ರಫೇಲ್ ಯುದ್ಧ ವಿಮಾನ ಖರೀದಿ ಪ್ರಕರಣ: ತನಿಖೆಗೆ `ಸುಪ್ರೀಂ’ ನಕಾರ
ಮೈಸೂರು

ರಫೇಲ್ ಯುದ್ಧ ವಿಮಾನ ಖರೀದಿ ಪ್ರಕರಣ: ತನಿಖೆಗೆ `ಸುಪ್ರೀಂ’ ನಕಾರ

December 15, 2018

ನವದೆಹಲಿ: ರಫೇಲ್ ಯುದ್ಧ ವಿಮಾನ ಖರೀದಿ ಕುರಿತು ಯಾವುದೇ ತನಿಖೆ ಅಗತ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳುವ ಮೂಲಕ ಸುಪ್ರೀಂಕೋರ್ಟ್, ಕೇಂದ್ರದ ಎನ್‍ಡಿಎ ಸರ್ಕಾರ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.

ರಫೇಲ್ ಖರೀದಿಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದ್ದು, ನ್ಯಾಯಾಲಯದ ಮೇಲುಸ್ತುವಾರಿ ಯಲ್ಲಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಸಲ್ಲಿಸಲಾಗಿದ್ದ ಎಲ್ಲಾ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ. ಇದರಿಂದ ಪ್ರಧಾನಿ ಮೋದಿ ಅವರ ನೇತೃತ್ವದ ಸರ್ಕಾರಕ್ಕೆ ನಿರಾಳ. ಯುದ್ಧ ವಿಮಾನ ಖರೀದಿ ಒಪ್ಪಂದ ದಲ್ಲಿ ಭಾರೀ ಅವ್ಯವಹಾರ ನಡೆದಿದ್ದು, ತನಿಖೆ ನಡೆಸಬೇಕಿದೆ ಎಂದು ಹಿರಿಯ ವಕೀಲ ಪ್ರಶಾಂತ್ ಭೂಷಣ್, ವಕೀಲ ಎಂ.ಎಲ್.ಶರ್ಮಾ ಸೇರಿ ದಂತೆ ಹಲವರು ಅರ್ಜಿ ಸಲ್ಲಿಸಿದ್ದರು. ಅರ್ಜಿ ಗಳನ್ನು ಪರಿಶೀಲಿಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ನ್ಯಾಯ ಪೀಠ, ತೀರ್ಪನ್ನು ಡಿ.14ಕ್ಕೆ ಕಾಯ್ದಿರಿಸಿತ್ತು. ವಿಮಾನ ಖರೀದಿಯಲ್ಲಿ ತನಿಖೆಗೆ ಅಗತ್ಯವೆನಿಸುವಂತಹ ಯಾವುದೇ ಅಂಶಗಳು ಕಾಣುತ್ತಿಲ್ಲ. ಒಪ್ಪಂದದಲ್ಲಿ ಸಣ್ಣ ಸಂಶಯವೂ ಗೋಚರಿಸುತ್ತಿಲ್ಲ. ಯಾವುದೇ ರೀತಿಯ ಸಿದ್ಧತೆಗಳಿಲ್ಲದೆ ಒಂದು ದೇಶ ಇರಲು ಸಾಧ್ಯವಿಲ್ಲ. 126 ಯುದ್ಧ ವಿಮಾನಗಳನ್ನೇ ಖರೀದಿ ಮಾಡುವಂತೆ ಸರ್ಕಾರಕ್ಕೆ ನಾವು ಒತ್ತಾಯ ಮಾಡಲು ಸಾಧ್ಯವಿಲ್ಲ. ಪ್ರತಿಯೊಂದು ಅಂಶದಲ್ಲೂ ನ್ಯಾಯಾಲಯ ಪರಿಶೀಲನೆ ನಡೆಸುವುದು ಸರಿಯಲ್ಲ. ಬೆಲೆ ಹೋಲಿಕೆ ಮಾಡುವುದು ನ್ಯಾಯಾಲಯದ ಕೆಲಸವೂ ಅಲ್ಲ ಎಂದು ತ್ರಿಸದಸ್ಯ ನ್ಯಾಯಪೀಠ ಹೇಳಿದೆ.

