ಗೋಪುರ ಶಂಕುಸ್ಥಾಪನೆಗೆ ಬಂದವರು  ಸ್ಮಶಾನ ಸೇರಿದರು…!
ಚಾಮರಾಜನಗರ, ಮೈಸೂರು

ಗೋಪುರ ಶಂಕುಸ್ಥಾಪನೆಗೆ ಬಂದವರು ಸ್ಮಶಾನ ಸೇರಿದರು…!

December 15, 2018

ಹನೂರು: ತಾಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಸುಳ ವಾಡಿ ಕುಚ್‍ಗುತ್ ಮಾರಮ್ಮನ ದೇವಸ್ಥಾನದ ಗೋಪುರ ಶಂಕುಸ್ಥಾಪನೆ ಸಮಾರಂಭದಲ್ಲಿ ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡು ಪ್ರಸಾದ ಸೇವಿಸಿದವರಲ್ಲಿ 13ಕ್ಕೂ ಹೆಚ್ಚು ಮಂದಿ ಸಾವ ನ್ನಪ್ಪಿ, 70ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ.

ಸುಳವಾಡಿ ಕಿಚ್‍ಗುತ್ ದೇವಸ್ಥಾನವು ಮಾರ್ಟಳ್ಳಿ ಸಮೀಪ ಕಾಡಂಚಿನಲ್ಲಿದ್ದು, ಸುತ್ತಮುತ್ತಲಿನ ಅನೇಕ ಗ್ರಾಮಸ್ಥರು ಈ ದೇವಸ್ಥಾನಕ್ಕೆ ಆಗಮಿಸುತ್ತಾರೆ. ದೇವಸ್ಥಾನ ನಿರ್ವಹಣೆಗೆ ಟ್ರಸ್ಟ್‍ವೊಂದನ್ನೂ ಕೂಡ ರಚಿಸಿಕೊಳ್ಳಲಾಗಿದ್ದು, ದೇವಾಲಯವು ಅಭಿವೃದ್ಧಿ ಹೊಂದುತ್ತಿದೆ. ಈ ದೇವಸ್ಥಾನಕ್ಕೆ ಗೋಪುರ ನಿರ್ಮಿಸ ಬೇಕೆಂಬ ಉದ್ದೇಶದಿಂದ ಇಂದು ಶಂಕು ಸ್ಥಾಪನೆ ಸಮಾರಂಭ ಏರ್ಪಡಿಸಲಾಗಿತ್ತು.

ಸಮಾರಂಭವನ್ನು ಮಲೆಮಹದೇಶ್ವರ ಬೆಟ್ಟದ ಸಾಲೂರು ಮಠಾಧೀಶರಾದ ಶ್ರೀ ಗುರುಸ್ವಾಮಿ ಅವರು ನೆರವೇರಿಸಿದರು. ಸಮಾರಂಭಕ್ಕೆ ಮಾರ್ಟಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸಾವಿತ್ರಿ ಬಾಯಿ ಸೇರಿದಂತೆ ಸ್ಥಳೀಯ ರಾಜಕೀಯ ಮುಖಂಡರೂ ಆಗಮಿಸಿದ್ದರು. ಪ್ರಸಾದ ವಿನಿ ಯೋಗಕ್ಕಾಗಿ ಒಂದೂವರೆ ಕ್ವಿಂಟಾಲ್ ಅಕ್ಕಿ ಉಪಯೋಗಿಸಿ ಟೊಮೊಟೋ ಬಾತ್ ಮತ್ತು ಪಂಚಾಮೃತ ಸಿದ್ಧಪಡಿಸಲಾಗಿತ್ತು.

