80 ವರ್ಷದಲ್ಲಿ ಮೊದಲ ಬಾರಿಗೆ 78 ದಿನ ಬಂದ್ ಆದ ರಂಗನತಿಟ್ಟು ಪಕ್ಷಿಧಾಮ
ಮೈಸೂರು

80 ವರ್ಷದಲ್ಲಿ ಮೊದಲ ಬಾರಿಗೆ 78 ದಿನ ಬಂದ್ ಆದ ರಂಗನತಿಟ್ಟು ಪಕ್ಷಿಧಾಮ

June 1, 2020

ಮೈಸೂರು, ಮೇ 31(ಎಂಟಿವೈ)-ದೇಶ-ವಿದೇಶಗಳ ಹಲವು ವೈವಿಧ್ಯಮಯ ಪಕ್ಷಿ ಸಂಕುಲಗಳ ಆವಾಸ ಸ್ಥಾನ ಹಾಗೂ ಪ್ರಮುಖ ಪ್ರವಾಸಿ ತಾಣವೂ ಆಗಿರುವ ಶ್ರೀರಂಗಪಟ್ಟಣ ತಾಲೂಕಿನ ರಂಗನತಿಟ್ಟು ಪಕ್ಷಿಧಾಮ ಸ್ಥಾಪನೆಯಾದ 80 ವರ್ಷ ಗಳಲ್ಲಿ ಮೊದಲ ಬಾರಿಗೆ 78 ದಿನ ಬಂದ್ ಆಗಿದ್ದು, ಸುಮಾರು 1.25 ಕೋಟಿ ರೂ. ನಷ್ಟವಾಗಿದೆ. ಆದರೂ ಪಕ್ಷಿ ಸಂಕುಲಗಳ ಹಿತಕಾಯಲು ದ್ವೀಪಗಳ ಪುನಶ್ಚೇತನ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯ ಸದ್ದಿಲ್ಲದೆ ನಡೆಸಲಾಗಿದೆ.

ಕೊರೊನಾ ಹಾವಳಿಗೂ ಮುನ್ನ ಹಕ್ಕಿ ಜ್ವರದ ಭೀತಿಯಿಂದಾಗಿ ಮಾ.14ರಂದೇ ರಂಗನತಿಟ್ಟು ಮುಚ್ಚಲ್ಪಟ್ಟಿತ್ತು. ಮೈಸೂರಿನ ಬಳಿ ಕೆಲವು ಕೋಳಿ ಹಾಗೂ ಪಕ್ಷಿಗಳು ಹಕ್ಕಿ ಜ್ವರಕ್ಕೆ ತುತ್ತಾಗಿ ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ಪ್ರವಾಸಿಗರ ಮೇಲೆ ದುಷ್ಪರಿಣಾಮ ಬೀರುವು ದನ್ನು ತಡೆಗಟ್ಟಲು ಹಾಗೂ ಹಕ್ಕಿಜ್ವರದ ಸೋಂಕು ಒಂದೆಡೆಯಿಂದ ಮತ್ತೊಂದೆಡೆ ವ್ಯಾಪಿಸುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಂಗನತಿಟ್ಟಿಗೆ ಪ್ರವಾಸಿಗರ ಪ್ರವೇಶಕ್ಕೆ ಕಡಿ ವಾಣ ಹಾಕಲಾಗಿತ್ತು. ಈ ನಡುವೆ ಕೊರೊನಾ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ ಲಾಕ್‍ಡೌನ್ ಮಾಡಲಾದ ಕಾರಣ ಕಳೆದ 78 ದಿನ ಗಳಿಂದ ಈ ಪಕ್ಷಿಧಾಮ ಬಂದ್ ಆಗಿದೆ. ರಂಗನತಿಟ್ಟು ಪುನರಾರಂಭಕ್ಕೆ ಸರ್ಕಾರದ ಆದೇಶವನ್ನು ಎದುರು ನೋಡುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳು, ಲಾಕ್ ಡೌನ್ ಮುಗಿದ ನಂತರ ಪ್ರವಾಸಿಗರು ಪಕ್ಷಿಧಾಮಕ್ಕೆ ಬರಲು ಕೆಲವು ಕಟ್ಟುನಿಟ್ಟಿನ ನಿಯಮ ಅನುಸರಿಸಲು ಮುಂಜಾಗ್ರತಾ ಕ್ರಮ ಕೈಗೊಳ್ಳಲು ಯೋಜನೆ ರೂಪಿಸಿದ್ದಾರೆ.

