ಚಾಮುಂಡಿಬೆಟ್ಟ, ಅರಮನೆ ದೇವಾಲಯಗಳ ಸಿಬ್ಬಂದಿ ಮುಷ್ಕರ ಆರಂಭ
ಮೈಸೂರು

ಚಾಮುಂಡಿಬೆಟ್ಟ, ಅರಮನೆ ದೇವಾಲಯಗಳ ಸಿಬ್ಬಂದಿ ಮುಷ್ಕರ ಆರಂಭ

December 15, 2018

ಮೈಸೂರು: ಆರನೇ ವೇತನ ಶ್ರೇಣಿ ಜಾರಿಗೊಳಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಚಾಮುಂಡಿಬೆಟ್ಟ ಸೇರಿದಂತೆ ಅರಮನೆಯ ದೇವಾಲಯಗಳ ಪುರೋಹಿತರು ಹಾಗೂ ವಿವಿಧ ದರ್ಜೆ ನೌಕರರು ಚಾಮುಂಡೇಶ್ವರಿ ದೇವಾಲಯದ ಮುಂದೆ ಶುಕ್ರ ವಾರದಿಂದ ಅನಿರ್ಧಿಷ್ಟಾವಧಿ ಸತ್ಯಾಗ್ರಹ ಆರಂಭಿಸಿದ್ದಾರೆ.

ವೇತನ ಪರಿಷ್ಕರಣೆ ಮಾಡುವುದರೊಂದಿಗೆ ಕೆಲ ಬೇಡಿಕೆ ಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುವುದಾಗಿ ಚಾಮುಂಡೇಶ್ವರಿ ಹಾಗೂ ಸಮೂಹ ದೇವಾಲಯ ಗಳ ನೌಕರರ ಸಂಘ ಕಳೆದ 15 ದಿನದ ಹಿಂದೆಯೇ ಎಚ್ಚರಿಕೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ದೇವಾಲಯಗಳಲ್ಲಿ ಮುಂಜಾನೆಯ ಪೂಜೆ ನೆರವೇರಿಸಿ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ 23 ದೇವಾಲಯಗಳ ಅರ್ಚಕರು ಹಾಗೂ ಡಿ ಗ್ರೂಪ್ ನೌಕರರು ದೇವಾಲಯದ ಮುಂಭಾಗ ಧರಣಿ ಆರಂಭಿಸಿದರು.

ಪ್ರಸಿದ್ಧ ಚಾಮುಂಡೇಶ್ವರಿ ದೇವಾಲಯದ ಮುಖ್ಯದ್ವಾರದ ಮುಂದೆ ಸತ್ಯಾಗ್ರಹ ಕೈಗೊಂಡಿರುವ ಸಿಬ್ಬಂದಿ ಭಕ್ತರಿಗೆ ಅಡಚಣೆ ಉಂಟಾಗುತ್ತಿರುವುದಕ್ಕೆ ವಿಷಾದ ಕೋರುವುದಾಗಿ ಬ್ಯಾನರ್ ಹಾಕಿ, ಬೆಂಬಲ ಯಾಚಿಸಿದ್ದಾರೆ.

ದೇವಾಲಯ ಮುಂಭಾಗದಲ್ಲಿ 23 ದೇವಾಲಯಗಳ 100ಕ್ಕೂ ಹೆಚ್ಚು ಸಿಬ್ಬಂದಿ ಧರಣಿ ಕುಳಿತಿರುವ ಹಿನ್ನೆಲೆಯಲ್ಲಿ ನಾಲ್ಕು ಭಾಗದಲ್ಲಿಯೂ ಬ್ಯಾರಿಕೇಡ್ ಅಳವಡಿಸಿ, ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ. ಇದರಿಂದ ಬೆಟ್ಟಕ್ಕೆ ಬಂದ ಭಕ್ತರು ದೇವಾಲಯದ ಮುಂದೆ ಕಿಷ್ಕಿಂದೆಯಂತಹ ಸ್ಥಳದಲ್ಲಿ ಮುಂದೆ ಹೋಗಲು ಪರದಾಡುವಂತಾಗಿತ್ತು. ದೇವಾಲಯದಲ್ಲಿ ಪೂಜಾ ಸೇವೆ ಇಲ್ಲದ ಕಾರಣ ದೇವಾಲಯದ ಮುಂಭಾಗದಲ್ಲಿಯೇ ಭಕ್ತರು ತಾವೇ ಪೂಜೆ ಮಾಡಿಕೊಳ್ಳುತ್ತಿದ್ದ ದೃಶ್ಯ ಕಂಡುಬಂತು.

