ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕಾನೂನು ಕ್ರಮ
ಮೈಸೂರು

ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕಾನೂನು ಕ್ರಮ

December 15, 2018

ಮೈಸೂರು: ಹನೂರು ತಾಲೂಕಿನ ಸುಳವಾಡಿ ಗ್ರಾಮದ ಕಿಚ್‍ಗುತ್ ಮಾರಮ್ಮ ದೇಗುಲದಲ್ಲಿ ವಿಷಮಿಶ್ರಿತ ಪ್ರಸಾದ ಸೇವಿಸಿ 12 ಹೆಚ್ಚು ಮಂದಿ ಮೃತಪಟ್ಟು, 70ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದ ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಳಿಗೆ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಶುಕ್ರವಾರ ರಾತ್ರಿ ಕೆ.ಆರ್.ಆಸ್ಪತ್ರೆಗೆ ಭೇಟಿ ನೀಡಿ, ಇಲ್ಲಿ ದಾಖಲಾಗಿರುವ ಅಸ್ವಸ್ಥಗೊಂಡವರ ಆರೋಗ್ಯ ವಿಚಾರಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಈ ಪ್ರಕರಣ ಬೆಳಿಗ್ಗೆ ನಡೆದಿದ್ದು, ನನಗೆ ಮಧ್ಯಾಹ್ನದ ವೇಳೆಗೆ ಅಧಿಕಾರಿಗಳು ಗಮನಕ್ಕೆ ತಂದರು. ಬೆಳಗಿನಿಂದಲೂ ಕೊಳ್ಳೇಗಾಲ ಮತ್ತು ಸ್ಥಳೀಯ ಆಸ್ಪತ್ರೆಯಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಅಲ್ಲಿನ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ, ತುರ್ತು ಚಿಕಿತ್ಸೆಗೆ ಮೈಸೂರಿಗೆ ಕಳುಹಿಸಿಕೊಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.

5 ಲಕ್ಷ ರೂ. ಪರಿಹಾರ: ಘಟನೆಯಲ್ಲಿ ಇಲ್ಲಿಯವರೆಗೆ ಒಟ್ಟು 11 ಮಂದಿ ಮೃತಪಟ್ಟಿದ್ದಾರೆ. ಮೈಸೂರಿನ ಕೆ.ಆರ್.ಆಸ್ಪತ್ರೆ ಮತ್ತು ಜೆಎಸ್‍ಎಸ್ ಆಸ್ಪತ್ರೆಯಲ್ಲಿ ಕೆಲವರು ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದ ಸಿಎಂ, ಮೃತರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ. ಪರಿಹಾರ ಧನ ನೀಡಲಾಗುವುದು. ಅಸ್ವಸ್ಥರಾಗಿ ಬೇರೆ ಬೇರೆ ಆಸ್ಪತ್ರೆಗಳ ಚಿಕಿತ್ಸೆ ಪಡೆಯುತ್ತಿರುವವರ ಚಿಕಿತ್ಸಾ ವೆಚ್ಚ ಸಂಪೂರ್ಣ ಭರಿಸುವುದಾಗಿ ಘೋಷಿಸಿದರು.

ಕಿಚ್‍ಗುತ್ ಮಾರಮ್ಮ ದೇವಸ್ಥಾನದ ಗೋಪುರಕ್ಕೆ ಗುದ್ದಲಿ ಪೂಜಾ ಕಾರ್ಯಕ್ರಮದಲ್ಲಿ ದೇವರ ಪ್ರಸಾದ ಸೇವನೆ ಮಾಡಿ ಶವವಾಗುತ್ತೇವೆ ಎಂದರೆ, ಸಮಾಜದಲ್ಲಿ ಯಾರನ್ನು ನಂಬಬೇಕು ಎಂದು ಪ್ರಶ್ನಿಸಿದರಲ್ಲದೆ, ಈ ಪ್ರಕರಣದ ಬಗ್ಗೆ ಸಮಗ್ರ ವರದಿ ಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.