ರಕ್ಷಣಾ ಸಚಿವೆ: ಸುಪ್ರೀಂಕೋರ್ಟ್ ಕ್ರಮವನ್ನು ಸ್ವಾಗತಿಸಿರುವ ರಕ್ಷಣಾ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಈಗ ರಫೇಲ್ ಖರೀದಿ ವಿವಾದಕ್ಕೆ ವಿರಾಮ ಸಿಕ್ಕಂತಾಗಿದೆ ಎಂದಿದ್ದಾರೆ. ಇನ್ನಾದರೂ ವಿರೋಧ ಪಕ್ಷಗಳು ವೃಥಾ ಆರೋಪ ಮಾಡುವುದನ್ನು ನಿಲ್ಲಿಸಲಿ ಎಂದು ಹೇಳಿದ್ದಾರೆ.

ಬಿಜೆಪಿ ಅಧ್ಯಕ್ಷ: ಅಮಿತ್ ಶಾ ಅವರು, ರಫೇಲ್ ಬಗ್ಗೆ ಸದಾ ಆರೋಪ ಮಾಡುತ್ತಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಸುಪ್ರೀಂ ಕಪಾಳ ಮೋಕ್ಷ ಮಾಡಿದೆ ಎಂದು ಅಣಕವಾಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರು ನಮ್ಮ ಮೇಲೆ ಸುಳ್ಳಿನ ಕಂತೆಯನ್ನೇ ಹೆಣೆದರು. ಅದಕ್ಕೆ ಕೋರ್ಟ್ ತಕ್ಕ ಉತ್ತರ ನೀಡಿದೆ.

ಯುದ್ಧ ವಿಮಾನ ಖರೀದಿ ಸಂಬಂಧ ತೀರ್ಪನ್ನು ಸ್ವಾಗತಿಸುವೆ. ಸುಳ್ಳು ಹೇಳಿ ದೇಶವನ್ನು ದಾರಿ ತಪ್ಪಿಸುವ, ಯೋಧರಲ್ಲಿ ಅನುಮಾನ ಹುಟ್ಟು ಹಾಕುವ ಯತ್ನ ಮಾಡಿದ ರಾಹುಲ್ ಗಾಂಧಿ ಕ್ಷಮೆ ಯಾಚಿಸಬೇಕು ಎಂದು ಶಾ ಆಗ್ರಹಿಸಿದ್ದಾರೆ.
ರಫೇಲ್ ಡೀಲ್ ಬಗ್ಗೆ ಭಾಷಣ ಮಾಡುತ್ತಿದ್ದ ರಾಹುಲ್‍ಗೆ ಎಲ್ಲಿಂದ ಮಾಹಿತಿ ಬರುತ್ತಿತ್ತು? 2006ರಲ್ಲಿ ಆರಂಭವಾದ ರಫೇಲ್ ಡೀಲ್ ಬಗ್ಗೆ 2014ರವರೆಗೂ ಕಾಂಗ್ರೆಸ್ ಸರಕಾರ ಕ್ರಮ ಕೈಗೊಳ್ಳಲಿಲ್ಲ ಏಕೆ? ಇಡೀ ವ್ಯವಹಾರವನ್ನು ಭಾರತ ಮತ್ತು ಫ್ರಾನ್ಸ್ ಸರಕಾರದ ಮಟ್ಟದಲ್ಲೇ ಮಾಡಿದ್ದೇವೆ. ಆದರೆ ಕಾಂಗ್ರೆಸ್ ಯಾವುದೇ ಯೋಜನೆಗಳು ಈ ರೀತಿ ಆಗಿಲ್ಲವೇಕೆ? ಕಾಂಗ್ರೆಸ್ ಸರಕಾರ ರಫೇಲ್ ಡೀಲ್‍ನಲ್ಲಿ ಮಧ್ಯವರ್ತಿಯನ್ನು ಇಟ್ಟುಕೊಂಡಿದ್ದು ಏಕೆ? ಎಂದು ಶಾ ಪ್ರಶ್ನಿಸಿದ್ದಾರೆ.