ಚಾಮುಂಡಿಬೆಟ್ಟದಲ್ಲಿರುವ ಮೂರು ದೇವಾಲಯ, ಉತ್ತನಹಳ್ಳಿಯ ಜ್ವಾಲಾಮುಖಿ ತ್ರಿಪುರ ಸುಂದರಿ ದೇವಾ ಲಯ, ಅರಮನೆಯಲ್ಲಿರುವ 19 ದೇವಾಲಯಗಳ ಪುರೋ ಹಿತರು ಹಾಗೂ ವಿವಿಧ ದರ್ಜೆಯ ನೌಕರರು ಕಳೆದ ಹಲವು ವರ್ಷಗಳಿಂದ ತಮ್ಮ ಸಮಸ್ಯೆಗಳನ್ನು ಬಗೆಹರಿಸುವಂತೆ ಸರ್ಕಾ ರಕ್ಕೆ ಮನವಿ ಸಲ್ಲಿಸುತ್ತಲೇ ಬರುತ್ತಿದ್ದೇವೆ. ಆದರೆ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಸರ್ಕಾರ ಆರನೇ ವೇತನ ಶ್ರೇಣಿಯನ್ನು ಜಾರಿಗೆ ತರಬೇಕು. ಹೆಚ್ಚುವರಿ ತುಟ್ಟಿಭತ್ಯೆ ನೀಡುವಂತೆ ಖಾಯಂ ಆದೇಶ ನೀಡಬೇಕು. ವಾರ್ಷಿಕ ಬೋನಸ್ (1 ತಿಂಗಳ ವೇತನ) ಕ್ರಮ ಕೈಗೊಳ್ಳಬೇಕು. ತಾತ್ಕಾಲಿಕ ನೌಕರರನ್ನು ಖಾಯಂ ಮಾಡಬೇಕು. ಮೃತಪಟ್ಟ ನೌಕರರ ಕುಟುಂಬದ ಸದಸ್ಯರಿಗೆ ಇತರೆ ಇಲಾಖೆಯಲ್ಲಿ ನೀಡುವಂತೆ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡಬೇಕು. ದೇವಾಲಯಗಳ ಸಿಬ್ಬಂದಿಗಳಿಗೂ ವೈದ್ಯಕೀಯ ಸೌಲಭ್ಯ ಕಲ್ಪಿಸಬೇಕು. ದೇವಾಲಯದ ನೌಕರರು ಮೃತಪಟ್ಟರೆ ಐದು ಲಕ್ಷ ರೂ. ಪರಿಹಾರ ನೀಡಬೇಕು. ಚಾಮುಂಡೇಶ್ವರಿ ದೇವಾಲಯದ ನೌಕರರ ವೇತನವನ್ನು ಬೆಟ್ಟದಲ್ಲಿರುವ ಕಾವೇರಿ ಗ್ರಾಮೀಣ ಬ್ಯಾಂಕ್ ಮೂಲಕ ಬಟವಾಡೆ ಮಾಡ ಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಗರುಡ ಕಂಬದ ಬಳಿಯೇ: ಮುಂಜಾನೆ ತಾಯಿ ಚಾಮುಂಡೇಶ್ವರಿ ದೇವಿಗೆ ಅಭಿಷೇಕ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು. ನಂತರ ಅರ್ಚಕರು ಸೇರಿದಂತೆ ಸಿಬ್ಬಂದಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿ ದ್ದರಿಂದ ಭಕ್ತರಿಗೆ ಗರ್ಭಗುಡಿಯ ಮುಂಭಾಗದ ಪ್ರಾಂಗಣ ಪ್ರವೇಶಕ್ಕೂ ಅವಕಾಶ ನೀಡದೆ ಗರುಡಗಂಬದ ಬಳಿ ದೇವಿಯ ದರ್ಶನ ಪಡೆಯಲು ಅವಕಾಶ ನೀಡಲಾಗಿತ್ತು.

ಗರ್ಭ ಗುಡಿ ಬಳಿ: ದೇವಾಲಯ ಮುಂಭಾಗದ ಪ್ರತಿಭಟನೆ ನಡೆಸಲು ಅನುಮತಿ ಪಡೆದಿದ್ದ ದೇವಾಲಯದ ಸಿಬ್ಬಂದಿ ಗಳಲ್ಲಿ ಕೆಲವರು, ಚಾಮುಂಡೇಶ್ವರಿ ದೇವಾಲಯದ ಗರ್ಭ ಗುಡಿಯ ಪ್ರಾಂಗಣದ ಮುಂಭಾಗದಲ್ಲಿ ಧರಣಿ ನಡೆಸಲು ಪ್ರಯತ್ನಿಸಿದರು. ಆದರೆ ಕೆ.ಆರ್.ಠಾಣೆಯ ಇನ್ಸ್‍ಪೆಕ್ಟರ್ ಪ್ರಕಾಶ್ ಗರ್ಭಗುಡಿಯ ಬಳಿ ಪ್ರತಿಭಟಿಸಿದರೆ, ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಚಾಮುಂಡೇಶ್ವರಿ ಹಾಗೂ ಸಮೂಹ ದೇವಾಲಯಗಳ ನೌಕರರ ಸಂಘದ ಅಧ್ಯಕ್ಷ ಶ್ರೀನಿವಾಸ್, ಕಾರ್ಯದರ್ಶಿ ವಿಶ್ವನಾಥ್, ಖಜಾಂಜಿ ಗೋಪಾಲ್ ಐಯ್ಯರ್, ಉಪಾಧ್ಯಕ್ಷೆ ಸುಶೀಲಮ್ಮ, ವೆಂಕಟೇಶ್ ಸೇರಿದಂತೆ 150ಕ್ಕೂ ಹೆಚ್ಚು ಮಂದಿ ಉಪಸ್ಥಿತರಿದ್ದರು. ನೌಕರರ ಪ್ರತಿಭಟನೆಗೆ ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಬೆಂಬಲ ವ್ಯಕ್ತಪಡಿಸಿದರು.

Translate »