ಶಿರಾ, ಆರ್.ಆರ್.ನಗರ ಉಪ ಚುನಾವಣೆಯಲ್ಲಿ  ಕಾಂಗ್ರೆಸ್‍ಗೆ ಅಭೂತಪೂರ್ವ ಗೆಲುವು
ಮೈಸೂರು

ಶಿರಾ, ಆರ್.ಆರ್.ನಗರ ಉಪ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಅಭೂತಪೂರ್ವ ಗೆಲುವು

October 28, 2020

ಮೈಸೂರು, ಅ.27(ಆರ್‍ಕೆಬಿ)- ರಾಜ್ಯದಲ್ಲಿ ನಡೆಯ ಲಿರುವ ಶಿರಾ ಮತ್ತು ರಾಜರಾಜೇಶ್ವರಿ ನಗರ ವಿಧಾನ ಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭೂತಪೂರ್ವ ಗೆಲುವು ಸಾಧಿಸಲಿದೆ ಎಂದು ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಇಂದಿಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

ಮೈಸೂರು ರೈಲ್ವೆ ನಿಲ್ದಾಣದ ಬಳಿಯ ಕಾಂಗ್ರೆಸ್ ಭವನ ದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ಶಿರಾ ದಲ್ಲಿ ಟಿ.ಬಿ.ಜಯಚಂದ್ರ ಮತ್ತು ರಾಜರಾಜೇಶ್ವರಿ ನಗರದಲ್ಲಿ ಕುಸುಮಾ ಜಯ ಗಳಿಸುವುದರಲ್ಲಿ ಅನುಮಾನವೇ ಇಲ್ಲ. ಶಿರಾದಲ್ಲಿ ಜಯಚಂದ್ರ ಅವರು ಮಾಡಿದ ಜನಪರ ಕೆಲಸ, ಆರ್‍ಆರ್ ನಗರದಲ್ಲಿ ಬಿಜೆಪಿಯ ಮುನಿರತ್ನ ಮಾಡಿರುವ ತಪ್ಪುಗಳು ಈ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವಿಗೆ ಸಹಕಾರಿಯಾಗಿದೆ. ಜಯಚಂದ್ರ ಅವರು ಒಂದು ಜಲಾಶಯ ಪ್ರದೇಶದಿಂದ ಮತ್ತೊಂದು ಜಲಾಶಯ ಪ್ರದೇಶಕ್ಕೆ ನೀರನ್ನು ಹರಿಸಿ ಆ ಭಾಗದ ಭಗೀರಥ ಎನಿಸಿಕೊಂಡಿದ್ದಾರೆ ಎಂದರು.

ಬಿಜೆಪಿಯವರು ಯಾವ ಪರಿ ಹಣ ಹಂಚುತ್ತಿದ್ದಾರೆಂದರೆ ಬಿಜೆಪಿಯ ಬಿ.ವೈ.ವಿಜಯೇಂದ್ರ ಕ್ಷೇತ್ರದಲ್ಲಿಯೇ ಮೊಕ್ಕಾಂ ಮಾಡಿದ್ದಾರೆ. ಹಣದ ಪ್ರಭಾವ ನಡೆಯುತ್ತಿದೆ. ಪ್ರತೀ ಓಟ್‍ಗೆ 2 ಸಾವಿರ ರೂ.ಗಿಂತ ಕಡಿಮೆ ಇಲ್ಲದಂತೆ ಹಣ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಇದೇ ವಿಚಾರ ಅವರಿಗೆ ಮುಳುವಾಗಲಿದೆ. ಬಿಜೆಪಿಗೆ ಮತದಾರರು ತಕ್ಕ ಪಾಠ ಕಲಿಸ ಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ದಸರಾ ಆಚರಣೆಗೆ, ಕೋವಿಡ್ ನಿಯಂತ್ರಣಕ್ಕೆ ಹಾಗೂ ರಾಜ್ಯದ ಅಭಿ ವೃದ್ಧಿ ಕಾರ್ಯಗಳಿಗೆ ಸರ್ಕಾರದಲ್ಲಿ ದುಡ್ಡಿಲ್ಲ ಎನ್ನುತ್ತಾರೆ. ಆದರೆ ಒಂದು ಚುನಾವಣೆ ನಡೆಸಲು ಅವರಿಗೆ ಇಷ್ಟೊಂದು ಹಣ ಎಲ್ಲಿಂದ ಬರುತ್ತಿದೆ? ಎಂದು ಜನ ಪ್ರಶ್ನಿಸುತ್ತಿದ್ದಾರೆ. ಕೋವಿಡ್ ಆಸ್ಪತ್ರೆಗಳಿಗೆ ವೆಂಟಿಲೇಟರ್, ಮಾಸ್ಕ್ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು.

