ಮನುಜನ ಹಸಿವು ನೀಗುವ ದಾಸೋಹಕ್ಕೆ ಸೂತಕದ ಗೊಡವೆ ಏಕಯ್ಯ!?
ಮೈಸೂರು

ಮನುಜನ ಹಸಿವು ನೀಗುವ ದಾಸೋಹಕ್ಕೆ ಸೂತಕದ ಗೊಡವೆ ಏಕಯ್ಯ!?

December 21, 2018

ಮೈಸೂರು: `ಅನ್ನ ದೇವರಿಗಿಂತ ಇನ್ನು ದೇವರಿಲ್ಲ’. ಸರ್ವಜ್ಞ ಆಡಿದ ಈ ಮಾತು ಹಸಿದವರ ಮನಸ್ಸಿಗೆ ಥಟ್ಟನೆ ನಾಟುತ್ತದೆ. ಅನ್ನದ ಮಹತ್ವ ತಿಳಿದೇ ಪುಣ್ಯ ಕ್ಷೇತ್ರಗಳಲ್ಲಿ ಪ್ರಸಾದ ರೂಪದಲ್ಲಿ ಭಕ್ತರ ಹಸಿವು ನೀಗಿಸಲಾಗುತ್ತಿದೆ. ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶೃಂಗೇರಿ, ಕಟೀಲು, ಹೊರನಾಡು, ನಂಜನಗೂಡು ಹೀಗೆ ಬಹುತೇಕ ಎಲ್ಲಾ ಶ್ರೀ ಕ್ಷೇತ್ರಗಳಲ್ಲೂ ಪ್ರಸಾದ ವಿನಿಯೋಗಕ್ಕೆ ಹೆಚ್ಚಿನ ಪ್ರಾಧಾನ್ಯತೆ, ದೇವರ ದರ್ಶನದಿಂದ ಮನಸ್ಸಿನ ಹಸಿವು, ಪ್ರಸಾದದಿಂದ ಉದರದ ಹಸಿವು ನೀಗುವುದರಿಂದ ಭಕ್ತರು ಸಂತೃಪ್ತ ಭಾವ ಹೊಂದುತ್ತಾರೆ.

ಹಾಗೆಯೇ ಅಧಿದೇವತೆ ಚಾಮುಂಡೇಶ್ವರಿ ನೆಲೆಸಿರುವ ಚಾಮುಂಡಿ ಬೆಟ್ಟದಲ್ಲೂ ಸುಮಾರು 14 ವರ್ಷಗಳಿಂದ ದಾಸೋಹ ನಡೆದು ಬಂದಿದೆ. ಕಳೆದ ವರ್ಷದಿಂದ ಮಧ್ಯಾಹ್ನದ ದಾಸೋಹದ ಜೊತೆಗೆ ಬೆಳಿಗ್ಗೆ ಹಾಗೂ ಸಂಜೆ ಲಘು ಉಪಹಾರ ಮಾದರಿ ಪ್ರಸಾದ ವಿನಿಯೋಗ ಮಾಡಲಾಗುತ್ತಿದೆ. ಇದರಿಂದ ನಿತ್ಯ ಸಾವಿರಾರು ಭಕ್ತರು ಅದರಲ್ಲೂ ಬಡ ಭಕ್ತರು ಸಂತುಷ್ಟರಾಗುತ್ತಿದ್ದಾರೆ. ಆದರೆ ಈ ಸತ್ಕಾರ್ಯದ ಮೇಲಿ ರುವ ಸೂತಕದ ಛಾಯೆಯನ್ನು ತೊಡೆಯಬೇಕೆಂಬುದು ಆಸ್ತಿಕರ ಬಹುದಿನದ ಆಗ್ರಹವಾಗಿತ್ತು. ಚಾಮುಂಡಿ ಬೆಟ್ಟ ಗ್ರಾಮದಲ್ಲಿ ಯಾರಾದರೂ ಮೃತಪಟ್ಟರೆ ಅಂತ್ಯಕ್ರಿಯೆ ಆಗುವವರೆಗೂ ದಾಸೋಹ ಭವನಕ್ಕೆ ಬೀಗ ಹಾಕುವುದು ಸರಿಯಲ್ಲ ಎಂದು ಆಕ್ಷೇಪಿಸಿದ್ದರು. ದೇವಿಯ ದರ್ಶನ, ಲಡ್ಡು ಪ್ರಸಾದ ವಿತರಣೆಗಿಲ್ಲದ ಕಟ್ಟುಪಾಡು, ದಾಸೋಹದ ಮೇಲೇಕೆ ಎಂದು ಪ್ರಶ್ನಿಸಿದ್ದರು.

