ಗೃಹಿಣಿ ಮೇಲೆ ಅತ್ಯಾಚಾರ, ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಅಪ್‍ಲೋಡ್: ಇಬ್ಬರು ಕಾಮುಕರ ಬಂಧನ
ಮೈಸೂರು

ಗೃಹಿಣಿ ಮೇಲೆ ಅತ್ಯಾಚಾರ, ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಅಪ್‍ಲೋಡ್: ಇಬ್ಬರು ಕಾಮುಕರ ಬಂಧನ

May 18, 2020

ಮಡಿಕೇರಿ, ಮೇ 17- ವಿವಾಹಿತ ಮಹಿಳೆಯೋರ್ವರ ಮೇಲೆ ಅತ್ಯಾಚಾರವೆಸಗಿ ಅದನ್ನು ಮೊಬೈಲ್‍ನಲ್ಲಿ ವೀಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆÉ.

ಭಾಗಮಂಡಲ ಸಮೀಪದ ತಾವೂರು ಗ್ರಾಮದಲ್ಲಿ ಸೌದೆ ಕೆಲಸಕ್ಕೆಂದು ತೆರಳಿ ಹಿಂತಿರುಗುತ್ತಿದ್ದ ಮಹಿಳೆಯೊಬ್ಬರನ್ನು ಅಡ್ಡಗಟ್ಟಿದ ಅದೇ ಗ್ರಾಮದ ಚಿದಾನಂದ ಹಾಗೂ ಚೇತನ್ ಎಂಬುವರು ಆಕೆಯನ್ನು ಬೆದರಿಸಿ, ನಂತರ ಚಿದಾನಂದ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ ಎನ್ನಲಾಗಿದೆ. ಇದನ್ನು ಚೇತನ್ ಮೊಬೈಲ್‍ನಲ್ಲಿ ವೀಡಿಯೊ ಮಾಡಿದ್ದಾನೆ. ಬಳಿಕ ಅದನ್ನು ಆಕೆಗೆ ತೋರಿಸಿ ಅತ್ಯಾಚಾರ ನಡೆದ ಬಗ್ಗೆ ಎಲ್ಲಾದರೂ ಬಾಯಿಬಿಟ್ಟರೆ ವೀಡಿಯೊವನ್ನು ಎಲ್ಲೆಡೆ ತೋರಿಸುವುದಾಗಿ ಬೆದರಿಸಿದ್ದಾರೆ. ಇದರಿಂದ ಹೆದರಿದ ಆ ಮಹಿಳೆ ಸುಮ್ಮನಾಗಿದ್ದರಾದರೂ ಕೆಲದಿನಗಳ ಬಳಿಕ ಆರೋಪಿಗಳೇ ಆ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ.

ಈ ವಿಚಾರ ಮಹಿಳೆಗೆ ಆಕೆಯ ಸಂಬಂಧಿಕರ ಮೂಲಕ ಗಮನಕ್ಕೆ ಬಂದಿದ್ದು, ನಂತರ ಆಕೆ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀ ಸರು ಆರೋಪಿಗಳಿಬ್ಬರನ್ನು ಬಂಧಿಸಿದ್ದು, ವಿಚಾರಣೆಗೊಳಪಡಿಸಿದ್ದಾರೆ. ಎಸ್‍ಪಿ ಡಾ.ಸುಮನ್ ಅವರ ಮಾರ್ಗದರ್ಶನದಲ್ಲಿ ಡಿವೈಎಸ್‍ಪಿ ದಿನೇಶ್‍ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಮಡಿಕೇರಿ ಗ್ರಾಮಾಂತರ ಠಾಣಾ ಸಿಐ ದಿವಾಕರ್, ಮಡಿಕೇರಿ ಮಹಿಳಾ ಠಾಣಾ ಸಿಐ ಸೋಮೆಗೌಡ, ಗ್ರಾಮಾಂತರ ಠಾಣಾಧಿಕಾರಿ ಚಂದ್ರಶೇಖರ್, ಸಿಬ್ಬಂದಿ ಆರೋಪಿಗಳನ್ನು ಬಂಧಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Translate »