ಕೂಡನಹಳ್ಳಿ ಕಬ್ಬಿನ ಗದ್ದೆಯಲ್ಲಿ ಮೂರು ಚಿರತೆ ಮರಿಗಳು ಪತ್ತೆ
ಮೈಸೂರು

ಕೂಡನಹಳ್ಳಿ ಕಬ್ಬಿನ ಗದ್ದೆಯಲ್ಲಿ ಮೂರು ಚಿರತೆ ಮರಿಗಳು ಪತ್ತೆ

May 18, 2020
  • ಮರಿಗಳನ್ನು ರಕ್ಷಿಸಿದ ಅರಣ್ಯ ಇಲಾಖೆ
  • ಮರಿಗಳನ್ನು ತಾಯಿ ಚಿರತೆ ಕರೆದೊಯ್ಯಲೆಂದು ಕಾಯುತ್ತಿರುವ ಸಿಬ್ಬಂದಿ

ಮೈಸೂರು, ಮೇ17(ಎಸ್‍ಬಿಡಿ)- ಮೈಸೂರು ತಾಲೂಕಿನ ಗ್ರಾಮವೊಂದರ ಜಮೀನಿ ನಲ್ಲಿ 3 ಚಿರತೆ ಮರಿಗಳು ಭಾನುವಾರ ಪತ್ತೆಯಾಗಿವೆ. ತಾಲೂಕಿನ ಕೂಡನಹಳ್ಳಿಯ ಹೊನ್ನಪ್ಪ ಅವರ ಕಬ್ಬಿನ ಗದ್ದೆಯಲ್ಲಿ ಚಿರತೆ ಮರಿಗಳು ಇದ್ದುದನ್ನು ಭಾನು ವಾರ ಮಧ್ಯಾಹ್ನ ಗಮನಿಸಿದ ಗ್ರಾಮಸ್ಥರು, ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಿ ದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ತಂಡ, ಚಿರತೆ ಮರಿಗಳನ್ನು ರಕ್ಷಿಸಿದೆ.

ಈ ಸಂಬಂಧ `ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯಿಸಿದ ಮೈಸೂರಿನ ಆರ್‍ಎಫ್‍ಓ ಎಂ.ಕೆ.ದೇವರಾಜು, ಹುಟ್ಟಿ 8-10 ದಿನಗಳಷ್ಟೇ ಆಗಿರುವ ಚಿರತೆ ಮರಿಗಳನ್ನು ರಕ್ಷಿಸಿ, ಪಕ್ಕದ ಕುರುಚಲು ಕಾಡಿನಲ್ಲಿ ಬಿಡಲಾಗಿದೆ. ಒಂದು ದಿನ ನಿಗಾ ಇಡುತ್ತೇವೆ. ಚಿಕ್ಕ ಮರಿಗಳಾಗಿರುವುದರಿಂದ ತಾಯಿಯಿಂದ ಪ್ರತ್ಯೇಕಿಸಿ ರಕ್ಷಿಸುವುದು ಕಷ್ಟ. ಒಂದು ವೇಳೆ ತಾಯಿ ಚಿರತೆ ಬಂದು ಮರಿಗಳನ್ನು ಒಯ್ಯದಿದ್ದರೆ ಅವನ್ನು ಮೃಗಾಲಯಕ್ಕೆ ಒಪ್ಪಿಸಲಾಗು ವುದು. ಬಳಿಕ ಚಿರತೆ ಸೆರೆಗೆ ಬೋನ್ ಇಡಬೇಕಾಗುತ್ತದೆ ಎಂದು ವಿವರಿಸಿದರು.

ವಾರದ ಹಿಂದೆ ಜಯಪುರ ಹೋಬಳಿಯ ದಡದಹಳ್ಳಿ ಜಮೀನಿನಲ್ಲಿ ಪತ್ತೆಯಾಗಿದ್ದ 2 ಚಿರತೆ ಮರಿಗಳನ್ನೂ ರಕ್ಷಿಸಿ, ಸಮೀಪದ ಕುರುಚಲು ಕಾಡಿನಲ್ಲಿ ಬಿಡಲಾಗಿತ್ತು. ಬೆಳಗಾಗು ವಷ್ಟರಲ್ಲಿ ತಾಯಿ ಚಿರತೆ ಮರಿಗಳನ್ನು ಕರೆದೊಯ್ದಿತ್ತು. ನಿನ್ನೆಯಷ್ಟೇ ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಆಲಗೂಡು ಗ್ರಾಮದ ಕಬ್ಬಿನ ಗದ್ದೆಯಲ್ಲಿ 3 ಮರಿಗಳು ಪತ್ತೆಯಾಗಿದ್ದವು. ಅವುಗಳನ್ನೂ ಆ ಸ್ಥಳದಲ್ಲಿ ಬಿಟ್ಟು, ಕಾವಲಿದ್ದರು. ಭಾನುವಾರ ಮುಂಜಾನೆ ತಾಯಿ ಚಿರತೆ ಬಂದು ಮರಿಗಳನ್ನು ಕರೆದೊಯ್ದಿದೆ ಎಂದು ಅರಣ್ಯಾಧಿಕಾರಿ ಶಿವರಾಜ್ ತಿಳಿಸಿದರು.

Translate »