ಸಾಲ ಕೊಟ್ಟಿದ್ದ ವೃದ್ಧೆ ಕೊಂದು ಚಿನ್ನಾಭರಣ  ದೋಚಿದ್ದ ಆಟೋ ಚಾಲಕನಿಗೆ ಜೀವಾವಧಿ ಶಿಕ್ಷೆ
ಮೈಸೂರು

ಸಾಲ ಕೊಟ್ಟಿದ್ದ ವೃದ್ಧೆ ಕೊಂದು ಚಿನ್ನಾಭರಣ  ದೋಚಿದ್ದ ಆಟೋ ಚಾಲಕನಿಗೆ ಜೀವಾವಧಿ ಶಿಕ್ಷೆ

November 16, 2018

ಮೈಸೂರು: ತನಗೆ ಸಾಲ ನೀಡಿ ಸಹಕರಿಸಿದ್ದ ವೃದ್ದೆಯನ್ನೇ ಹತ್ಯೆಗೈದು ಚಿನ್ನಾಭರಣ ದೋಚಿದ್ದ ಆಟೋ ಚಾಲಕನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮೈಸೂರಿನ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ಅಶ್ವಿನಿ ವಿ. ಶಿರಿಯಣ್ಣ ವರ ಅವರು ತೀರ್ಪು ನೀಡಿದ್ದಾರೆ. ಮೈಸೂರಿನ ಬೆಲವತ್ತ ಮಂಟಿ ನಿವಾಸಿ ಶ್ರೀನಿವಾಸ್ ಅಲಿಯಾಸ್ ಗಿರೀಶ್ ಅಲಿಯಾಸ್ ಮಂಟಿ ಸೀನ ಶಿಕ್ಷೆಗೊಳಗಾದ ಆಟೋ ಚಾಲಕ.

ವಿವರ: ಬನ್ನಿಮಂಟಪದ ಹುಡ್ಕೋ ನಿವಾಸಿ ಜಯಮ್ಮ(60) ಅವರು ಲೇವಾದೇವಿ ಮಾಡುತ್ತಿದ್ದರು. ಅವರು ಎಲ್ಲಿಗೆ ಹೋಗಬೇಕಾದರೂ ಶ್ರೀನಿವಾಸ್‍ನ ಆಟೋದಲ್ಲೇ ಹೋಗುತ್ತಿದ್ದರು. ತನಗೆ ತೀರಾ ನಂಬಿಕಸ್ಥನಾಗಿದ್ದ ಆತನಿಗೆ ಅವರು 1.5 ಲಕ್ಷ ರೂ ಸಾಲವನ್ನು ನೀಡಿದ್ದರು. ಜಯಮ್ಮ ಅವರನ್ನು ಕೊಲೆ ಮಾಡಿ ಬಿಟ್ಟರೆ ಸಾಲದ ಹಣ ತನಗೇ ಉಳಿಯುತ್ತದೆ ಎಂದು ಸಂಚು ರೂಪಿಸಿದ್ದ ಶ್ರೀನಿವಾಸ 2013ರ ಫೆ.10ರಂದು ರಾತ್ರಿ 10 ಗಂಟೆ ಸುಮಾರಿನಲ್ಲಿ ಜಯಮ್ಮ ಅವರ ಮನೆಗೆ ಬಂದು `ನಿಮಗೆ ಹಣ ಕೊಡಬೇಕಾಗಿರುವ ಮಜ್ಜು ಎಂಬಾತ ಈಗ ಮನೆಯಲ್ಲೇ ಇದ್ದಾನೆ. ಬನ್ನಿ ಅವನಿಂದ ಹಣ ಪಡೆದು ಬರೋಣ ಎಂದು ಕರೆದಿದ್ದಾನೆ. ಆತನ ಮಾತನ್ನು ನಂಬಿದ್ದ ಜಯಮ್ಮ ಅವರು ಆಟೋ (ಕೆಎಲ್ 10 ಜಿ-6794)ದಲ್ಲಿ ಶ್ರೀನಿವಾಸನ ಜೊತೆ ಹೋಗಿದ್ದಾರೆ. ರಿಂಗ್ ರಸ್ತೆಯಲ್ಲಿ ಹಠಾತ್ತನೆ, ಆಟೋ ನಿಲ್ಲಿಸಿದ ಆತ `ಎಕ್ಸಿಲೇಟರ್ ವೈರ್ ಕಟ್ಟಾಗಿದೆ’ ಎಂದು ಹೇಳಿ ಜಯಮ್ಮ ಅವರನ್ನು ಆಟೋದಿಂದ ಕೆಳಗಿಳಿಸಿ ಎಕ್ಸಿಲೇಟರ್ ವೈರ್ ಹಿಡಿದು ಕೊಳ್ಳುವಂತೆ ತಿಳಿಸಿದ್ದಾನೆ. ಅವರು ಬಗ್ಗೆ ವೈರ್ ಹಿಡಿದುಕೊಂಡಿದ್ದ ವೇಳೆ ದೊಣ್ಣೆಯಿಂದ ಆಕೆಯ ತಲೆಗೆ ಹೊಡೆದು ಕೊಲೆ ಮಾಡಿ ಮೃತದೇಹವನ್ನು ರಿಂಗ್‍ರಸ್ತೆಯ ಮೋರಿಗೆ ತಳ್ಳಿ, ಅವರ ಮೈ ಮೇಲಿದ್ದ ಚಿನ್ನದ ಬಳೆ ಮತ್ತು ಚಿನ್ನದ ಸರ ಕಸಿದು ಪರಾರಿಯಾಗಿದ್ದಾನೆ.

ನಂತರ ಬೆಲವತ್ತ ಗ್ರಾಮದ ಪ್ರವೀಣ್ ಎಂಬಾತನ ಬಳಿ ಚಿನ್ನಾಭರಣ, ಗಿರವಿ ಇಟ್ಟು 82 ಸಾವಿರ ರೂ. ಪಡೆದಿದ್ದಾನೆ. ಮರು ದಿನ ಪ್ರಕರಣ ಬೆಳಕಿಗೆ ಬಂದಿದ್ದು ಮೇಟಗಳ್ಳಿ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ವಿವೇಕಾನಂದ ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ನಂತರ ಆಟೋ ಚಾಲಕ ಶ್ರೀನಿವಾಸ್ ನನ್ನು ಬಂಧಿಸಿ, ಆತ ಗಿರವಿ ಇಟ್ಟಿದ್ದ ಚಿನ್ನಾಭರಣ ಮತ್ತು ಪಡೆದಿದ್ದ ಹಣ ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಹಂತಕ ಶ್ರೀನಿವಾಸ್‍ಗೆ ಶಿಕ್ಷೆ ವಿಧಿಸಿ, ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಸರ್ಕಾರಿ ಅಬಿಯೋಜಕ ಅಜಿತ್‍ಕುಮಾರ್ ಡಿ. ಹಮಿಗಿ ವಾದ ಮಂಡಿಸಿದ್ದರು.

Translate »