1.25 ಕೋಟಿ ನಷ್ಟ: ದಕ್ಷಿಣ ಭಾರತದಲ್ಲಿ ರಂಗನತಿಟ್ಟು ಪಕ್ಷಿಧಾಮ ತನ್ನದೇ ಆದ ಪ್ರಾಮು ಖ್ಯತೆ ಹೊಂದಿದೆ. ಈ ಪಕ್ಷಿಧಾಮ ವಲಸೆ ಪಕ್ಷಿಗಳ ಸಂತಾನೋತ್ತತ್ತಿಗೆ ಉತ್ತಮ ವಾತಾ ವರಣ ಹೊಂದಿದೆ. ಇದರಿಂದಲೇ ಬೇರೆ ಬೇರೆ ದೇಶಗಳಿಂದ ಫೆಲಿಕಾನ್, ನಾರ್ಥನ್ ಶಾವೆಲ್ಲರ್ ಸೇರಿದಂತೆ ಇನ್ನಿತರ ಪಕ್ಷಿಗಳು ಈ ಪಕ್ಷಿಧಾಮಕ್ಕೆ ಬಂದು ಸಂತಾನೋತ್ಪತ್ತಿ ಪ್ರಕ್ರಿಯೆಯಲ್ಲಿ ತೊಡಗಿ, ಮರಿಗಳೊಂದಿಗೆ ವಾಪಸ್ಸಾಗುವ ಪದ್ಧತಿ ರೂಡಿಸಿಕೊಂಡಿವೆ. ಇದರಿಂದ ವರ್ಷದಿಂದ ವರ್ಷಕ್ಕೆ ದೇಶ-ವಿದೇಶಗಳ ಪ್ರವಾಸಿಗರು, ಪಕ್ಷಿ ಪ್ರೇಮಿಗಳು ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸು ತ್ತಾರೆ. ಪ್ರತಿವರ್ಷ ಡಿಸೆಂಬರ್‍ನಿಂದ ಜೂನ್ ವರೆಗೆ ದಿನಕ್ಕೆ 5 ಸಾವಿರ ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಭಾರತೀಯರಿಗೆ ಒಬ್ಬರಿಗೆ ಪ್ರವೇಶ ಶುಲ್ಕ 70 ರೂ., ಬೋಟಿಂಗ್ ಶುಲ್ಕ 70 ರೂ., ವಿದೇಶಿ ಗರಿಗೆ ಪ್ರವೇಶ ಶುಲ್ಕ 400 ರೂ. ಹಾಗೂ ಬೋಟಿಂಗ್ ಶುಲ್ಕ 400 ರೂ. ನಿಗದಿ ಪಡಿಸಲಾಗಿದೆ. ಕಳೆದ 2-3 ವರ್ಷಗಳಿಗೆ ಹೋಲಿಸಿದರೆ ಈ ಬಾರಿ ರಂಗನತಿಟ್ಟಿಗೆ 1.25 ಕೋಟಿ ರೂ. ನಷ್ಟವಾಗಿದೆ.

