‘ಸಮುದಾಯದತ್ತ ಶಾಲೆ’ ಪುನಾರಂಭ ಅಗತ್ಯ: ಎಚ್.ವಿಶ್ವನಾಥ್
ಮೈಸೂರು

‘ಸಮುದಾಯದತ್ತ ಶಾಲೆ’ ಪುನಾರಂಭ ಅಗತ್ಯ: ಎಚ್.ವಿಶ್ವನಾಥ್

November 16, 2018

ಹನಗೋಡು: ಶೈಕ್ಷಣಿಕ ಪ್ರಗತಿ ಜೊತೆಗೆ ಸವಲತ್ತು ವೃದ್ಧಿಸಿಕೊಳ್ಳಲು ಸಹ ಕಾರಿಯಾಗುವಂತೆ ತಿಂಗಳಿಗೊಮ್ಮೆ ‘ಸಮ ದಾಯದತ್ತ ಶಾಲೆ’ ಯೋಜನೆಯನ್ನು ತಾವು ಶಿಕ್ಷಣ ಸಚಿವರಾಗಿದ್ದ ವೇಳೆ ಜಾರಿಗೆ ತಂದು ಅಭಿವೃದ್ಧಿಗೆ ನೆರವಾಗಿದ್ದು, ಈ ಯೋಜನೆಯನ್ನು ಪುನರಾರಂಭಿಸುವ ಅವಶ್ಯವಿದೆ ಎಂದು ಶಾಸಕ ಎಚ್.ವಿಶ್ವನಾಥ್ ತಿಳಿಸಿದರು.

ನಾಗರಹೊಳೆ ರಾಷ್ಟ್ರೀಯ ಉದ್ಯಾನದಂಚಿನ ಹನಗೋಡು ಹೋಬಳಿಯ ನಾಗಾಪುರ ಗಿರಿಜನ ಆಶ್ರಮ ಶಾಲೆಯಲ್ಲಿ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಮತ್ತು ಮಕ್ಕಳ ಗ್ರಾಮ ಸಭೆಯನ್ನು ಮಕ್ಕಳಿಂದಲೇ ಉದ್ಘಾಟಿಸಿದ ಬಳಿಕ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ, ಯಾವುದೇ ಜನಪ್ರತಿನಿಧಿಗಳು ಶಿಕ್ಷಣದ ಬಗ್ಗೆ ಚಕಾರವೆತ್ತದೇ ಇದ್ದುದರಿಂದ ಆದಿವಾಸಿ ಗಳ ಮಕ್ಕಳ ಶಿಕ್ಷಣದ ಗುಣಮಟ್ಟ ಕುಸಿದಿದೆ. ಕೋಟಿಗಟ್ಟಲೆ ಹಣ ವ್ಯಯಮಾಡಿ ಕಟ್ಟಡ ನಿರ್ಮಿಸಿದರೆ ಸಾಲದು. ಬದಲಿಗೆ ಪೋಷಕರು ಹಾಗೂ ಜನಪ್ರತಿನಿಗಳು ಶಾಲೆಗಳಲ್ಲಿನ ಚಟುವಟಿಕೆಗಳ ಬಗ್ಗೆ ನಿಗಾ ವಹಿಸಬೇಕು. ಮುಖ್ಯ ಶಿಕ್ಷಕರನ್ನು ಪ್ರಶ್ನಿಸುವ ಅಧಿಕಾರವನ್ನು ಎಸ್‍ಡಿಎಂಸಿಗೆ ನೀಡಿದ್ದರೂ ಆ ಸಮಿತಿಗೆ ಯಾವುದೇ ಮಾಹಿತಿ ನೀಡದಿರುವುದು ಅವ್ಯವಸ್ಥೆಯ ದ್ಯೋತಕ ಎಂದರು.