ಸಾಲೂರು ಮಠಾಧೀಶರಾದ ಗುರು ಸ್ವಾಮಿ ಅವರು ಶಂಕುಸ್ಥಾಪನೆ ನೆರವೇರಿ ಸಿದ ನಂತರ ಮಹಾಮಂಗಳಾರತಿ ಮಾಡಿ ಬೆಳಿಗ್ಗೆ ಸುಮಾರು 9.30ರಲ್ಲಿ ಟೊಮೊಟೋ ಬಾತ್ ಮತ್ತು ಪಂಚಾಮೃತ ಪ್ರಸಾದ ವಿನಿ ಯೋಗಿಸಲಾಯಿತು. ಸುಮಾರು 150 ಮಂದಿ ಭಕ್ತರು ಈ ಸಮಾರಂಭದಲ್ಲಿ ಭಾಗ ವಹಿಸಿದ್ದರಾದರೂ, ಸುಮಾರು 80ಕ್ಕೂ ಹೆಚ್ಚು ಮಂದಿ ಭಕ್ತರು ಟೊಮೊಟೋ ಬಾತ್ ಪ್ರಸಾದ ವನ್ನು ಸ್ವೀಕರಿಸಿದರು. ಟೊಮೊಟೋ ಬಾತ್ ಸೇವಿಸಿದ ಕೆಲ ನಿಮಿಷಗಳಲ್ಲೇ ಕಣ್ಣು ಮತ್ತು ಹೊಟ್ಟೆ ಉರಿ, ವಾಂತಿ-ಭೇದಿ ಕಾಣಿಸಿ ಕೊಂಡಿದೆ. ಪ್ರಸಾದ ಸಿದ್ಧಪಡಿಸಿದ ಬಾಣಸಿಗನ ಪುತ್ರಿ 12 ವರ್ಷದ ಅನಿತಾ ದೇವಸ್ಥಾನದ ಮುಂಭಾಗದಲ್ಲೇ ಕುಸಿದು ಬಿದ್ದಿದ್ದಾಳೆ. ದನ ಮೇಯಿಸುತ್ತಿದ್ದ ಅಣ್ಣಯ್ಯಪ್ಪ ದೇವ ಸ್ಥಾನಕ್ಕೆ ಬಂದು ಪ್ರಸಾದ ಸ್ವೀಕರಿಸಿ ತೆರಳಿದ ವನು ಅನತಿ ದೂರದಲ್ಲೇ ಪ್ರಜ್ಞಾಹೀನನಾಗಿ ಬಿದ್ದಿದ್ದ. ಅನಿತಾಳನ್ನು ರಾಮಾಪುರ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯುವಷ್ಟರಲ್ಲಿ ಆಕೆ ಅಸು ನೀಗಿದ್ದಳು. ಅಣ್ಣಯ್ಯಪ್ಪ ಕಾಮಗೆರೆಯ ಹೋಲಿ ಕ್ರಾಸ್ ಆಸ್ಪತ್ರೆಯಲ್ಲಿ ಮೃತನಾದ.

ತಮಿಳುನಾಡಿನ ಓಂ ಶಕ್ತಿ ದೇವಸ್ಥಾನಕ್ಕೆ ಮಾಲೆ ಹಾಕಿದ್ದ ಮಾಲಾಧಾರಿಗಳು ದೇವ ಸ್ಥಾನದ ಬಳಿಯೇ ತೀವ್ರವಾಗಿ ಅಸ್ವಸ್ಥಗೊಂಡು ಕಾಮಗೆರೆ ಹೋಲಿ ಕ್ರಾಸ್ ಆಸ್ಪತ್ರೆಯತ್ತ ಧಾವಿ ಸಿದರು. ಮಧ್ಯಾಹ್ನದ ವೇಳೆಗೆ ವಿಷ ಪ್ರಸಾದ ಸೇವಿಸಿದ್ದ ನೂರಾರು ಭಕ್ತರು ಹೋಲಿ ಕ್ರಾಸ್ ಆಸ್ಪತ್ರೆಯಲ್ಲಿ ಜಮಾಯಿಸಿದ ಹಿನ್ನೆಲೆ ಯಲ್ಲಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಆತಂಕಕ್ಕೊಳಗಾಗಿ ಆರೋಗ್ಯ ಇಲಾಖಾ ಧಿಕಾರಿಗಳು ಮತ್ತು ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ಅದಾಗಲೇ ಇಬ್ಬರು ಮೃತ ಪಟ್ಟರು. 108 ಆಂಬುಲೆನ್ಸ್‍ಗೆ ಕರೆಯ ಮೇಲೆ ಕರೆ ಹೋಗುತ್ತಿದ್ದಂತೆಯೇ ಚಾಮರಾಜ ನಗರ ಜಿಲ್ಲೆಯ ಎಲ್ಲಾ ಆಂಬುಲೆನ್ಸ್‍ಗಳೂ ಕಾಮಗೆರೆಯತ್ತ ದೌಡಾಯಿಸಿದವು. ಡಿಎಫ್‍ಓ ಮತ್ತು ಟಿಎಫ್‍ಓ ಅವರುಗಳು ಆಸ್ಪತ್ರೆಯಿಂದ ಮಾಹಿತಿ ದೊರೆಯುತ್ತಿದ್ದಂತೆಯೇ ಹನೂರು ಮತ್ತು ಕೊಳ್ಳೇಗಾಲ ತಾಲೂಕಿನ ಎಲ್ಲಾ ಪ್ರಾಥ ಮಿಕ ಆರೋಗ್ಯ ಕೇಂದ್ರಗಳ ವೈದ್ಯರನ್ನು ಕಾಮಗೆರೆಗೆ ತೆರಳುವಂತೆ ಸೂಚಿಸಿದರು. ಕೊಳ್ಳೇಗಾಲ ಪಟ್ಟಣದ ಖಾಸಗಿ ವೈದ್ಯರು ಸ್ವಯಂಪ್ರೇರಿತರಾಗಿ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ಬಂದು ಅಸ್ವಸ್ಥರ ಸೇವೆಗೆ ನಿಂತರು.