ಸಂಕಷ್ಟಕ್ಕೆ ಸಿಲುಕಿಲ್ಲ: ರಂಗನತಿಟ್ಟಿಗೆ ಬರುವ ಪ್ರವಾಸಿಗರಿಂದ ಸಂಗ್ರಹವಾಗುವ ಪ್ರವೇಶ ಶುಲ್ಕ, ಬೋಟಿಂಗ್ ಶುಲ್ಕದಿಂದ ಸಂಗ್ರಹವಾಗುವ ಮೊತ್ತವನ್ನು ಅರಣ್ಯ ಇಲಾಖೆಯ ಬಂಡೀಪುರ ಟೈಗರ್ ಕನ್ಸರ್ ವೇಷನ್ ಫೌಂಡೇಷನ್ ನಿಧಿಗೆ ಜಮೆ ಮಾಡ ಲಾಗುತ್ತದೆ. ಪ್ರತಿ ವರ್ಷ ಕಾವೇರಿ ನದಿ ಯಲ್ಲಿ ಪ್ರವಾಹ ಉಂಟಾಗಿ ಕೊಚ್ಚಿ ಹೋಗುವ ದ್ವೀಪಗಳು, ಪ್ರವಾಸಿಗರಿಗೆ ಮೂಲ ಸೌಲಭ್ಯ, ಪಾರ್ಕ್ ಅಭಿವೃದ್ಧಿ, ನಿರ್ವಹಣೆ ವೆಚ್ಚ ಹಾಗೂ ಗುತ್ತಿಗೆ ಸಿಬ್ಬಂದಿಗಳ ವೇತನವನ್ನು ತನ್ನ ಸಂಪನ್ಮೂಲದಿಂದಲೇ ನೀಡಲಾಗುತ್ತಿತ್ತು. ಇದುವರೆಗೂ ರಂಗನತಿಟ್ಟು ಪಕ್ಷಿಧಾಮ ದಿಂದ ಸಂಗ್ರಹವಾದ ಮೊತ್ತವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳದೇ ಇರುವುದ ರಿಂದ ಸದ್ಯಕ್ಕೆ ರಂಗನತಿಟ್ಟು ಪಕ್ಷಿಧಾಮ ಆರ್ಥಿಕ ಸಂಕಷ್ಟಕ್ಕೆ ತುತ್ತಾಗದೇ ಇರುವುದು ಸಮಾಧಾನಕರ ಸಂಗತಿ.

ಆಕರ್ಷಕ ಪಕ್ಷಿಧಾಮ: ಪಕ್ಷಿ ಸಂಕುಲಕ್ಕೆ ಮನಮೋಹಕವಾದ ವಾತಾವರಣವನ್ನೂ ನೈಸರ್ಗಿಕವಾಗಿಯೇ ಸೃಷ್ಟಿಯಾಗಿರುವ ರಂಗನತಿಟ್ಟು ಪಕ್ಷಿಧಾಮವನ್ನು 1940ರಲ್ಲಿ ಅಂದಿನ ಸರ್ಕಾರ ನೋಟಿಫಿಕೇಷನ್ ರಂಗನ ತಿಟ್ಟು ಪಕ್ಷಿಧಾಮ ಎಂದು ಘೋಷಿಸಿದೆ. ಈ ಪಕ್ಷಿಧಾಮ 67 ಹೆಕ್ಟೇರ್(165 ಎಕರೆ) ಪ್ರದೇಶದಲ್ಲಿ ಮೈಚಾಚಿಕೊಂಡಿದ್ದು, 16 ಎಕರೆ ಪ್ರದೇಶದಲ್ಲಿ ಪಾರ್ಕ್, ವುಡ್‍ಲಾಟ್, ಮಾಹಿತಿ ಕೇಂದ್ರ, ವಾಕಿಂಗ್ ಪಾಥ್, ಪರ್ಗೋಲ ಸೇರಿದಂತೆ ಪ್ರವಾಸಿಗರಿಗೆ ಮೂಲಸೌಲಭ್ಯ ಕಲ್ಪಿಸಲಾಗಿದೆ. ಆರ್‍ಎಫ್‍ಓ, ಡಿಆರ್ ಎಫ್‍ಓ ಸೇರಿದಂತೆ 40 ಸಿಬ್ಬಂದಿಗಳಿದ್ದಾರೆ. ಪ್ರವಾಸಿ ಗರಿಗೆ ಸುಸಜ್ಜಿತ ಕ್ಯಾಂಟೀನ್, ಶೌಚಾ ಲಯ, ವಿಶ್ರಾಂತಿ ಪಡೆಯಲು ನೆರಳಿನ ಉದ್ಯಾನವನವೂ ಈ ಪಕ್ಷಿಧಾಮದಲ್ಲಿದೆ.

