ಅಪ್ರಾಪ್ತ ಪುತ್ರಿ ಮೇಲೆಯೇ ಅತ್ಯಾಚಾರ: ತಂದೆಗೆ 10 ವರ್ಷ ಜೈಲು ಶಿಕ್ಷೆ
ಮೈಸೂರು

ಅಪ್ರಾಪ್ತ ಪುತ್ರಿ ಮೇಲೆಯೇ ಅತ್ಯಾಚಾರ: ತಂದೆಗೆ 10 ವರ್ಷ ಜೈಲು ಶಿಕ್ಷೆ

September 16, 2018

ಮೈಸೂರು: 7 ವರ್ಷದ ಪುತ್ರಿ ಮೇಲೆ ಅತ್ಯಾಚಾರವೆಸಗಿದ್ದ ಕಾಮುಕ ತಂದೆಗೆ ಮೈಸೂರು ನ್ಯಾಯಾಲಯವು 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಮೈಸೂರಿನ ರಾಜೀವ್‍ನಗರ 1ನೇ ಹಂತದ ನಿವಾಸಿ 35 ವರ್ಷದ ವ್ಯಕ್ತಿ ಶಿಕ್ಷೆಗೊಳಗಾದ ತಂದೆ. ಆತ 2016ರ ಏಪ್ರಿಲ್ 16ರಂದು ಆಟವಾಡುತ್ತಿದ್ದ ತನ್ನ 7 ವರ್ಷದ ಪುತ್ರಿ ಮೇಲೆರಗಿ ಅತ್ಯಾಚಾರ ನಡೆಸಿದ್ದ. ಪ್ರಕರಣ ದಾಖ ಲಿಸಿಕೊಂಡಿದ್ದ ಉದಯಗಿರಿ ಠಾಣೆ ಇನ್ಸ್‍ಪೆಕ್ಟರ್ ಪಿ.ಪಿ.ಸಂತೋಷ್, ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ಕೈಗೆತ್ತಿಕೊಂಡಿದ್ದ ಮೈಸೂರಿನ 6ನೇ ಹೆಚ್ಚುವರಿ ಜಿಲ್ಲಾ ನ್ಯಾಯಾ ಲಯದ ನ್ಯಾಯಾಧೀಶರಾದ ಜಯಶ್ರೀ ಅವರು, ವಾದ-ಪ್ರತಿವಾದಗಳನ್ನು ಆಲಿಸಿದ ನಂತರ ವೈದ್ಯಕೀಯ ಸಾಕ್ಷ್ಯಗಳನ್ನು ಪರಿಗಣಿಸಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ಇಂದು ತೀರ್ಪು ನೀಡಿದ್ದಾರೆ.
ಎಲ್ಲಾ ಸಾಕ್ಷಿದಾರರೂ ಸುಳ್ಳು ಸಾಕ್ಷ್ಯ ನುಡಿದರೂ ಕೇವಲ ವೈದ್ಯಕೀಯ ಸಾಕ್ಷ್ಯ ವನ್ನೇ ಆಧಾರವಾಗಿಟ್ಟುಕೊಂಡು ನ್ಯಾಯಾಧೀಶರು ಆರೋಪಿಗೆ ಶಿಕ್ಷೆ ವಿಧಿಸಿರುವುದು ಅಪರೂಪದ ಪ್ರಕರಣವಾಗಿದೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಶಿವರುದ್ರಸ್ವಾಮಿ ವಾದ ಮಂಡಿಸಿದ್ದರು.

Translate »