ಎನ್‍ಡಿಎ ಕೂಟದಿಂದ ಅನೇಕ ಪಕ್ಷಗಳು ಹೊರಬಂದಿವೆ. 2019ಕ್ಕೆ ಮೊದಲು ಸಹ ಬಿಜೆಪಿ ಚುನಾವಣೆಗಳನ್ನು ಗೆಲ್ಲಲು ಸಾಧ್ಯವಾಗಿಲ್ಲ. ಲೋಕಸಭಾ ಚುನಾವಣೆ ನಂತರವೂ ಪ್ರತಿ ಚುನಾವಣೆಯಲ್ಲೂ ಬಿಜೆಪಿ ಸೋಲುತ್ತಲೇ ಬಂದಿದೆ. ಇದು ಆ ಪಕ್ಷದ ಅವನತಿಯನ್ನು ಸೂಚಿಸುತ್ತದೆ ಎಂದರು.

ಬಿಹಾರ ವಿಧಾನಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್ -ಆರ್‍ಜೆಡಿ ಮೈತ್ರಿ sಸಂಪೂರ್ಣ ಬಹುಮತದೊಂದಿಗೆ ಗೆಲುವು ಸಾಧಿsಸಿ, ಆಡಳಿತ ಹಿಡಿಯಲಿದೆ ಎಂದರು.

ಬಿಹಾರ ಚುನಾವಣೆಯಲ್ಲಿ ಕೊರೊನಾ ಲಸಿಕೆಯನ್ನು ಉಚಿತ ವಾಗಿ ನೀಡುವುದಾಗಿ ಬಿಜೆಪಿ ಪ್ರಚಾರ ಮಾಡುತ್ತಿದೆ. ಕೊರೊನಾ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ. ಬಿಹಾರಕ್ಕೆ ಲಸಿಕೆ ಕೊಟ್ಟರೆ ಸಾಕೆ? ಕರ್ನಾಟಕದ ಜನ ಏನು ಮಾಡಿದ್ದರು? ಕೋವಿಡ್ ವಿಚಾರದಲ್ಲಿಯೂ ರಾಜ ಕೀಯ ಮಾಡಬಹುದೇ? ಎಂದು ಪ್ರಶ್ನಿಸಿದರು.

ಹಿಂದೆ ಜವಾಹರ್‍ಲಾಲ್ ನೆಹರು ಅವರು ಪ್ರಧಾನಿಯಾಗಿ ದ್ದಾಗ ಬಿಸಿಜಿ ಚುಚ್ಚುಮದ್ದನ್ನು ಇಡೀ ದೇಶದ ಜನರಿಗೆ ಕೊಟ್ಟಿದ್ದರು. ಹಾಗಾಗಿ ಅಂದು ಸಾವಿನ ಸಂಖ್ಯೆ ಕಡಿಮೆ ಯಾಯಿತು. ಅಂದು ಪ್ರಧಾನಿಯವರು ಬಿಸಿಜಿ ಚುಚ್ಚುಮದ್ದನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳಲಿಲ್ಲ ಎಂದರು. ಬಿಹಾರ ಚುನಾವಣೆ ಫಲಿತಾಂಶದಿಂದ ನರೇಂದ್ರ ಮೋದಿ ಸರ್ಕಾ ರಕ್ಕೆ ದೊಡ್ಡ ಮಟ್ಟದ ಸಂದೇಶ ಹೋಗುತ್ತದೆ ಎಂದರು. ಕಾಂಗ್ರೆಸ್ ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಬಿ.ಜೆ.ವಿಜಯ ಕುಮಾರ್, ಕೆಪಿಸಿಸಿ ವಕ್ತಾರರಾದ ಮಂಜುಳಾ ಮಾನಸ, ಕಾಂಗ್ರೆಸ್ ನಗರ ಘಟಕದ ಪದಾಧಿಕಾರಿ ಎಂ.ಶಿವಣ್ಣ, ಪ್ರಕಾಶ್ ಕುಮಾರ್, ಹೆಡತಲೆ ಮಂಜುನಾಥ್ ಇನ್ನಿತರರಿದ್ದರು.

 

 

Translate »