25 ದ್ವೀಪಗಳು, 65 ಜಾತಿಯ ಪಕ್ಷಿಗಳು, 200ಕ್ಕೂ ಹೆಚ್ಚು ಮೊಸಳೆ: ರಂಗನತಿಟ್ಟು ಪಕ್ಷಿಧಾಮದಲ್ಲಿ ಓಪನ್ ಬಿಲ್ ಐಲ್ಯಾಂಡ್, ಸ್ಟಾರ್ಕ್ ಬಿಲ್, ಫೆಲಿಕಾನ್, ಸ್ಪೂನ್ ಬಿಲ್, ಸ್ಟೋನ್ ಫ್ಲವರ್ ಐಲ್ಯಾಂಡ್, ಕಾರ್ಮೊ ರೆಂಟ್ ಐಲ್ಯಾಂಡ್, ಕಾಡುಣಸೆ, ರೈನ್ ಟ್ರೀ, ಮೊಸಳೆ ದ್ವೀಪ, ಲಿಟಲ್ ಮತ್ತು ಲಾರ್ಜ್ ಕಾರ್ಮೊರೆಂಟ್ ಐಲ್ಯಾಂಡ್, ಲಾರ್ಜ್ ಈಗ್ರೇಟ್, ಲಿಟಲ್ ಈಗ್ರೇಟ್ ಐಲ್ಯಾಂಡ್, ಪುಟ್ಟಯ್ಯನಕೊಪ್ಪಲು ಐಲ್ಯಾಂಡ್ ಸೇರಿ ದಂತೆ 25 ದ್ವೀಪಗಳಿವೆ. ಕಳೆದ ವರ್ಷ ಪಕ್ಷಿ ಗಣತಿ ವೇಳೆ 65 ಜಾತಿಯ ಸಾವಿರಾರು ಪಕ್ಷಿಗಳು ಕಂಡು ಬಂದಿತ್ತು. ಅಲ್ಲದೆ ದೈತ್ಯ ಗಾತ್ರದ ಮೊಸಳೆಯೂ ಸೇರಿದಂತೆ ಸುಮಾರು 200ಕ್ಕೂ ಹೆಚ್ಚು ಮೊಸಳೆಗೂ ರಂಗನತಿಟ್ಟು ಪಕ್ಷಿಧಾಮ ಆಶ್ರಯ ನೀಡಿದೆ.

21 ಬೋಟ್‍ಗಳಿವೆ: ರಂಗನತಿಟ್ಟಿನಲ್ಲಿ ಪ್ರವಾಸಿಗರ ಬೋಟಿಂಗ್‍ಗಾಗಿ 21 ಬೋಟ್ ಇದ್ದು, ಎಲ್ಲರೂ ಲೈಫ್ ಜಾಕೆಟ್ ಧರಿಸಿದ ನಂತರವೇ ಬೋಟಿಂಗ್‍ಗೆ ಅವಕಾಶ ನೀಡ ಲಾಗುತ್ತದೆ. 8 ಜನರ ಸಾಮಥ್ರ್ಯದ 2 ಮರದ ಬೋಟ್ ಇದ್ದು, ಫೋಟೋಗ್ರಫಿ ಮಾಡು ವವರು ಹೆಚ್ಚಾಗಿ ಈ ಬೋಟ್‍ಗಳಲ್ಲಿ ಹೋಗುವು ದಕ್ಕೆ ಇಚ್ಛಿಸುತ್ತಾರೆ. 12 ಜನರದ್ದು 6, 16 ಜನ ರದ್ದು 4 ಹಾಗೂ 8 ಜನರನ್ನು ಕರೆದೊ ಯ್ಯುವ 8 ಬೋಟ್‍ಗಳಿವೆ. ಈ ಎಲ್ಲಾ ಬೋಟ್‍ಗಳು ಹರಿಗೋಲು(ಉಟ್ಟು) ಬಳಸಿ ಚಾಲನೆ ಮಾಡಲಾಗುತ್ತದೆ. ಪಕ್ಷಿ ಸಂಕುಲಕ್ಕೆ ಧಕ್ಕೆಯಾಗಬಾರದೆಂದ ದೃಷ್ಟಿಕೋನದಿಂದ ಮೋಟಾರ್ ಬೋಟ್ ಬಳಕೆ ನಿಷೇಧಿಸಲಾಗಿದೆ.

Translate »