ಕಾಮಗೆರೆ ಆಸ್ಪತ್ರೆಯಲ್ಲಿದ್ದ 6 ವೆಂಟಿ ಲೇಟರ್‍ಗಳಲ್ಲಿ ಅಸ್ವಸ್ಥರನ್ನು ಇಟ್ಟ ನಂತರ ತುರ್ತು ನಿಗಾ ಘಟಕದಲ್ಲಿ 12 ಮಂದಿ ಯನ್ನು ದಾಖಲಿಸಿ, ಬರುತ್ತಿದ್ದ ಎಲ್ಲರಿಗೂ ಪ್ರಥಮ ಚಿಕಿತ್ಸೆ ಕೊಡುತ್ತಾ ಆಂಬುಲೆನ್ಸ್ ಗಳು ಒಂದರ ಹಿಂದೆ ಒಂದು ಬರುತ್ತಿದ್ದಂ ತೆಯೇ ಅಸ್ವಸ್ಥರನ್ನು ಕೊಳ್ಳೇಗಾಲ ಮತ್ತು ಮೈಸೂರಿಗೆ ರವಾನಿಸಲಾಯಿತು.

ಇಬ್ಬರು ಪೊಲೀಸ್ ವಶಕ್ಕೆ

ಹನೂರು: ಸುಳವಾಡಿ ಕಿಚ್‍ಗುತ್ ದೇವಸ್ಥಾನದಲ್ಲಿ ವಿಷಮಿಶ್ರಣ ಪ್ರಸಾದ ಸೇವಿಸಿ ಭಕ್ತರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ. ದೇವ ಸ್ಥಾನದ ಪ್ರಮುಖ ಟ್ರಸ್ಟಿಯಾಗಿರುವ ಗ್ರಾಪಂ ಸದಸ್ಯ ಚಿನ್ನತ್ ಮತ್ತು ವ್ಯವಸ್ಥಾಪಕ ಮಾದೇಶ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದೇವಸ್ಥಾನದ ಗೋಪುರ ಶಂಕುಸ್ಥಾಪನೆ ಸಮಾ ರಂಭದ ಸಂಪೂರ್ಣ ಉಸ್ತುವಾರಿಯನ್ನು ವಹಿಸಿದ್ದ ಇವರಿಬ್ಬರೂ ಪ್ರಸಾದ ಸೇವಿಸದೇ ಇದ್ದದ್ದು ಹಾಗೂ ತಮ್ಮ ಮೊಬೈಲ್‍ಗಳನ್ನು ಅವರುಗಳು ಸ್ವಿಚ್ ಆಫ್ ಮಾಡಿಕೊಂಡಿದ್ದು, ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಪ್ರಸಾದಕ್ಕೆ ವಿಷ ಬೆರೆಸಿದವರು ಯಾರು? ಎಂಬುದು ಈವರೆವಿಗೂ ಪತ್ತೆಯಾಗಿಲ್ಲ. ದೇವಸ್ಥಾನ ಆಡಳಿತ ಮಂಡಳಿಯಲ್ಲಿ ವೈಮನಸ್ಸು ಇತ್ತು ಎಂದು ಹೇಳಲಾಗಿದ್ದು, ಇದರ ಬಗ್ಗೆಯೂ ಕೂಡ ಪೊಲೀಸರು ಇವರಿಬ್ಬರನ್ನು ವಿಚಾರಿಸುತ್ತಿದ್ದಾರೆ.

