`ಕೋವಿಡ್-19’ ರೋಗ ಲಕ್ಷಣ ತಿಳಿಸುವ `ಆರೋಗ್ಯ ಸೇತು’ ಆ್ಯಪ್ ಡೌನ್‍ಲೋಡ್‍ಗೆ ರೈಲ್ವೆ ಕುಟುಂಬಕ್ಕೆ ಸೂಚನೆ
ಮೈಸೂರು

`ಕೋವಿಡ್-19’ ರೋಗ ಲಕ್ಷಣ ತಿಳಿಸುವ `ಆರೋಗ್ಯ ಸೇತು’ ಆ್ಯಪ್ ಡೌನ್‍ಲೋಡ್‍ಗೆ ರೈಲ್ವೆ ಕುಟುಂಬಕ್ಕೆ ಸೂಚನೆ

April 9, 2020

ಮೈಸೂರು,ಏ.8(ಆರ್‍ಕೆಬಿ)- ಇತ್ತೀಚೆಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ `ಆರೋಗ್ಯ ಸೇತು’ ಮೊಬೈಲ್ ಆ್ಯಪ್’ ಅನ್ನು ರೈಲ್ವೆ ಕುಟುಂಬದ ಎಲ್ಲರೂ ಅಳವಡಿಸಿಕೊಳ್ಳುವಂತೆ ನೈರುತ್ಯ ರೈಲ್ವೆ ಮೈಸೂರು ವಿಭಾಗೀಯ ವ್ಯವಸ್ಥಾಪಕಿ ಅಪರ್ಣಾ ಗರ್ಗ್ ಎಲ್ಲಾ ಅಧಿಕಾರಿ, ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.

ಕೋವಿಡ್-19 ಟ್ರಾಕರ್ ಮೊಬೈಲ್ ಆ್ಯಪ್ `ಆರೋಗ್ಯ ಸೇತು’, ವೈರಸ್ ಸೋಂಕಿಗೆ ತುತ್ತಾಗಿರುವ ವ್ಯಕ್ತಿಯ ಮೇಲೆ ನಿಗಾ ಇರಿಸುವ ಮತ್ತು ವೈಯಕ್ತಿಕ ಅಲರ್ಟ್ ಸಂದೇಶದ ಮೂಲಕ ಎಚ್ಚರಿಕೆ ನೀಡುತ್ತದೆ. ಜಿಪಿಎಸ್ ತಂತ್ರಜ್ಞಾನದ ಸಹಾಯದಿಂದ ಸೋಂಕಿತರ ಚಲನವಲನದ ಬಗ್ಗೆಯೂ ನಿಗಾ ವಹಿಸುತ್ತದೆ. ಕನ್ನಡ ಸೇರಿದಂತೆ 11 ಭಾಷೆಗಳಲ್ಲಿ ಮಾಹಿತಿ ಲಭ್ಯವಿದೆ. ಮೊಬೈಲ್ ಬಳಸುವ ಪ್ರತಿಯೊಬ್ಬರೂ ಆರೋಗ್ಯ ಸೇತು ಆ್ಯಪ್ ಅನ್ನು ಡೌನ್ ಮಾಡಿಕೊಳ್ಳಬೇಕು. ಈ ಆ್ಯಪ್‍ನಲ್ಲಿ ಕೋವಿಡ್-19 ರೋಗ ಲಕ್ಷಣಗಳನ್ನು ದಾಖಲಿಸಿದ ಕೂಡಲೇ ಸಂಬಂಧಪಟ್ಟವರಿಗೆ ಮಾಹಿತಿ ರವಾನೆಯಾಗುತ್ತದೆ ಎಂದರು.

ದೇಶದ ಅತೀ ದೊಡ್ಡ ಉದ್ಯೋಗದಾತ ಸಂಸ್ಥೆಯಾಗಿರುವ ಭಾರತೀಯ ರೈಲ್ವೆ 1.3 ದಶಲಕ್ಷಕ್ಕೂ ಹೆಚ್ಚಿನ ನೌಕರರನ್ನು ಹೊಂದಿದ್ದು, ಕೋವಿಡ್-19 ವಿರುದ್ಧ ಹೋರಾಟದಲ್ಲಿ ಇಲಾಖೆ ಪ್ರಮುಖ ಪಾತ್ರ ವಹಿಸಲಿದೆ. ಮೈಸೂರು ರೈಲ್ವೆ ವಿಭಾಗವು 7 ಸಾವಿರದಷ್ಟು ಮಾನವಶಕ್ತಿ ಹೊಂದಿದೆ. ಏ.8ರ ಹೊತ್ತಿಗೆ ಶೇ.82ರಷ್ಟು ಉದ್ಯೋಗಿಗಳು, ಅವರ ಕುಟುಂಬ ಸದಸ್ಯರು ಈ ಆ್ಯಪ್ ಡೌನ್‍ಲೋಡ್ ಮಾಡಿಕೊಂಡಿದ್ದಾರೆ ಎಂದರು.

Translate »