`ವಿಷ’ ಪ್ರಸಾದ ಸೇವನೆ 12ಕ್ಕೂ ಅಧಿಕ ಮಂದಿ ಸಾವು 70ಕ್ಕೂ ಅಧಿಕ ಮಂದಿ ಅಸ್ವಸ್ಥ
ಮೈಸೂರು

`ವಿಷ’ ಪ್ರಸಾದ ಸೇವನೆ 12ಕ್ಕೂ ಅಧಿಕ ಮಂದಿ ಸಾವು 70ಕ್ಕೂ ಅಧಿಕ ಮಂದಿ ಅಸ್ವಸ್ಥ

December 15, 2018
  • ಹನೂರು ಬಳಿ ಅರಣ್ಯದಂಚಿನ ಮಾರಿಗುಡಿಯಲ್ಲಿ ದುರಂತ
  • ವೈಯಕ್ತಿಕ ವೈಷಮ್ಯದಿಂದ ವಿಷವಿಕ್ಕಿದ ಕಿರಾತಕರು
  • ದೇವಸ್ಥಾನ ಆಡಳಿತ ಮಂಡಳಿಯ ಇಬ್ಬರು ಪೊಲೀಸ್ ವಶಕ್ಕೆ
  • ಪ್ರಸಾದದಿಂದ ಕಾಗೆ, ನಾಯಿ ಮಾರಣಹೋಮ
  • ಮೈಸೂರು ವಿವಿಧ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ
  • ಕೊಳ್ಳೇಗಾಲ, ಕಾಮಗೆರೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ
  • ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ
  • ಅಸ್ವಸ್ಥರಿಗೆ ಸರ್ಕಾರಿ ವೆಚ್ಚದಲ್ಲೇ ಚಿಕಿತ್ಸೆ
  • ಮೈಸೂರಿಗೆ ದೌಡಾಯಿಸಿದ ಸಿಎಂ ಕುಮಾರಸ್ವಾಮಿ
  • ಇಂದು ಮೈಸೂರಿಗೆ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್

ಹನೂರು: ಕಾಪಾಡು ತಾಯೇ ಎಂದು ಮಾರಿ ಮೊರೆ ಹೋದ 12ಕ್ಕೂ ಅಧಿಕ ಮಂದಿ ಭಕ್ತರ ಮಾರಣಹೋಮವೇ ನಡೆದು ಹೋಯಿತು. ದೇವಸ್ಥಾನದಲ್ಲಿ ವಿಷ ಪ್ರಸಾದ ಸೇವಿಸಿ ದಾರುಣ ವಾಗಿ ಸಾವನ್ನಪ್ಪಿ, 70ಕ್ಕೂ ಹೆಚ್ಚು ಭಕ್ತರು ತೀವ್ರ ಅಸ್ವಸ್ಥರಾಗಿ ಆಸ್ಪತ್ರೆಗೆ ಸೇರಿರುವ ಘಟನೆ ಹನೂರು ತಾಲೂಕು ಮಾರ್ಟಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸುಳವಾಡಿ ಗ್ರಾಮದ ಕಿಚ್ಚುಗುತ್ ಮಾರಮ್ಮನ ದೇವಸ್ಥಾನದಲ್ಲಿ ಇಂದು ಬೆಳಿಗ್ಗೆ ನಡೆದಿದೆ.