ತಾಯಿ ಚಾಮುಂಡೇಶ್ವರಿ ದರ್ಶನ ಮಾಡಲೆಂದು ನಿತ್ಯ ಸ್ಥಳೀಯರು ಮಾತ್ರವಲ್ಲದೆ ದೂರದೂರಿನಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ. ಇವರಲ್ಲಿ ದರ್ಶನದ ಬಳಿಕವೇ ಆಹಾರ ಸೇವಿಸಬೇಕೆಂದು ಬರುವವರೇ ಹೆಚ್ಚು. ಹೀಗಿರುವಾಗ ಸಾವಿನ ಸೂತಕದ ನೆಪದಲ್ಲಿ ದಾಸೋಹ ನಿಲ್ಲಿಸುವುದು ಯಾವ ಧರ್ಮ?. ಭಕ್ತರು ಬಳಲುವುದನ್ನು ಆ ದೇವಿಯೂ ಒಪ್ಪುವು ದಿಲ್ಲ. ಹಣವಂತರು ಹೋಟೆಲ್‍ಗಳಿಗೆ ಹೋಗುತ್ತಾರೆ. ಆದರೆ ಬಡ ರೋಗಿಗಳ ಪಾಡೇನು?. ಹೀಗೆ ದಾಸೋಹಕ್ಕೆ ಕಟ್ಟು ಪಾಡು ವಿಧಿಸುವುದರಲ್ಲಿ ಅವಕಾಶವಾದಿತನ ಗೋಚರವಾಗು ತ್ತದೆ. ಬೆಟ್ಟದಲ್ಲಿ ನಾಯಿಕೊಡೆಗಳಂತೆ ಹೆಚ್ಚಿರುವ ಫಾಸ್ಟ್‍ಫುಡ್ ಗಾಡಿಗಳೇ ಈ ಅನುಮಾನಕ್ಕೆ ಕಾರಣ. ಇಲ್ಲಿ ತಿಂಡಿ-ಊಟಕ್ಕಿ ರುವ ಬೆಲೆ ಕಡಿಮೆಯೇನಿಲ್ಲ. ಮಳಿಗೆಗೆ ಲಕ್ಷಾಂತರ ರೂ. ಮುಂಗಡ, ತಿಂಗಳಿಗೆ ಸಾವಿರಾರು ರೂ. ಬಾಡಿಗೆ ನೀಡಿ, ಉದ್ದಿಮೆ ಪರವಾನಗಿ, ತೆರಿಗೆ, ವಿದ್ಯುತ್, ನೀರು, ಯುಜಿಡಿ ನಿರ್ವಹಣೆ ಶುಲ್ಕ ಪಾವತಿಸಿ, ಅಡುಗೆಯವರು, ಕಾರ್ಮಿಕರಿಗೆ ವೇತನ ನೀಡಿ ನಿರ್ವಹಣೆ ಮಾಡುವ ಹೋಟೆಲ್‍ಗಳಿಗಿಂತಲೂ ಇಲ್ಲಿ ಬೆಲೆ ಹೆಚ್ಚಾಗಿದೆ. ಹೀಗಿರುವಾಗ ಬಡ ಭಕ್ತರು ಹಸಿವಿ ನಿಂದಲೇ ಬೆಟ್ಟದಿಂದ ವಾಪಸ್ಸಾಗಬೇಕಾಗುತ್ತದೆ ಎಂದು ಅತೀವ ಬೇಸರ ವ್ಯಕ್ತಪಡಿಸುತ್ತಿದ್ದರು.

ಸೂತಕ ಅಳಿಸಲು ತಾಯಿ ಪ್ರೇರಣೆ?: ತನ್ನ ಭಕ್ತರ ಮೊರೆಯನ್ನು ಆಲಿಸಿರುವ ತಾಯಿ ಚಾಮುಂಡೇಶ್ವರಿ ಅನ್ನ ದೇವರ ಮೇಲಿರುವ ಸೂತಕ ಕಳೆಯಲು ಸಂಬಂಧಪಟ್ಟವರಿಗೆ ಅನುಗ್ರಹಿಸಿರುವಂತಿದೆ. ಇನ್ನು ಮುಂದೆ ಯಾವ ಕಾರಣಕ್ಕೂ ದಾಸೋಹ ನಿಲ್ಲಿಸಬಾರದೆಂಬ ತೀರ್ಮಾನವನ್ನು ಚಾಮುಂ ಡೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ(Temple Management committe) ಕೈಗೊಂಡಿದೆ. ಸಭೆಯಲ್ಲಿ ಸದಸ್ಯರ ಸರ್ವಾನುಮತದೊಂದಿಗೆ ಕೈಗೊಳ್ಳಲಾಗಿರುವ ಈ ನಿರ್ಣಯದ ಅನುಷ್ಠಾನಕ್ಕೆ ಅನುಮತಿ ಕೋರಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಪ್ರಸಾದ್ ಅವರು ತಮ್ಮ ಟಿಪ್ಪಣಿಯೊಂದಿಗೆ ಕಡತ ಜಿಲ್ಲಾಧಿಕಾರಿಗಳಿಗೆ ಕಳುಹಿಸಿದ್ದಾರೆ ಎನ್ನಲಾಗಿದೆ. ಜಿಲ್ಲಾಧಿಕಾರಿಗಳು ಅಂಕಿತ ಹಾಕಿ ಅನು ಮೋದನೆ ನೀಡಿದಾಕ್ಷಣ ದಾಸೋಹದ ಮೇಲಿದ್ದ ಅನಗತ್ಯ ಸೂತಕದ ಕಾರ್ಮೋಡ ಥಟ್ಟನೆ ಸರಿಯುತ್ತದೆ.