ಬಿಇಒ ಅವರು ಈ ಬಗ್ಗೆ ಜಾಗೃತರಾಗಿರಬೇಕು. ಎಲ್ಲಾ ಎಸ್‍ಡಿಎಂಸಿ ಸಮಿತಿ ಹಾಗೂ ಗ್ರಾಮ ಪಂಚಾಯ್ತಿ ಸದಸ್ಯರು, ಎಲ್ಲಾ ಶಿಕ್ಷಕರು ಪ್ರತ್ಯೇಕ ಸಭೆ ನಡೆಸಿ, ಶಿಕ್ಷಣದ ಮಹತ್ವದ ಬಗ್ಗೆ ಪೋಷಕರು, ಮಕ್ಕಳಲ್ಲಿ ಅರಿವು ಮೂಡಿಸಬೇಕು. ಬೋಧನಾ ಮಟ್ಟ ವನ್ನು ಮೌಲ್ಯಮಾಪನ ನಡೆಸಲು ಶಿಕ್ಷಣ ಇಲಾಖೆ ನಿರ್ದೇಶಕರೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.

ತಾ.ಪಂ ಸದಸ್ಯೆ ಪುಷ್ಪಲತಾ ಗಣಪತಿ ಮಾತನಾಡಿ, ಹಾಡಿಗಳಲ್ಲಿ ಕೂಲಿಗೆ ತೆರಳುವ ಪೋಷಕರು ತಮ್ಮೊಂದಿಗೆ ಮಕ್ಕಳನ್ನು ಕರೆದೊಯ್ಯುವುದರಿಂದಾಗಿ ಮಕ್ಕಳು ಕಲಿಕೆ ಯಲ್ಲಿ ಹಿಂದುಳಿದಿದ್ದಾರೆ. ಈ ಬಗ್ಗೆಯೂ ಕ್ರಮ ಕೈಗೊಳ್ಳಬೇಕು ಎಂದರು.
ಗ್ರಾ.ಪಂ ಮಾಜಿ ಅಧ್ಯಕ್ಷ ದಾ.ರಾ.ಮಹೇಶ್ ಮಾತನಾಡಿ, ತಮ್ಮ ಗ್ರಾ.ಪಂ ವ್ಯಾಪ್ತಿಯಲ್ಲಿ ನುರಿತ ಶಿಕ್ಷಕರಿದ್ದಾರೆ. ಆದರೆ ಹಾಡಿಗಳಲ್ಲಿ ಮಕ್ಕಳನ್ನು ಮನೆಯಿಂದ ಬಲವಂತವಾಗಿ ಕರೆತಂದು ಪಾಠ ಮಾಡುವ ಸ್ಥಿತಿ ಇದೆ. ಇದರ ಮಧ್ಯೆ ಮಕ್ಕಳು ಊಟದ ನಂತರ ಮನೆಯತ್ತ ಮುಖ ಮಾಡುತ್ತಾರೆ. ಆಶ್ರಮ ಶಾಲೆಗಳಲ್ಲಿ ಕಡಿಮೆ ಸಂಬಳಕ್ಕೆ ಬೇರೆ ಊರು ಗಳಿಂದ ಬಂದು ಪಾಠ ಮಾಡುತ್ತಿದ್ದಾರೆ. ಆ ಶಿಕ್ಷಕರಿಗೆ ಸರಿಯಾದ ಸಂಬಳ, ಸವಲತ್ತು ಒದಗಿಸಿದಲ್ಲಿ ಆದಿವಾಸಿ ಮಕ್ಕಳಿಗೆ ಉತ್ತಮ ರೀತಿ ಪಾಠ ಮಾಡಲು ಮನಸ್ಸು ಮಾಡುತ್ತಾರೆ ಎಂದರು.

