ಅಪರೂಪದ `ಕೆಮ್ಮಂಡೆ ಜೇನುನೊಣಬಾಕ’ ಪಕ್ಷಿ ಚಾಮುಂಡಿಬೆಟ್ಟದಲ್ಲಿ ಪ್ರತ್ಯಕ್ಷ
ಮೈಸೂರು

ಅಪರೂಪದ `ಕೆಮ್ಮಂಡೆ ಜೇನುನೊಣಬಾಕ’ ಪಕ್ಷಿ ಚಾಮುಂಡಿಬೆಟ್ಟದಲ್ಲಿ ಪ್ರತ್ಯಕ್ಷ

November 1, 2020

ಮೈಸೂರು, ಅ.31(ಎಂಟಿವೈ)-ಪೂರ್ವ ಮತ್ತು ಪಶ್ಚಿಮ ಘಟ್ಟಗಳಲ್ಲಿ ಹೆಚ್ಚಾಗಿ ಕಂಡುಬರುವ ಕೆಮ್ಮಂಡೆ ಜೇನುನೊಣ ಬಾಕ (ಚೆಸ್ಟ್‍ನೆಟ್ ಹೆಡೆಡ್ ಬಿ-ಈಟರ್) ಪಕ್ಷಿಗಳು ಚಾಮುಂಡಿಬೆಟ್ಟದಲ್ಲಿ ಗೋಚರಿಸಿವೆ. ಬೆಟ್ಟದ ತಾವರೆಕಟ್ಟೆ ಭಾಗದಲ್ಲಿ ಶುಕ್ರವಾರ ಸಂಜೆ 5 ಪಕ್ಷಿಗಳ ಗುಂಪು ಕಾಣಿಸಿದೆ. ಇದು ಪಕ್ಷಿ ಪ್ರಿಯರಲ್ಲಿ ಸಂತಸವನ್ನುಂಟು ಮಾಡಿದೆ.

ಈ ಪಕ್ಷಿ ಈ ಭಾಗದಲ್ಲಿ ಗೋಚರಿಸುವುದು ಅಪರೂಪ. ಪೂರ್ವ ಮತ್ತು ಪಶ್ಚಿಮ ಘಟ್ಟ ಇವುಗಳ ಆವಾಸ. ಆಹಾರ ಅರಸಿ ಬಂದಿರುವ ಈ ಪಕ್ಷಿಗಳು ಕಳೆದೆರಡು ದಿನಗಳಿಂದ ತಾವರಕಟ್ಟೆ ಸುತ್ತಮುತ್ತ ಹಾರಾಡುತ್ತಿವೆ. ಮೈಸೂರು ಭಾಗದಲ್ಲಿ ಸಾಮಾನ್ಯವಾಗಿ ಸ್ಮಾಲ್ ಗ್ರೀನ್ ಬಿ-ಈಟರ್, ಬ್ಲೂಟೆಲ್ಡ್ ಬಿ-ಈಟರ್ ಪಕ್ಷಿಗಳು ಕಂಡು ಬರುತ್ತವೆ.

ವನ್ಯಜೀವಿ ಛಾಯಾಗ್ರಾಹಕ ಸ್ನೇಕ್ ಶಿವು, ತಾವು ರಕ್ಷಿಸಿದ ವಿಷರಹಿತ ಹಾವೊಂದನ್ನು ಬೆಟ್ಟಕ್ಕೆ ಬಿಡಲು ಹೋಗಿದ್ದಾಗ ಚೆಸ್ಟ್‍ನೆಟ್ ಹೆಡೆಡ್ ಬಿ-ಈಟರ್ ಪಕ್ಷಿಗಳ ಗುಂಪು ಕಾಣಿಸಿದೆ. ಒಂದು ಪಕ್ಷಿ ಸ್ನೇಕ್ ಶಿವು ಕ್ಯಾಮರಾದಲ್ಲಿ ದಾಖಲಾಗಿದೆ. ಚೆಸ್ಟ್ ನೆಟ್‍ಹೆಡೆಡ್ ಬಿ-ಈಟರ್ ಪಕ್ಷಿಗಳು ನೀರು ಕುಡಿಯ ಬೇಕಾದರೆ ಇತರೆ ಪಕ್ಷಿಗಳಂತೆ ನೆಲದಲ್ಲಿ ಕುಳಿತುಕೊಳ್ಳುವು ದಿಲ್ಲ. ನೀರಿನ ಮೇಲೆ ಹಾರುತ್ತಲೇ ನೀರು ಕುಡಿಯುತ್ತವೆ.

Translate »