ದೇವಾಲಯದಲ್ಲಿ ಅಭಿಷೇಕಕ್ಕೆ ಮುನ್ನ ಗ್ರಾಮದಲ್ಲಿ ಯಾರಾ ದರೂ ಮೃತಪಟ್ಟರೆ, ಆ ದಿನದ ಅಭಿಷೇಕ, ಪೂಜೆ, ತೀರ್ಥ ಪ್ರಸಾದ ವಿತರಣೆಯನ್ನು ಸ್ಥಗಿತಗೊಳಿಸಲಾಗುತ್ತದೆ. ದೇವಾ ಲಯದ ಮುಖ್ಯದ್ವಾರವನ್ನು ಬಂದ್ ಮಾಡಿ, ಎಡಬದಿ ಬಾಗಿಲು ಮೂಲಕ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು. ಹಾಗೆಯೇ ಆ ದಿನ ದಾಸೋ ಹವನ್ನೂ ಬಂದ್ ಮಾಡಲಾಗುವುದು. ಇದರಿಂದ ಪ್ರಸಾದ ಸ್ವೀಕರಿಸಬೇಕೆಂದು ಬಂದ ಭಕ್ತರಿಗೆ ನಿರಾಸೆಯಾಗುತ್ತದೆ. ಹಾಗಾಗಿ ಇನ್ನು ಮುಂದೆ ಯಾವ ಕಾರಣಕ್ಕೂ ದಾಸೋಹ ವನ್ನು ಸ್ಥಗಿತಗೊಳಿಸಬಾರದೆಂದು ಸಮಿತಿ ತೀರ್ಮಾನಿಸ ಲಾಗಿದೆ ಎಂದು ಸಮಿತಿಯವರು ತಿಳಿಸಿದ್ದಾರೆ. ಈ ಮಹತ್ವದ ನಿರ್ಣಯ ಭಕ್ತರ ಸಂತಸ ಹೆಚ್ಚಿಸಿದೆ.

ಸದ್ಯ ಬೆಟ್ಟದ ದಾಸೋಹ ಭವನದಲ್ಲಿ ಬೆಳಗ್ಗೆ 7.30ರಿಂದ 10ರವರೆಗೆ ಪೊಂಗಲ್, ಖಾರಾ ಪೊಂಗಲ್, ಕೇಸರಿ ಭಾತ್, ವಾಂಗಿ ಭಾತ್, ಮಧ್ಯಾಹ್ನ 12ರಿಂದ 3.30ರವರೆಗೆ ಅನ್ನ ಸಾಂಬಾರ್, ರಸಂ, ಪಾಯಸ, ಸಂಜೆ 7ರಿಂದ 9ರವರೆಗೆ ಪೊಂಗಲ್, ಖಾರಾ ಪೊಂಗಲ್, ವಾಂಗಿ ಭಾತ್ ಇನ್ನಿತರ ಖಾದ್ಯಗಳನ್ನು ಪ್ರಸಾದವಾಗಿ ನೀಡಲಾಗುತ್ತಿದೆ.

ನಿತ್ಯ ಎರಡು ಸಾವಿರಕ್ಕೂ ಹೆಚ್ಚು, ರಜೆ ಹಾಗೂ ವಿಶೇಷ ದಿನಗಳಲ್ಲಿ 4 ಸಾವಿರಕ್ಕೂ ಹೆಚ್ಚು ಭಕ್ತರು ಪ್ರಸಾದ ಸ್ವೀಕರಿ ಸುತ್ತಾರೆ. ಭಕ್ತಾದಿಗಳು, ದಾನಿಗಳು ಹಾಗೂ ಪ್ರಸಾದ ಸೇವಿಸು ವವರು ನೀಡುವ ಕಾಣಿಕೆ, ಆಹಾರ ಪದಾರ್ಥಗಳು ಹಾಗೂ ದೇಣಿಗೆಯಿಂದ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ದಾಸೋಹ ನಡೆದು ಇನ್ನೂ ಹೆಚ್ಚುವರಿ ಹಣ ಮಿಗುತ್ತಿರುವುದರಿಂದ ದೇವಾಲಯದ ಹಣವನ್ನು ಇದಕ್ಕೆ ಬಳಸುತ್ತಿಲ್ಲ. ಹಾಗಾಗಿ ಭಕ್ತರಿಂದಲೇ ನಡೆಯುತ್ತಿರುವ ದಾಸೋಹಕ್ಕೆ ಅಡ್ಡಿ ಇರಬಾ ರದು. ಸಾವಿನ ಸೂತಕದ ಕರಿನೆರಳನ್ನು ತೊಡೆಯಬೇಕೆಂಬ ನಿಟ್ಟಿನಲ್ಲಿ ಸಮಿತಿಯೂ ಮುಂದಾಗಿರುವುದು ಮೆಚ್ಚುವಂತದ್ದು.

Translate »