ಭಕ್ತಿ ಪೂರ್ವಕವಾಗಿ ಸ್ವೀಕರಿಸಿ, ಸೇವಿಸಿದ ಪ್ರಸಾದವೇ ತಮ್ಮ ಜೀವ ತೆಗೆಯುತ್ತದೆ ಎಂದು ಅವರಿಗಾದರೂ ಹೇಗೆ ತಾನೇ ತಿಳಿದಿತು. ಪೂಜೆ ನಂತರ ಪ್ರಸಾದ ನೀಡುತ್ತಿದ್ದಂತೆ ಕಣ್ಣಿಗೆ ಒತ್ತಿಕೊಂಡು, ಎಲ್ಲರೂ ಒಟ್ಟಿಗೆ ಸೇವಿಸಿದರು. ಮಕ್ಕಳ ಕರೆದು ಕೊಂಡು ಹೋದವರು ಅವುಗಳಿಗೆ ಮೊದಲು ತಿನ್ನಿಸಿ, ನಂತರ ತಾವು ತಿಂದರು. ತಿಂದ ಹತ್ತೆ ನಿಮಿಷಕ್ಕೆ ಶುರುವಾಯ್ತು ನರಳಾಟ, ಚೀರಾಟ. ಕೆಲವರು ಕುಸಿದು ಬಿದ್ದರೆ, ಮತ್ತೆ ಕೆಲವರು ವಾಂತಿ ಮಾಡಿಕೊಂಡು ಬಿದ್ದು ಒದ್ದಾಡಲಾರಂಭಿಸಿದರು. ಏನು ನಡೆಯುತ್ತಿದೆ ಎನ್ನುವಷ್ಟರಲ್ಲೇ ದೇವಿ ಸನ್ನಿಧಿ ನರಕ ಸದೃಶ್ಯವಾಯಿತು. ದೇವರ ಪ್ರಸಾದಕ್ಕೆ ವಿಷ ಬೆರೆಸಲಾಗಿದೆ ಎಂದು ವೈದ್ಯರು ಖಚಿತಪಡಿಸಿದ್ದು, ಬೆರೆಸಿರುವ ವಿಷ ಯಾವುದು ಎಂಬುದು ವಿಧಿ-ವಿಜ್ಞಾನ ಪ್ರಯೋಗಾಲಯದ ವರದಿ ಬಂದ ನಂತರವೇ ತಿಳಿಯ ಬೇಕಾಗಿದೆ. ದೇವಸ್ಥಾನ ಆಡಳಿತ ಮಂಡಳಿಯಲ್ಲಿ ಎರಡು ಗುಂಪುಗಳಿದ್ದು, ಅವರಲ್ಲಿ ಒಂದು ಗುಂಪಿನವರು ಪ್ರಸಾದಕ್ಕೆ ವಿಷ ಬೆರೆಸಿ ರಾಕ್ಷಸೀ ಕೃತ್ಯ ಎಸಗಿರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಮಾರಮ್ಮನಿಗೆ ಪ್ರಸಾದ ತಯಾರಿಸಿದ ಬಾಣಸಿಗನ ಪುತ್ರಿಯೂ ಕೂಡ ವಿಷ ಪ್ರಸಾದ ಸೇವನೆಗೆ ಬಲಿಯಾಗಿದ್ದಾಳೆ. ಈ 12 ವರ್ಷದ ಬಾಲಕಿ ರಾಮಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಅಸುನೀಗಿದ್ದಾಳೆ.

ಕಿರಾತಕರ ಈ ಕೃತ್ಯಕ್ಕೆ ಬಾಣಸಿಗನ ಪುತ್ರಿ ಅನಿತಾ(12) ಸೇರಿದಂತೆ, ಬಿದರಳ್ಳಿ ಗ್ರಾಮದ ಶಾಂತರಾಜು, ಅದೇ ಗ್ರಾಮದ ಗೋಪಿಯಮ್ಮ, ದೊಡ್ಡಣೆ ಗ್ರಾಮದ ಅಣ್ಣಯ್ಯಪ್ಪ, ಎಂ.ಜಿ.ದೊಡ್ಡಿಯ ಪಾಪಣ್ಣ, ಹಳೇ ಮಾರ್ಟಳ್ಳಿಯ ಕೃಷ್ಣನಾಯಕ, ಶಿವಕುಮಾರ್, ಕುಮಾರ, ತೋಮಿಯಾರ್ ಪಾಳ್ಯದ ರಾಚಯ್ಯ, ತೊಳಸಿ ಕೆರೆಯ ದೊಡ್ಡಮಾದಯ್ಯ, ಏಳು ವರ್ಷದ ಬಾಲಕ ಅವಿನಾಶ್ ಮತ್ತು ಶಕ್ತಿವೇಲು ಸೇರಿದಂತೆ 13ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಇವರಲ್ಲಿ ಕಾಮಗೆರೆಯ ಹೋಲಿ ಕ್ರಾಸ್ ಆಸ್ಪತ್ರೆಯಲ್ಲಿ ಇಬ್ಬರು, ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯಲ್ಲಿ ಮೂವರು, ಮೈಸೂರಿನ ಕೆ.ಆರ್.ಆಸ್ಪತ್ರೆ ಮತ್ತು ಜೆಎಸ್‍ಎಸ್ ಆಸ್ಪತ್ರೆಯಲ್ಲಿ ನಾಲ್ವರು, ರಾಮಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಓರ್ವ ಬಾಲಕಿ ಸಾವನ್ನಪ್ಪಿದ್ದಾರೆ.