ಸಾಲೂರು ಶ್ರೀಗಳು ಅದೃಷ್ಟವಶಾತ್ ಬಚಾವ್

ಹನೂರು: ಸುಳವಾಡಿ ಕಿಚ್‍ಗುತ್ ದೇವಸ್ಥಾನದ ಗೋಪುರ ಶಂಕುಸ್ಥಾಪನೆ ಸಮಾರಂಭ ನೆರವೇರಿಸಿದ ಸಾಲೂರು ಮಠಾಧೀಶರಾದ ಶ್ರೀ ಗುರುಸ್ವಾಮಿ ಅವರ ಸುಸ್ತು ಪ್ರಾಣ ಉಳಿಸಿದೆ. ಸುಸ್ತಿನ ಕಾರಣದಿಂದ ಟೊಮೊಟೋ ಬಾತ್ ಪ್ರಸಾದ ಸೇವಿಸದೇ ಇದ್ದುದರಿಂದ ಅವರು ಅದೃಷ್ಟವ ಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಹಾಮಂಗಳಾರತಿ ಮುಗಿಯುತ್ತಿದ್ದಂತೆಯೇ ಗುರುಸ್ವಾಮಿ ಅವರಿಗೆ ಟೊಮೊಟೋ ಬಾತ್ ಪ್ರಸಾದ ಮತ್ತು ಪಂಚಾಮೃತ ನೀಡಲಾಗಿದೆ. ಆದರೆ ಅವರು `ನನಗೆ ಯಾಕೋ ಸುಸ್ತಾಗ್ತಿದೆ. ಆಮೇಲೆ ತಿಂತೀನಿ’ ಎಂದು ಹೇಳಿ ಸ್ವಲ್ಪ ಪಂಚಾಮೃತವನ್ನು ಮಾತ್ರ ಬಾಯಿಗೆ ಹಾಕಿಕೊಂಡು ಹೊರಟು ಹೋದರು ಎಂದು ಸ್ಥಳದಲ್ಲಿದ್ದ ವ್ಯಕ್ತಿಯೋರ್ವರು ತಿಳಿಸಿದ್ದಾರೆ. ಒಂದು ವೇಳೆ ಅವರು ಟೊಮೊಟೋ ಬಾತ್ ಪ್ರಸಾದ ಸ್ವೀಕರಿಸಿ ಬಿಟ್ಟಿದ್ದರೆ ವಯೋವೃದ್ಧರಾಗಿರುವ ಅವರನ್ನು ಜೀವಂತ ಉಳಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ದೇವರ ಕೃಪೆಯಿಂದ ಅವರು ಬದುಕುಳಿದ್ದಾರೆ ಎಂದು ಆ ಭಕ್ತರು ತಿಳಿಸಿದ್ದಾರೆ.

ಪ್ರಸಾದದಲ್ಲಿ ವಿಷಮಿಶ್ರಣ ದೃಢಪಡಿಸಿದ ವೈದ್ಯರು

ಹನೂರು: ಮಾರ್ಟಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸುಳವಾಡಿ ಕಿಚ್‍ಗುತ್ ಮಾರಮ್ಮನ ದೇವಸ್ಥಾನ ಪ್ರಸಾದದಲ್ಲಿ ವಿಷ ಬೆರೆಸಲಾಗಿತ್ತು ಎಂಬುದನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ದೃಢಪಡಿಸಿದ್ದಾರೆ.