ಸಚಿವ ಪುಟ್ಟರಾಜುಗೆ ಉಸ್ತುವಾರಿ: ಕಳೆದ ತಿಂಗಳು ಮಂಡ್ಯ ಜಿಲ್ಲೆಯಲ್ಲಿ ಕಾಲುವೆಗೆ ಬಸ್ ಬಿದ್ದು 30 ಜನರು ಮೃತಪಟ್ಟಿದ್ದರು. ನಂತರ ಮಾಜಿ ಸಚಿವ, ನಟ ಅಂಬರೀಷ್ ಅವರು ನಿಧನರಾಗಿದ್ದರು. ಈ ಎರಡೂ ಸಂದರ್ಭಗಳಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು ಮುತುವರ್ಜಿ ವಹಿಸಿ ಯಾವುದೇ ಅವಘಡ ಸಂಭವಿಸದಂತೆ ಎಲ್ಲಾ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದರು. ಈ ಘಟನೆಯಲ್ಲೂ ಅವರನ್ನು ಸಂಪರ್ಕಿಸಿ, ಕೂಡಲೇ ಮೈಸೂರಿಗೆ ತೆರಳುವಂತೆ ಸೂಚನೆ ನೀಡಿದೆ. 30 ನಿಮಿಷಕ್ಕೆ ಕೆ.ಆರ್.ಆಸ್ಪತ್ರೆಗೆ ಭೇಟಿ ನೀಡಿ, ಇಲ್ಲಿನ ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ. ಇಲ್ಲೇ ಮೊಕ್ಕಾಂ ಹೂಡಿ ಪರಿಸ್ಥಿತಿ ನಿಭಾಯಿಸುವಂತೆ ಸೂಚಿಸಿದ್ದೇನೆ ಎಂದರು.

ಮನಕಲಕಿದ ವಿದ್ಯಾರ್ಥಿನಿ ರಾಣಿಬಾಯಿ ಮೌನ: ಮೈಸೂರಿನ ಮಹಾರಾಣಿ ಪದವಿ ಕಾಲೇಜಿನಲ್ಲಿ ಪ್ರಥಮ ಬಿಎಸ್‍ಸಿ ವ್ಯಾಸಂಗ ಮಾಡುತ್ತಿರುವ ರಾಣಿಬಾಯಿ ತಂದೆ ಕೃಷ್ಣನಾಯ್ಕ ಅವರು ಜೆಎಸ್‍ಎಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಕೆ.ಆರ್.ಆಸ್ಪತ್ರೆಯಲ್ಲಿ ತಾಯಿ ಸ್ಥಿತಿ ಗಂಭೀರವಾಗಿದೆ. ಇವರ ಕುಟುಂಬ ಅಕ್ಷರಶಃ ಬೀದಿಗೆ ಬಂದಿದೆ. ಈಕೆ ಸ್ಥಿತಿ ನೆನೆದರೆ, ಕರುಳು ಕಿತ್ತು ಬರುತ್ತದೆ ಎಂದು ಮುಖ್ಯಮಂತ್ರಿಗಳು ಭಾವುಕರಾದರು.

ವಿದ್ಯಾರ್ಥಿನಿಯ ಸಂಪೂರ್ಣ ವಿದ್ಯಾಭ್ಯಾಸ ವೆಚ್ಚ, ಈಕೆಯ ಕುಟುಂಬ ನಿರ್ವಹಣೆ ವೆಚ್ಚವನ್ನೂ ಸರ್ಕಾರದಿಂದಲೇ ಭರಿಸುವ ಬಗ್ಗೆ ಸಾಧಕ-ಬಾಧಕ ಪರಿಶೀಲಿಸುವುದಾಗಿ ತಿಳಿಸಿದರು. ಸ್ಥಳದಲ್ಲಿದ್ದ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಅವರು, ವಿದ್ಯಾರ್ಥಿನಿಯ ಜೀವನ ನಿರ್ವಹಣೆಗೆ ವೈಯಕ್ತಿಕವಾಗಿ 50 ಸಾವಿರ ರೂ. ನೆರವು ನೀಡುವುದಾಗಿ ಭರವಸೆ ನೀಡಿದರು.

ಕೆ.ಆರ್.ಆಸ್ಪತ್ರೆಗೆ ಕಾಯಕಲ್ಪ: ಕೆ.ಆರ್.ಆಸ್ಪತ್ರೆ ಕಾಯಕಲ್ಪದ ಬಗ್ಗೆ ಪತ್ರಕರ್ತರು, ಮುಖ್ಯಮಂತ್ರಿಗಳ ಗಮನ ಸೆಳೆದಾಗ, ಇದಕ್ಕೆ ಪ್ರತಿಕ್ರಿಯೆ ನೀಡಿ, ಜೆಡಿಎಸ್-ಕಾಂಗ್ರೆಸ್ ನೇತೃತ್ವದ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದು 7 ತಿಂಗಳು ಕಳೆದಿವೆ. ಮೈಸೂರಿನ ದೊಡ್ಡಾಸ್ಪತ್ರೆ ಎಂದೇ ಹೆಸರಾಗಿರುವ ಕೆ.ಆರ್.ಆಸ್ಪತ್ರೆ ಅಭಿವೃದ್ಧಿ ಬಗ್ಗೆ ಮಾಹಿತಿ ಪಡೆದು ಹಣ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಈ ವೇಳೆ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಸಂಸದರಾದ ಧ್ರುವನಾರಾಯಣ್, ಪ್ರತಾಪಸಿಂಹ, ನಟ ನಿಖಿಲ್ ಕುಮಾರಸ್ವಾಮಿ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಸೇರಿದಂತೆ ಇತರರಿದ್ದರು.

Translate »