ಮುಖಂಡ ಎಂ.ಬಿ.ಪ್ರಭು ಮಾತನಾಡಿ, ಜಿಲ್ಲೆಯಲ್ಲಿ 27 ಗಿರಿಜನ ಆಶ್ರಮ ಶಾಲೆಗಳಲ್ಲಿ 2700 ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ನುರಿತ ಶಿಕ್ಷಕರಿಲ್ಲದ ಕಾರಣ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ. ಪರಿಣಾಮ ಅರಣ್ಯ ದಿಂದ ಹೊರಬಂದು ಶಾಲೆಗೆ ಸೇರಿದ್ದರೂ ಆ ವರ್ಗದ ಮಕ್ಕಳಲ್ಲಿ ಯಾವೊಬ್ಬರೂ ಸರಕಾರಿ ಕೆಲಸಕ್ಕೆ ಸೇರದಂತಾಗಿದೆ. ಕೇವಲ ಶಿಕ್ಷಣ ನೀಡಿದರೆ ಸಾಲದು, ಬದಲಿಗೆ ಆ ಮಕ್ಕಳು ಆಯ್ಕೆ ಮಾಡಿಕೊಳ್ಳುವ ವಿಷಯಗಳ ಶಿಕ್ಷಣ ನೀಡಿದಲ್ಲಿ ಮಾತ್ರ ಸಮಾಜದ ಮುಖ್ಯ ವಾಹಿನಿಗೆ ಅವರೂ ಬರಲಿದ್ದಾರೆ ಎಂದರು.

ರಾಜ್ಯ ಲ್ಯಾಂಪ್ಸ್ ಸಹಕಾರ ಮಹಾ ಮಂಡಳದ ಅಧ್ಯಕ್ಷ ಕೃಷ್ಣಯ್ಯ ಮಾತನಾಡಿ, ಲ್ಯಾಂಪ್ಸ್ ವತಿಯಿಂದ ಆಶ್ರಮ ಶಾಲೆ ಶಿಕ್ಷಕರಿ ಗಾಗಿ ನುರಿತ ವಿಷಯ ತಜ್ಞರಿಂದ ತರಬೇತಿ ನೀಡಲಾಗುತ್ತಿದೆ. ಆದರೂ ಆದಿವಾಸಿ ಮಕ್ಕಳ ಶಿಕ್ಷಣದ ಗುಣಮಟ್ಟ ಹೆಚ್ಚಿಲ್ಲ. ಪ್ರತಿ ಆಶ್ರಮ ಶಾಲೆಗೂ ಇಬ್ಬರು ಆದಿವಾಸಿ ಭಾಷೆಯ ಶಿಕ್ಷಕರನ್ನು ನೇಮಿಸಿಕೊಳ್ಳುವಂತಾದಲ್ಲಿ ಹೆಚ್ಚಿನ ಮಕ್ಕಳನ್ನು ಶಾಲೆಯತ್ತ ಸೆಳೆಯಬಹುದು ಎಂದರು. ಇತ್ತೀಚೆಗೆ ನಿಧನರಾದ ಕೇಂದ್ರ ಸಚಿವ ದಿ.ಅನಂತಕುಮಾರ್ ಅವರಿಗೆ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಶಾಲಾ ಮಂತ್ರಿಮಂಡಳದ ಚೈತನ್ಯ, ಮೋನಿಕಾ, ಲಿಖಿತಾ, ಜಿ.ಪಂ.ಸದಸ್ಯ ಕಟ್ಟ ನಾಯಕ, ಗ್ರಾ.ಪಂ ಅಧ್ಯಕ್ಷೆ ಮಹಾದೇವಿ, ತಾ.ಪಂ ಉಪಾಧ್ಯಕ್ಷ ಪ್ರೇಮಕುಮಾರ್, ಎಪಿಎಂಸಿ ಸದಸ್ಯ ಸುಭಾಷ್, ಮಾಜಿ ಅಧ್ಯಕ್ಷ ಕಿರಂ ಗೂರು ಬಸವರಾಜು, ಇ.ಒ.ಕೃಷ್ಣಕುಮಾರ್, ಬಿ.ಇ.ಒ ನಾಗರಾಜ್, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳ, ಸಿಡಿಪಿಒ ನವೀನ್‍ಕುಮಾರ್, ಮುಖ್ಯಶಿಕ್ಷಕ ಶೇಖರಪ್ಪ ಮತ್ತಿತರರು ಹಾಜರಿದ್ದರು.

Translate »