ವಿತ್ತ ಸಚಿವ: ರಫೇಲ್ ಡೀಲ್‍ನಲ್ಲಿ ದೇಶದ ಭದ್ರತೆ ಹಾಗೂ ಆರ್ಥಿಕ ಹಿತ ಎರಡನ್ನೂ ಕಾಪಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಕೇಂದ್ರ ಸರಕಾರ ರಫೇಲ್ ವಿಚಾರದಲ್ಲಿ ಪಾರದರ್ಶಕವಾಗಿದೆ. ದೇಶದ ರಕ್ಷಣೆ ವಿಚಾರದಲ್ಲಿ ರಾಜೀ ಪ್ರಶ್ನೆಯೇ ಇಲ್ಲ. ರಫೇಲ್ ಯುದ್ಧ ವಿಮಾನಗಳು ದೇಶದ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಯುದ್ಧ ವಿಮಾನದಲ್ಲಿ ಏನೆಲ್ಲ ವ್ಯವಸ್ಥೆಗಳಿರಲಿದೆ ಎಂಬುದನ್ನು ಸುರಕ್ಷತೆಯ ದೃಷ್ಟಿಯಿಂದ ಸಾರ್ವಜನಿಕಗೊಳಿಸಲಾಗುವುದಿಲ್ಲ. ಇದಕ್ಕಾಗಿಯೇ ಕೋರ್ಟ್‍ಗೆ ಸಲ್ಲಿಸಿದ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನೀಡಲಾಗಿತ್ತು ಎಂದಿದ್ದಾರೆ.

ರಫೇಲ್ ಬಗ್ಗೆ ಚರ್ಚೆಗೆ ಸರಕಾರ ಸಿದ್ಧವಿದೆ. ದೇಶದ ಭದ್ರತೆಯ ಕುರಿತ ವಿಚಾರವನ್ನು ವಿವಿಧ ಸಮಿತಿಗಳಲ್ಲಿ ಚರ್ಚೆ ನಡೆಸಿ ನಿರ್ಧಾರ ತೆಗೆದುಕೊಳ್ಳಲು ಇದು ಕಾದಂಬರಿ ಬರೆಯುವ ವಿಚಾರಗಳಲ್ಲ ಎಂದು ಜೇಟ್ಲಿ ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ: ಪ್ರಧಾನಿ ನರೇಂದ್ರ ಮೋದಿ ಅವರ ಭ್ರಷ್ಟಾಚಾರ ನಿರೂಪಿಸಿಯೇ ತೀರುತ್ತೇನೆ. ರಫೇಲ್ ಡೀಲ್‍ನಲ್ಲಿ ಭ್ರಷ್ಟಾಚಾರ ನಡೆದಿರುವುದು ನಿಜ. ಸ್ನೇಹಿತ ಅನಿಲ್ ಅಂಬಾನಿಗೆ ಪ್ರಧಾನಿ ಮೋದಿ ನೆರವು ನೀಡಿದ್ದಾರೆ ಎಂಬುದನ್ನು ಸಾಬೀತುಪಡಿಸುತ್ತೇನೆ. 1 ವಿಮಾನದ ಬೆಲೆ 526 ಕೋಟಿಯಿಂದ 1,600 ಕೋಟಿ ರೂ.ಗೆ ಏರಿದ್ದು ಹೇಗೆ? ರಫೇಲ್ ಡೀಲ್ ಕುರಿತಾದ ಸಿಎಜಿ ವರದಿಯನ್ನು ಸರಕಾರ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ನೀಡಿರುವುದಾಗಿ ಕೋರ್ಟ್‍ಗೆ ಹೇಳಿದೆ. ಆದರೆ, ಆ ವರದಿ ಇನ್ನೂ ಪಿಎಸಿ ಕೈಗೆ ಸೇರಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಕ್ಷೇಪಿಸಿದ್ದಾರೆ.

Translate »