ತೀವ್ರವಾಗಿ ಅಸ್ವಸ್ಥಗೊಂಡು ಆಸ್ಪತ್ರೆಗೆ ಆಗಮಿಸಿದ ರೋಗಿಗಳು ಸೇವಿಸಿದ ಆಹಾರ ದಲ್ಲಿ ವಿಷ ಬೆರೆಸಲಾಗಿದೆ. ಆದರೆ ಅದು ಯಾವ ವಿಷ? ಎಂಬುದು ವಿಧಿ-ವಿಜ್ಞಾನ ಪ್ರಯೋಗಾಲಯದ ವರದಿಯ ನಂತರ ತಿಳಿಯಲಿದೆ ಎಂದು ಹೇಳಿದ್ದಾರೆ.
ಭಕ್ತಾದಿಗಳು ಸೇವಿಸಿ ಬಿಸಾಡಿದ್ದ ಟೊಮೊಟೋ ಬಾತ್ ಸೇವಿಸಿದ ಸುಮಾರು 150ಕ್ಕೂ ಹೆಚ್ಚು ಕಾಗೆಗಳು ಹಾಗೂ ನಾಲ್ಕೈದು ನಾಯಿಗಳು ಸ್ಥಳದಲ್ಲೇ ಸಾವನ್ನ ಪ್ಪಿರುವ ದೃಶ್ಯಗಳು ಕಂಡುಬಂದಿದೆ. ಸಹಜವಾಗಿ ಹಳಸಿದ ಅಥವಾ ಕಲುಷಿತವಾದ ಆಹಾರವನ್ನು ಸೇವಿಸಿದರೂ ಪ್ರಾಣಿ, ಪಕ್ಷಿಗಳು ಸಾವನ್ನಪ್ಪುವುದು ಅಪರೂಪ. ಹಾಗಿದ್ದಾಗ ಸೇವಿಸಿದ ತಕ್ಷಣವೇ ಕಾಗೆಗಳು ಮತ್ತು ನಾಯಿಗಳು ಸಾವನ್ನಪ್ಪಿರುವುದು ಟೊಮೊಟೋ ಬಾತ್‍ನಲ್ಲಿ ವಿಷ ಬೆರೆಸಿರುವುದಕ್ಕೆ ಪುಷ್ಠಿ ನೀಡುತ್ತದೆ.

ವಿಷ ಪ್ರಸಾದ: ತನಿಖೆಗೆ ಭಾರತೀಶಂಕರ್ ಆಗ್ರಹ

ಮೈಸೂರು: ಹದಿಮೂರಕ್ಕೂ ಅಧಿಕ ಮಂದಿಯನ್ನು ಬಲಿ ತೆಗೆದು ಕೊಂಡ, 70ಕ್ಕೂ ಅಧಿಕ ಮಂದಿ ತೀವ್ರವಾಗಿ ನರಳುವಂತೆ ಮಾಡಿದ ಮಾರಮ್ಮ ದೇಗುಲ ಪ್ರಸಾದ ಪ್ರಕರಣದಲ್ಲಿ ಆಳವಾದ ತನಿಖೆ ನಡೆಸಬೇಕಿದೆ. ಪ್ರಸಾದವೆಂದು ವಿತರಿಸ ಲಾದ ಬಾತ್‍ನಲ್ಲಿ ವಿಷ ಬೆರೆಸಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಕೊಡಿಸಬೇಕಿದೆ ಎಂದು ಮಾಜಿ ಶಾಸಕ ಭಾರತೀ ಶಂಕರ್ ಆಗ್ರಹಿಸಿದ್ದಾರೆ.

ವಿಷಯ ತಿಳಿದು ಕಾಮಗೆರೆ ಆಸ್ಪತ್ರೆಗೆ ಬಂದಿದ್ದೇನೆ. ಇಲ್ಲಿ ಭಕ್ತಾದಿಗಳು ನರಳಾಡುತ್ತಿರುವುದನ್ನು ನೋಡಿದರೆ ಕರುಳು ಚುರುಕ್ ಎನ್ನು ತ್ತದೆ. ಈಗಾಗಲೇ ಕೆಲವರು ಸಾವನ್ನಪ್ಪಿ ದ್ದಾರೆ. ದೇವಸ್ಥಾನದ ಪ್ರಸಾದ ತಿಂದ ಕಾಗೆಗಳು, ನಾಯಿಗಳೂ ಕೂಡ ಸಾವಿ ಗೀಡಾಗಿವೆ ಎಂದು ಹೇಳುತ್ತಿದ್ದಾರೆ. ಇದು ದೊಡ್ಡ ದುರಂತ. ಪ್ರಸಾದಕ್ಕೆ ಯಾರೋ ವಿಷ ಬೆರೆಸಿರಬಹುದು ಎಂದು ವೈದ್ಯರು ಸಂಶಯ ವ್ಯಕ್ತಪಡಿಸಿದ್ದಾರೆ. ದೇವಸ್ಥಾನದಲ್ಲಿ ಪ್ರಸಾದಕ್ಕೇ ವಿಷ ಬೆರೆಸುವಂತಹ ಕಟುಕರು ಇದ್ದಾರೆ ಎಂಬುದನ್ನು ನೆನೆಸಿಕೊಂಡರೇ ಭಯವಾಗುತ್ತದೆ. ಈ ಬಗ್ಗೆ ಸೂಕ್ತ ತನಿಖೆ ನಡೆದು ತಪ್ಪಿತಸ್ಥರನ್ನು ಬಂಧಿಸಿ, ಶಿಕ್ಷೆಗೆ ಒಳಪಡಿಸಬೇಕು.

