ಕೊರೊನಾ ವಿರುದ್ಧ ಸೆಣಸಲು ಸಜ್ಜಾಗಿದ್ದೇವೆ: ಮೈಸೂರು ಆಸ್ಪತ್ರೆಗಳಲ್ಲಿ ಅಣಕು ಪ್ರದರ್ಶನ
ಮೈಸೂರು

ಕೊರೊನಾ ವಿರುದ್ಧ ಸೆಣಸಲು ಸಜ್ಜಾಗಿದ್ದೇವೆ: ಮೈಸೂರು ಆಸ್ಪತ್ರೆಗಳಲ್ಲಿ ಅಣಕು ಪ್ರದರ್ಶನ

April 11, 2023

ಮೈಸೂರು, ಏ. 10(ಆರ್‍ಕೆ)-ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ದಿನೇ ದಿನೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತ ಮೈಸೂರು ಜಿಲ್ಲಾಡಳಿತ ಮುಂಜಾ ಗ್ರತಾ ಕ್ರಮಕ್ಕೆ ಮುಂದಾಗಿದೆ.

ಮೈಸೂರು ನಗರ ಸೇರಿದಂತೆ ಜಿಲ್ಲೆ ಯಾದ್ಯಂತ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಅಣಕು ಪ್ರದರ್ಶನದ ಮೂಲಕ ಕೋವಿಡ್ ಸೋಂಕು ಪ್ರಕರಣಗಳ ಸಮರ್ಥ ನಿರ್ವ ಹಣೆಗಾಗಿ ಮಾಡಿಕೊಂಡಿರುವ ಸಿದ್ಧತೆ ಗಳನ್ನು ವೈದ್ಯರು ಹಾಗೂ ಸಿಬ್ಬಂದಿ ಇಂದು ಪರಿಶೀಲನೆ ನಡೆಸಿದರು. ಜಿಲ್ಲಾ ಸರ್ಜನ್ ಡಾ.ಟಿ.ಅಮರನಾಥ ನೇತೃತ್ವದಲ್ಲಿ ಆರೋಗ್ಯ ಇಲಾಖೆ ತಂಡ ಸೋಮವಾರ ಮೈಸೂ ರಿನ ಕೆಆರ್‍ಎಸ್ ರಸ್ತೆಯಲ್ಲಿರುವ ಜಿಲ್ಲಾಸ್ಪತ್ರೆ ಯಲ್ಲಿ ಸಾಮಾನ್ಯ ಬೆಡ್‍ಗಳು, ಐಸಿಯು ಬೆಡ್‍ಗಳು, ಆಕ್ಸಿಜನ್ ಬೆಡ್‍ಗಳು, ಆಕ್ಸಿಜನ್ ಪೂರೈಕೆ ಯೂನಿಟ್, ಆಕ್ಸಿಜನ್ ಉತ್ಪಾ ದನಾ ಘಟಕಗಳು ಸಮರ್ಪಕವಾಗಿರುವು ದನ್ನು ಪರಿಶೀಲಿಸಿ ದೃಢಪಡಿಸಿಕೊಂಡಿತು.

ಮೈಸೂರು ಜಿಲ್ಲೆಯಲ್ಲಿ ಒಟ್ಟು 43 ಮಂದಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, ಆ ಪೈಕಿ ಮೂವರು ಮಾತ್ರ ಕೆ.ಆರ್. ಆಸ್ಪತ್ರೆ ಕೋವಿಡ್ ವಾರ್ಡ್‍ನಲ್ಲಿ ದಾಖ ಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು 70 ವರ್ಷದ ಮೇಲ್ಪಟ್ಟವರಾಗಿದ್ದು, ಹಲವು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರು ವರಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯಾ ಧಿಕಾರಿ ಡಾ.ಕೆ.ಹೆಚ್.ಪ್ರಸಾದ್ `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ. ಒಂದು ವೇಳೆ ಮೈಸೂರಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾದಲ್ಲಿ ಅವರಿಗೆ ಚಿಕಿತ್ಸೆ ನೀಡಲು ಎಲ್ಲಾ ಆಸ್ಪತ್ರೆಗಳಲ್ಲಿ ಹಾಸಿಗೆಗಳು, ಆಕ್ಸಿಜನ್ ಬೆಡ್‍ಗಳು, ಐಸಿಯು, ವೆಂಟಿಲೇಟರ್‍ಗಳ ಸಿದ್ಧತೆ ಮಾಡಿಕೊಳ್ಳಲಾಗಿದೆ. ದಾಖಲಾದ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಲು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದರು.