ವಿಷ ಪ್ರಸಾದ ಸೇವಿಸಿ ಅಸ್ವಸ್ಥರಾದ ಎಲ್ಲರನ್ನೂ ಸುಳವಾಡಿ ಗ್ರಾಮಕ್ಕೆ ಸಮೀಪ ದಲ್ಲಿರುವ ಕಾಮಗೆರೆಯ ಹೋಲಿ ಕ್ರಾಸ್ ಆಸ್ಪತ್ರೆಗೆ ಮೊದಲು ಕರೆತರಲಾಯಿತು. ಆನಂತರ ಆಂಬುಲೆನ್ಸ್‍ಗಳ ಮೂಲಕ ಕೊಳ್ಳೇಗಾಲ ಮತ್ತು ಮೈಸೂರಿಗೆ ರವಾನಿಸಲಾಯಿತು.

ಇಂದು ಸಂಜೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನೀಡಿದ ಸೂಚನೆ ಮೇರೆಗೆ ಕಾಮಗೆರೆ ಮತ್ತು ಕೊಳ್ಳೇಗಾಲದಲ್ಲಿದ್ದ ಎಲ್ಲರನ್ನೂ ಮೈಸೂರಿಗೆ ರವಾನಿಸಲಾಯಿತು. ಈಗ ಕಾಮಗೆರೆ ಹೋಲಿ ಕ್ರಾಸ್ ಆಸ್ಪತ್ರೆಯ ವೆಂಟಿಲೇಟರ್‍ನಲ್ಲಿ ಐವರು ಚಿಕಿತ್ಸೆ ಪಡೆಯುತ್ತಿದ್ದರೆ, ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡಿರುವ ಮೂವರು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯಲ್ಲಿ ಹಾಗೂ ತೀವ್ರ ಅಸ್ವಸ್ಥಗೊಂಡಿರುವ 65ಕ್ಕೂ ಅಧಿಕ ಮಂದಿ ಮೈಸೂರಿನ ಕೆ.ಆರ್.ಆಸ್ಪತ್ರೆ ಮತ್ತು ಸುಯೋಗ, ಗೋಪಾಲಗೌಡ, ಕೊಲಂಬಿಯಾ ಏಷಿಯಾ, ಜೆಎಸ್‍ಎಸ್, ಅಪೋಲೋ ಸೇರಿದಂತೆ ಇನ್ನಿತರೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಸ್ವಸ್ಥರಲ್ಲಿ ಮಹಿಳೆಯರು ಮತ್ತು ಮಕ್ಕಳೂ ಕೂಡ ಸೇರಿದ್ದಾರೆ. ದುರಂತದ ವಿಷಯ ತಿಳಿಯುತ್ತಿದ್ದಂತೆಯೇ ದಕ್ಷಿಣ ವಲಯ ಐಜಿಪಿ ಶರತ್‍ಚಂದ್ರ, ಚಾಮರಾಜನಗರ ಎಸ್ಪಿ ಧರ್ಮೇದ್ರ ಕುಮಾರ್ ಮೀನಾ, ಚಾಮರಾಜನಗರ ಜಿಲ್ಲಾಧಿಕಾರಿ ಕಾವೇರಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕೆ.ಎಸ್.ಪ್ರಸಾದ್, ತಾಲೂಕು ಆರೋಗ್ಯಾಧಿಕಾರಿ ಗೋಪಾಲ್, ಕೊಳ್ಳೇಗಾಲ ಉಪ ವಿಭಾಗಾಧಿಕಾರಿ ಪೌಸಿಯಾ ತರನಮ್ ಅವರುಗಳು ಕಾಮಗೆರೆ ಹೋಲಿ ಕ್ರಾಸ್ ಆಸ್ಪತ್ರೆಗೆ ದೌಡಾಯಿಸಿದರು.

ಕೊಳ್ಳೇಗಾಲ ಮತ್ತು ಹನೂರು ತಾಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರು ಹಾಗೂ ಕೊಳ್ಳೇಗಾಲ ಪಟ್ಟಣದ ಖಾಸಗಿ ವೈದ್ಯರು ಕಾಮಗೆರೆ ಮತ್ತು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ಆಗಮಿಸಿ ಅಸ್ವಸ್ಥಗೊಂಡವರ ಚಿಕಿತ್ಸೆಗೆ ನೆರವಿನ ಹಸ್ತ ನೀಡಿದರು. ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಯ 108 ಆಂಬುಲೆನ್ಸ್‍ಗಳನ್ನು ಅಸ್ವಸ್ಥಗೊಂಡವರನ್ನು ಆಸ್ಪತ್ರೆಗಳಿಗೆ ಸಾಗಿಸಲು ಬಳಸಿಕೊಳ್ಳಲಾಯಿತು.

 

Translate »