟ್ಟದ ನಂದಿ ಬಳಿ ರಸ್ತೆಯ ಬಲ ಬದಿಯಲ್ಲಿ ಭಾರೀ ಮಳೆಯಿಂದ ಭೂಕುಸಿತ ಉಂಟಾಗಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಆ ಮಾರ್ಗ ಬ್ಯಾರಿಕೇಡ್ ಹಾಕಿ ಸಂಚಾರವನ್ನು ಬಂದ್ ಮಾಡಲಾಗಿತ್ತು.

ಭೂಮಿ ಕುಸಿದಿದ್ದ ಸ್ಥಳದ ಮಣ್ಣನ್ನು ತೆಗೆದು, ತಳಮಟ್ಟದಲ್ಲಿ ಕಾಂಕ್ರಿಟ್ ಬೇಸ್‍ಮೆಂಟ್ ಹಾಕಿ ಅದರ ಮೇಲೆ ಸುಭದ್ರವಾಗಿ ತಡೆಗೋಡೆ ನಿರ್ಮಿ ಸುವ ಬಗ್ಗೆ ಮೂರು ಬಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ವಿನೂತನ ತಂತ್ರಜ್ಞಾನ ಬಳಸಿ ಕಾಮಗಾರಿ ಕೈಗೊಳ್ಳುವ ಬಗ್ಗೆ ತಜ್ಞರು ವರದಿ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು. 2019ರಿಂದಲೂ ಚಾಮುಂಡಿಬೆಟ್ಟದ ಹಲವೆಡೆ ಮಳೆಗಾಲದಲ್ಲಿ ಭೂ ಕುಸಿತವಾಗುತ್ತಿತ್ತು. ಅಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುತ್ತಿದ್ದು, ಭಾರೀ ಮಳೆ ಬಿದ್ದ ಕಾರಣ ಕಳೆದ ವರ್ಷವೂ ಭೂ ಕುಸಿತ ಉಂಟಾಗಿತ್ತು. ಇಂತಹ ಘಟನೆ ಮರುಕಳಿಸದಂತೆ ತಡೆಯಲು ಹಾಗೂ ಉಂಟಾಗಿರುವ ಹಾನಿ ಸರಿಪಡಿಸಲು ಸರ್ಕಾರವು ಭಾರತೀಯ ವಿಜ್ಞಾನ ಸಂಸ್ಥೆ ತಜ್ಞರಿಗೆ ಪರಿಶೀಲಿಸಿ, ವರದಿ ಸಲ್ಲಿಸುವಂತೆ ಕೋರಿಕೊಂಡಿತ್ತು. ನಂದಿಗೆ ಹೋಗುವ ರಸ್ತೆಯಲ್ಲಿ ಭೂಕುಸಿದಿದ್ದ ಸ್ಥಳ ಪರಿಶೀಲಿಸಿ ಮಣ್ಣಿನ ಸ್ಯಾಂಪಲ್ ತೆಗೆದು ಲ್ಯಾಬೊರೇಟರಿಯಲ್ಲಿ ಪರೀಕ್ಷೆ ಮಾಡಿದ ನಂತರ ರಿಪೇರಿ ಮಾಡಿ ಯಥಾಸ್ಥಿತಿಗೆ ತರಲು ತಂತ್ರಜ್ಞಾನದ ಕಾಮಗಾರಿ ಕೈಗೊಳ್ಳಲು ತಗಲುವ ಅಂದಾಜು ವೆಚ್ಚ ತಯಾರಿಸಿದ ತಜ್ಞರು ಶಿಫಾರಸ್ಸಿನೊಂದಿಗೆ ಸಮಗ್ರ ವರದಿ ಸಲ್ಲಿಸಿದ್ದರು.

ಅದರಂತೆ ಅರ್ಹ ಗುತ್ತಿಗೆದಾರ ಸಂಸ್ಥೆಗಳಿಂದ ಇ-ಪ್ರೊಕ್ಯೂರ್‍ಮೆಂಟ್ ಮೂಲಕ ಟೆಂಡರ್ ಕರೆಯಲಾಗಿದ್ದು, ಷರತ್ತುಗಳನ್ವಯ ಯಶಸ್ವಿ ಬಿಡ್ಡುದಾ ರರಿಗೆ ಕಾಮಗಾರಿ ಒಪ್ಪಿಸಿ ಕಾರ್ಯಾದೇಶ ನೀಡಿದ ನಂತರ ಕೆಲಸ ಆರಂಭಿಸಲು ಲೋಕೋಪಯೋಗಿ ಇಲಾಖೆಯು ತಯಾರಿ ನಡೆಸುತ್ತಿದೆ.
ಮತ್ತೆ ಮಳೆ ಆರಂಭವಾಗುವಷ್ಟರಲ್ಲಿ ಕುಸಿದ ಸ್ಥಳವನ್ನು ಸರಿಪಡಿಸಿ, ಯಥಾಸ್ಥಿತಿ ರಸ್ತೆ ನಿರ್ಮಿಸಿದ ನಂತರ ಆ ಮಾರ್ಗದ ರಸ್ತೆಯನ್ನು ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Translate »