ಪ್ರತಿಭಟನೆ ಕೈಬಿಟ್ಟ ದೇವಾಲಯಗಳ ಪುರೋಹಿತರು, ನೌಕರರು
ಮೈಸೂರು

ಪ್ರತಿಭಟನೆ ಕೈಬಿಟ್ಟ ದೇವಾಲಯಗಳ ಪುರೋಹಿತರು, ನೌಕರರು

December 16, 2018

ಮೈಸೂರು: ಚಾಮುಂಡಿಬೆಟ್ಟ ಸೇರಿದಂತೆ ಅರಮನೆಯ ದೇವಾಲಯಗಳ ಪುರೋಹಿತರು ಹಾಗೂ ನೌಕರರು, ಮುಜರಾಯಿ ಸಚಿವ ರಾಜಶೇಖರ ಪಾಟೀಲ್ ಭರವಸೆ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈಬಿಟ್ಟಿದ್ದಾರೆ.

ಸರ್ಕಾರ 6ನೇ ವೇತನ ಜಾರಿ, ಹೆಚ್ಚುವರಿ ತುಟ್ಟಿಭತ್ಯೆ ಸಹಿತ ಖಾಯಂ ಆದೇಶ, ವಾರ್ಷಿಕ ಬೋನಸ್, ತಾತ್ಕಾಲಿಕ ನೌಕರರ ಖಾಯಂ ಮಾತಿ, ಮೃತಪಟ್ಟ ನೌಕರರ ಕುಟುಂಬದ ಸದಸ್ಯರಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ, ಸಿಬ್ಬಂದಿಗಳಿಗೂ ವೈದ್ಯಕೀಯ ಸೌಲಭ್ಯ, ನೌಕರರು ಮೃತಪಟ್ಟರೆ 5 ಲಕ್ಷ ರೂ. ಪರಿಹಾರ, ಚಾಮುಂಡೇಶ್ವರಿ ದೇವಾಲಯದ ನೌಕರರ ವೇತನವನ್ನು ಬೆಟ್ಟದಲ್ಲಿರುವ ಕಾವೇರಿ ಗ್ರಾಮೀಣ ಬ್ಯಾಂಕ್ ಮೂಲಕವೇ ಬಟವಾಡೆ ಮಾಡಬೇಕೆಂಬ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಚಾಮುಂಡೇಶ್ವರಿ ದೇವಾಲಯದ ಮುಂಭಾಗ ಶುಕ್ರವಾರದಿಂದ 23 ದೇವಾಲಯಗಳ ನೂರಕ್ಕೂ ಹೆಚ್ಚು ಮಂದಿ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದ್ದರು.

ಇಂದಿನಿಂದ ಉಪವಾಸ ಸತ್ಯಾಗ್ರಹ ಆರಂಭಿಸಿರುವುದನ್ನು ತಿಳಿದ ಶಾಸಕರಾದ ಎಸ್.ಎ. ರಾಮದಾಸ್, ಎಲ್.ನಾಗೇಂದ್ರ, ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‍ಗೌಡ ಪ್ರತಿಭಟನಾನಿರತರನ್ನು ಭೇಟಿ ಮಾಡಿ, ಸಮಸ್ಯೆ ಆಲಿಸಿದರು. ಈ ವೇಳೆ ಶಾಸಕ ಎಸ್.ಎ. ರಾಮದಾಸ್ ಅವರು, ಮುಜರಾಯಿ ಸಚಿವ ರಾಜಶೇಖರ ಪಾಟೀಲ್ ಅವರಿಗೆ ಕರೆ ಮಾಡಿ, ದೇವಾಲಯಗಳ ಅರ್ಚಕರು ಹಾಗೂ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು. ಅಲ್ಲದೆ ಚಾಮುಂಡೇಶ್ವರಿ ಹಾಗೂ ಸಮೂಹ ದೇವಾಲಯಗಳ ನೌಕರರ ಸಂಘದ ಅಧ್ಯಕ್ಷ ಶ್ರೀನಿವಾಸ್ ಅವರಿಗೆ ಮೊಬೈಲ್ ನೀಡಿ, ಸಚಿವರೊಂದಿಗೆ ಮಾತನಾಡಿಸಿದರು.

ಸಂಬಂಧಪಟ್ಟ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಡಿ.24ರಂದು ಮೈಸೂರಿನಲ್ಲೇ ಸಭೆ ನಡೆಸಿ, ನಿಮ್ಮ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದ ಸಚಿವರು, ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿದ್ದನ್ನು ಶ್ರೀನಿವಾಸ್ ಪ್ರತಿಭಟನಾನಿರತರಿಗೆ ತಿಳಿಸಿದರು. ಚಾಮುಂಡೇಶ್ವರಿ ಹಾಗೂ ಸಮೂಹ ದೇವಾಲಯಗಳ ಆಡಳಿತ ಮಂಡಳಿ ಕಾರ್ಯನಿರ್ವಹಣಾಧಿಕಾರಿ ಪ್ರಸಾದ್, ಪ್ರತಿಭಟನಾ ಸ್ಥಳಕ್ಕೆ ಬಂದು ಮುಜರಾಯಿ ಇಲಾಖೆ ಆಯುಕ್ತರು ನೌಕರರಿಗೆ ವರ್ಷದ ಬೋನಸ್ ನೀಡುವಂತೆ ಸೂಚಿಸಿರುವುದಾಗಿ ತಿಳಿಸಿದರು. ಅಲ್ಲದೆ ಹನೂರಿನ ಸುಳವಾಡಿಯಲ್ಲಿ ಪ್ರಸಾದ ಸೇವನೆಯಿಂದ ಸಾವು-ನೋವಾಗಿರುವ ಸಂದರ್ಭದಲ್ಲಿ ಪ್ರತಿಭಟನೆ ಮುಂದುವರಿ ಸುವುದು ಸರಿಯಲ್ಲ ಎಂದು ಒಕ್ಕೊರಲ ನಿರ್ಧಾರದಿಂದ ಪ್ರತಿಭಟನೆ ಕೈಬಿಡಲಾಯಿತು.

ಭರವಸೆ ನೀಡಿರುವಂತೆ ಮುಜರಾಯಿ ಸಚಿವರು ಸಭೆ ನಡೆಸಿ, ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ, ಜ.1ರಿಂದ ಪ್ರತಿಭಟನೆ ಮುಂದುವರಿಸಲಾಗುವುದು ಎಂದು ಚಾಮುಂ ಡೇಶ್ವರಿ ಹಾಗೂ ಸಮೂಹ ದೇವಾಲಯಗಳ ನೌಕರರ ಸಂಘ ಎಚ್ಚರಿಸಿದೆ.

Translate »