ನೈಋತ್ಯ ರೈಲ್ವೆ ನೂತನ ವಿಭಾಗೀಯ ವ್ಯವಸ್ಥಾಪಕರಾಗಿ   ರಾಹುಲ್ ಅಗರವಾಲ್ ಅಧಿಕಾರ ಸ್ವೀಕಾರ
ಮೈಸೂರು

ನೈಋತ್ಯ ರೈಲ್ವೆ ನೂತನ ವಿಭಾಗೀಯ ವ್ಯವಸ್ಥಾಪಕರಾಗಿ  ರಾಹುಲ್ ಅಗರವಾಲ್ ಅಧಿಕಾರ ಸ್ವೀಕಾರ

October 28, 2020

ಮೈಸೂರು, ಅ.27-ಮೈಸೂರಿನಲ್ಲಿ ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ಹೊಸ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾಗಿ ರಾಹುಲ್ ಅಗರವಾಲ್ ಮಂಗಳವಾರ ಅಧಿಕಾರ ವಹಿಸಿಕೊಂಡರು. ಅವರು 1992ರಲ್ಲಿ ಭಾರತೀಯ ರೈಲ್ವೆ ಸಂಚಾರ ಸೇವಾ ಅಧಿಕಾರಿ (ಐಆರ್‍ಟಿಎಸ್)ಯಾಗಿ ನಿಯುಕ್ತಿಯಾಗಿದ್ದರು. ಅವರು ರೂರ್ಕಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್‍ನಲ್ಲಿ ಪದವಿ ಪಡೆದಿದ್ದಾರೆ. ಅಲ್ಲದೆ, ಅದೇ ಸಂಸ್ಥೆ ಯಿಂದಲೇ ಥರ್ಮಲ್ ಎಂಜಿನಿಯರಿಂಗ್‍ನಲ್ಲಿ ತಮ್ಮ ಎರಡನೇ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅಗರವಾಲ್ ಅವರು ರೈಲ್ವೆ ಕಾರ್ಯಾಚರಣೆ ಮತ್ತು ನಿರ್ವಹಣೆಯ ಎಲ್ಲಾ ಕ್ಷೇತ್ರಗಳಲ್ಲಿ ವ್ಯಾಪಕ ಶ್ರೇಣಿಯ ಅನುಭವವನ್ನು ಹೊಂದಿದ್ದು, ನವದೆಹಲಿಯ ರೈಲ್ವೆ ಮಂಡಳಿಯಲ್ಲಿ ಸಂಚಾರ ಸಾರಿಗೆ (ಉಕ್ಕು) ಕಾರ್ಯನಿರ್ವಾಹಕ ನಿರ್ದೇಶಕರಾಗಿ, ಉತ್ತರ ಮಧ್ಯೆ ರೈಲ್ವೆಯಲ್ಲಿ ಮುಖ್ಯ ಪ್ರಯಾಣಿಕರ ಸಂಚಾರ ವ್ಯವಸ್ಥಾಪಕರಾಗಿ ಹಾಗೂ ಸರಕು ಮಾರಾಟ ವಿಭಾಗದ ಮುಖ್ಯ ವಾಣಿಜ್ಯ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ್ದಾರೆ.

ಇವರು ಸಿಂಗಾಪುರ ಮತ್ತು ಮಲೇಷ್ಯಾದಲ್ಲಿ ತರಬೇತಿ ಕೋರ್ಸ್ ಗಳಿಗೆ ಹಾಜರಾಗಿ ಹೆಚ್ಚಿನ ಅನುಭವ ಗಳಿಸಿದ್ದಾರೆ. ವಡೋದರಾದ ನ್ಯಾಷನಲ್ ಅಕಾಡೆಮಿ ಆಫ್ ಇಂಡಿಯನ್ ರೈಲ್ವೆಯಲ್ಲಿ ನಡೆದ ಸುಧಾರಿತ ನಿರ್ವಹಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅವರು ತಮ್ಮ ಅತ್ಯುತ್ತಮ ಸೇವೆಗಾಗಿ 2013ರಲ್ಲಿ ರೈಲ್ವೆ ಸಚಿವರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಶ್ರೀಮತಿ ಅಪರ್ಣಾ ಗರ್ಗ್ ಅವರು ಬೆಂಗಳೂರಿನ ಯಲಹಂಕ ರೈಲ್ವೆ ಗಾಲಿ ಕಾರ್ಖಾನೆಯಲ್ಲಿ ಪ್ರಧಾನ ಹಣಕಾಸು ಸಲಹೆಗಾರರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

 

 

Translate »