ಮೃತಪಟ್ಟವರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ನೀಡಬೇಕು. ಆಸ್ಪತ್ರೆಯಲ್ಲಿರುವವರಿಗೆ ಉತ್ತಮ ಚಿಕಿತ್ಸೆ ಯನ್ನು ಸರ್ಕಾರದ ವತಿಯಿಂದಲೇ ನೀಡಬೇಕು. ಕಿಚ್‍ಗುತ್ ದೇವ ಸ್ಥಾನ ಅಭಿವೃದ್ಧಿ ಹೊಂದುತ್ತಿದೆ. ಅಲ್ಲಿ ಒಂದು ಟ್ರಸ್ಟ್ ಕೂಡ ಮಾಡಿಕೊಂಡಿದ್ದಾರೆ. ಎಲ್ಲಾ ಕಡೆ ನಡೆಯುವಂತೆ ಸಣ್ಣಪುಟ್ಟ ಮನಸ್ತಾಪಗಳು ಇದ್ದೇ ಇರುತ್ತವೆ. ಆದರೆ ಪ್ರಸಾದಕ್ಕೆ ವಿಷ ಬೆರೆಸುವಷ್ಟರ ಮಟ್ಟಿಗೆ ವೈಮನಸ್ಸುಗಳು ಇತ್ತೇ ಎಂಬುದು ಗೊತ್ತಿಲ್ಲ.
– ಪರಿಮಳಾ ನಾಗಪ್ಪ, ಮಾಜಿ ಶಾಸಕಿ, ಹನೂರು

ಇಂದು ನಮ್ಮ ಮನೆಗೆ ಸಂಬಂಧಿಕರಾದ ರಾಯುಡು ಅವರು ಬಂದಿದ್ದರು. ಅವರು ಬಂದ ಕೆಲ ನಿಮಿಷಗಳಲ್ಲೇ ಕುಸಿದು ಬಿದ್ದರು. ಹೃದಯಾಘಾತ ಆಗಿರಬಹುದು ಎಂದು ಹೆದರಿ ನಾನು ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದೆ. ಆದರೆ ವೈದ್ಯರು ಕಾಮಗೆರೆಯ ಹೋಲಿ ಕ್ರಾಸ್ ಆಸ್ಪತ್ರೆಗೆ ಕರೆದೊಯ್ಯುವಂತೆ ಹೇಳಿದರು. ನಾನು ಮತ್ತಷ್ಟು ಗಾಬರಿಯಾಗಿ ಬಿಟ್ಟೆ. ಅಷ್ಟರಲ್ಲೇ ರಾಯುಡು ಅವರ ಪತ್ನಿ ನನಗೆ ಕರೆ ಮಾಡಿ ಕಿಚ್‍ಗುತ್ ದೇವ ಸ್ಥಾನದಲ್ಲಿ ಪ್ರಸಾದ ತಿಂದು ಕೆಲವರು ಸತ್ತು ಹೋಗಿದ್ದಾರಂತೆ. ನಮ್ಮ ಯಜಮಾನರು ದೇವಸ್ಥಾನಕ್ಕೆ ಹೋಗಿದ್ದಾರೆ ಕೇಳಿ ಎಂದರು. ವಿಚಾರಿಸಿದಾಗ ರಾಯುಡು ದೇವಸ್ಥಾನಕ್ಕೆ ಹೋಗಿ ಪ್ರಸಾದ ತಿಂದಿರುವುದು ಗೊತ್ತಾಯಿತು. ತಕ್ಷಣ ಅವರನ್ನು ಕಾಮಗೆರೆ ಆಸ್ಪತ್ರೆಗೆ ಕರೆತಂದಾಗ ಅದಾಗಲೇ ಅಲ್ಲಿ 50ಕ್ಕೂ ಹೆಚ್ಚು ಮಂದಿ ಇದ್ದರು. ದೇವರ ಕೃಪೆಯಿಂದ ರಾಯುಡು ಪ್ರಾಣಾಪಾಯ ದಿಂದ ಪಾರಾಗಿದ್ದಾರೆ. – ಪೆದ್ದನಪಾಳ್ಯ ಮಣಿ, ಹನೂರು.

