ಅತ್ಯಾಚಾರ ಆರೋಪ: ರಾಘವೇಶ್ವರ ಸ್ವಾಮೀಜಿ ವಿರುದ್ಧ ಚಾರ್ಜ್‍ಶೀಟ್
ಮೈಸೂರು

ಅತ್ಯಾಚಾರ ಆರೋಪ: ರಾಘವೇಶ್ವರ ಸ್ವಾಮೀಜಿ ವಿರುದ್ಧ ಚಾರ್ಜ್‍ಶೀಟ್

September 26, 2018

ಬೆಂಗಳೂರು: ಭಕ್ತೆಯ ಮೇಲೆ ಅತ್ಯಾಚಾರ ಎಸಗಿದ್ದ ಆರೋಪದಡಿ ದಾಖಲಾಗಿದ್ದ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಸಿಐಡಿ ಪೊಲೀಸರು, ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಸೇರಿದಂತೆ ಏಳು ಜನರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ನಾನು ಬಾಲಕಿ ಇದ್ದಾಗಿನಿಂದಲೂ ಸ್ವಾಮೀಜಿ ಹಲವು ಬಾರಿ ಅತ್ಯಾಚಾರ ನಡೆಸಿದ್ದಾರೆ. ಅದಕ್ಕೆ ಹಲವರು ಸಹಕರಿಸಿದ್ದಾರೆ ಎಂದು ಆರೋಪಿಸಿದ್ದ ಉತ್ತರ ಕನ್ನಡ ಜಿಲ್ಲೆಯ ಮಹಿಳೆಯೊಬ್ಬರು, ಗಿರಿನಗರ ಪೊಲೀಸ್ ಠಾಣೆಗೆ 2015ರ ಆಗಸ್ಟ್ 29 ರಂದು ದೂರು ನೀಡಿದ್ದರು. ಐಪಿಸಿ 376 (ಅತ್ಯಾಚಾರ), ಐಪಿಸಿ 376 (2) (ಎಫ್) (ಹನ್ನೆರಡು ವರ್ಷದೊಳಗಿನ ಯುವತಿಯ ಮೇಲೆ ಅತ್ಯಾಚಾರ) ಆರೋಪದಡಿ ಎಫ್‍ಐಆರ್ ದಾಖಲಾಗಿತ್ತು. ನಂತರ, ಪ್ರಕರಣದ ತನಿಖೆಯನ್ನು ಗೃಹ ಇಲಾಖೆಯು ಸಿಐಡಿಗೆ ವರ್ಗಾಯಿಸಿತ್ತು.
ಸ್ವಾಮೀಜಿ ವಿರುದ್ಧ ದಾಖಲಾದ ಪ್ರಕರಣ ಸಂಬಂಧ ಮೂರು ವರ್ಷಗಳಿಂದ ತನಿಖೆ ನಡೆಸಿ, ಸಾಕಷ್ಟು ಪುರಾವೆಗಳನ್ನು ಸಂಗ್ರಹಿಸಿದ್ದೇವೆ. ಅವುಗಳನ್ನು ಆಧರಿಸಿ ದೋಷಾರೋಪ ಪಟ್ಟಿ ಸಿದ್ಧಪಡಿಸಿ ಕೆಲವು ದಿನಗಳ ಹಿಂದಷ್ಟೇ ನಗರದ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸಿದ್ದೇವೆ ಎಂದು ಸಿಐಡಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಹಿಂದೆ ರಾಮಕಥಾ ಗಾಯಕಿ ನೀಡಿದ್ದ ಅತ್ಯಾಚಾರ ದೂರಿನ ಸಂಬಂಧ ಸಿಐಡಿ ಅಧಿಕಾರಿಗಳು, ಸ್ವಾಮೀಜಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ‘ಒಪ್ಪಿತ ದೈಹಿಕ ಸಂಪರ್ಕ’ ಎಂದು ಅಭಿಪ್ರಾಯಪಟ್ಟಿದ್ದ ನ್ಯಾಯಾಲಯ, ಸ್ವಾಮೀಜಿಯನ್ನು ಆರೋಪ ಮುಕ್ತಗೊಳಿಸಿತ್ತು.

Translate »