ಗ್ರಾಮೀಣ ಪ್ರದೇಶದ ಅದ ರಲ್ಲೂ ಅಮಾಯಕರೇ ಅಧಿಕ ಸಂಖ್ಯೆಯಲ್ಲಿ ವಾಸಿಸುವಂತಹ ಹನೂರು ಸುತ್ತಮುತ್ತ ಜನತೆಯ ಆರಾಧ್ಯ ದೇವಿಯ ಪೂಜೆಯ ವೇಳೆ ಪ್ರಸಾದ ಸೇವಿಸಿ 13ಕ್ಕೂ ಅಧಿಕ ಮಂದಿ ಸಾವಿಗೀಡಾಗಿರುವುದು ಅತ್ಯಂತ ದುಃಖದ ಸಂಗತಿ. ಘಟನೆಯಲ್ಲಿ 70ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದು, ಇಡೀ ಘಟನೆಯ ಭೀಕರತೆ ಯನ್ನು ಬಿಂಬಿಸುತ್ತದೆ. ಈ ದುರಂತದ ಹಿಂದಿರುವ ಶಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕಾದಿದೆ. ಇಂತಹ ಹೇಯ ಕೃತ್ಯ ಸಮಾಜದಲ್ಲಿ ಭಯಭೀತ ವಾತಾವರಣವನ್ನು ಸೃಷ್ಟಿಸುತ್ತದೆ. ಆದ್ದರಿಂದ ಪ್ರತಿ ಯೊಬ್ಬರೂ ಇದನ್ನು ಖಂಡಿಸಬೇಕು ಹಾಗೂ ತಪ್ಪಿತಸ್ಥ ರಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು. ಈ ಘಟನೆ ಯಲ್ಲಿ ಅಸುನೀಗಿದವರ ಆತ್ಮಕ್ಕೆ ದೇವರು ಶಾಂತಿ ನೀಡಲಿ. ಅಸ್ವಸ್ಥರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ. ಅಧಿವೇಶನದಲ್ಲಿ ಪಾಲ್ಗೊಂಡಿರುವುದರಿಂದ ತಕ್ಷಣ ಮೈಸೂರಿಗೆ ಬರಲಾಗುತ್ತಿಲ್ಲ. ಈ ನೋವು ಕಾಡುತ್ತಿದೆ. -ಜಿ.ಟಿ.ದೇವೇಗೌಡ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ.

ದೇವಿಯ ಪ್ರಸಾದದಲ್ಲಿ ವಿಷ ಮಿಶ್ರಣ ಮಾಡಿ ಅಮಾಯಕರ ಸಾವಿಗೆ ಕಾರಣ ವಾಗಿರುವುದು ಅತ್ಯಂತ ರಾಕ್ಷಸೀ ಕೃತ್ಯವಾಗಿದೆ. ಇದರಲ್ಲಿ ಶಾಮೀ ಲಾಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಿದೆ. ತಪ್ಪಿದಲ್ಲಿ ಎಂತಹ ಹೇಯ ಕೃತ್ಯಕ್ಕೂ ಮನುಷ್ಯ ಮುಂದಾಗಬಹುದಾದ ಅಪಾಯವಿದೆ. ಮಡಿದವರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಅಸ್ವಸ್ಥರು ಶೀಘ್ರ ಗುಣ ಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಆರೋಪಿ ಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಹಾಗೆಯೇ ಸಂತ್ರಸ್ತ ರಿಗೆ ಸೂಕ್ತ ಪರಿಹಾರವನ್ನು ಕಲ್ಪಿಸಬೇಕು.
-ಸಂದೇಶ್ ನಾಗರಾಜ್, ವಿಧಾನ ಪರಿಷತ್ ಸದಸ್ಯ.

Translate »