ಏಪ್ರಿಲ್ 7 ರಂದು ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವಿಯಾ ಅವರು ರಾಜ್ಯ ಆರೋಗ್ಯ ಸಚಿವರು, ಇಲಾಖೆ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿ ತಾವು ಆಸ್ಪತ್ರೆಗಳಿಗೆ ಭೇಟಿ ನೀಡಿ ಕೊರೊನಾ ಪ್ರಕರಣಗಳನ್ನು ನಿಭಾಯಿಸಲು ಕೈಗೊಂಡಿ ರುವ ಸಿದ್ಧತೆಗಳ ಬಗ್ಗೆ ಅಣಕು ಪ್ರದರ್ಶನ ನಡೆಸಿ, ಖಾತರಿಪಡಿಸಿಕೊಳ್ಳಿ ಎಂದು ಸೂಚನೆ ನೀಡಿದ್ದರು. ಜಿಲ್ಲಾ ಮತ್ತು ಇನ್ನಿತರೆ ಆಸ್ಪತ್ರೆಗಳಲ್ಲಿ ವಾರ್ಡ್‍ಗಳನ್ನು ಹಾಸಿಗೆ ಕಾಯ್ದಿರಿಸಿ, ಚಿಕಿತ್ಸೆಗೆ ಅಗತ್ಯವಿರುವ ಮೆಡಿಸಿನ್, ವೈದ್ಯಕೀಯ ಪರಿಕರ, ಪೂರಕ ಸೌಲಭ್ಯ ಗಳನ್ನು ಒದಗಿಸಲಾಗಿದೆಯೇ ಎಂಬುದನ್ನು ದೃಢಪಡಿಸಿಕೊಳ್ಳಿ ಎಂಬ ಕೇಂದ್ರ ಸಚಿ ವರ ಸೂಚನೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ಅವರ ನಿರ್ದೇ ಶನದಂತೆ ಜಿಲ್ಲಾ ಆರೋಗ್ಯಾಧಿಕಾರಿಗಳು ಇಂದು ಅಣುಕು ಪ್ರದರ್ಶನಕ್ಕೆ ಸಲಹೆ ನೀಡಿದ್ದರು. ಮೈಸೂರಿನ ಕೆ.ಆರ್. ಆಸ್ಪತ್ರೆ, ಎಸ್‍ಎಂಟಿ, ಪಿಕೆಟಿಬಿ, ಸೂಪರ್ ಸ್ಪೆಷಾ ಲಿಟಿ, ಟ್ರಾಮಾಕೇರ್ ಸೆಂಟರ್, ಇಎಸ್‍ಐ, ಜಿಲ್ಲಾ ಆಸ್ಪತ್ರೆ, ಎಲ್ಲಾ ತಾಲೂಕು ಸಾರ್ವ ಜನಿಕ ಆಸ್ಪತ್ರೆಗಳಲ್ಲಿ ಇಂದು ವೈದ್ಯರು, ಸಿಬ್ಬಂದಿ ಮಾಕ್ ಡ್ರಿಲ್ ನಡೆಸಿ ಕೋವಿಡ್ ಪಾಸಿಟಿವ್ ಪ್ರಕರಣಗಳನ್ನು ನಿಭಾಯಿ ಸಲು ಜಿಲ್ಲಾಡಳಿತ, ಜಿಲ್ಲಾ ಆರೋಗ್ಯಾ ಧಿಕಾರಿಗಳು ಕೈಗೊಂಡಿರುವ ಪೂರ್ವ ಸಿದ್ಧತೆಗಳನ್ನು ಖಾತರಿಪಡಿಸಿಕೊಂಡರು.

ಆರ್‍ಟಿ-ಪಿಸಿಆರ್ ಟೆಸ್ಟ್: ಆಸ್ಪತ್ರೆಗಳಿಗೆ ಬರುವ ರೋಗಿಗಳ ಪೈಕಿ ಜ್ವರ, ನೆಗಡಿ, ಮೈಕೈ ನೋವು, ತಲೆನೋವು, ಉಸಿ ರಾಟದ ತೊಂದರೆ ಇರುವವರನ್ನು ಗುರುತಿಸಿ ಮೈಸೂರಿನ ಕೆ.ಆರ್. ಆಸ್ಪತ್ರೆ ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಆರ್‍ಟಿಪಿಸಿಆರ್ ಟೆಸ್ಟ್ ಮಾಡಲಾಗುತ್ತಿದೆ. ಆದರೆ ಸಾರ್ವಜನಿಕ ರಿಗೆ ಟೆಸ್ಟ್ ಮಾಡುತ್ತಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಹೆಚ್. ಪ್ರಸಾದ್ ತಿಳಿಸಿದ್ದಾರೆ.

ತೀವ್ರ ಸೋಂಕು ಮತ್ತು ಅತೀವ ಉಸಿರಾಟ ತೊಂದರೆ, ಅಧಿಕ ಸೋಂಕು ಪ್ರಕರಣಗಳ ಪತ್ತೆಗೆ ರೋಗ ಲಕ್ಷಣಗಳಿರುವ ರೋಗಿಗಳಿಗೆ ಮಾತ್ರ ಆರ್‍ಟಿಪಿಸಿಆರ್ ಪರೀಕ್ಷೆ ಮಾಡಿಸು ತ್ತಿದ್ದೇವೆಯೇ ಹೊರತು, ಸಾರ್ವಜನಿಕರಿಗೆ ಕಡ್ಡಾಯವಲ್ಲ. ಮೈಸೂರು ಜಿಲ್ಲೆಯಲ್ಲಿ ಕೇವಲ 43 ಕೊರೊನಾ ಪಾಸಿಟಿವ್ ಕೇಸುಗಳಿವೆ. ಆದ್ದರಿಂದ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದ ಅವರು, ಆದರೆ ಅಗತ್ಯ ಮುಂಜಾಗ್ರತಾ ಕ್ರಮ ವಹಿಸಬೇಕು ಎಂದು ಡಾ. ಪ್ರಸಾದ್ ತಿಳಿಸಿದರು. ರೋಗ ಲಕ್ಷಣಗಳು ಕಂಡು ಬರುತ್ತಿವೆಯಾದರೂ, ಯಾರೂ ಆಸ್ಪತ್ರೆಗಳಲ್ಲಿ ದಾಖಲು ಮಾಡುವಷ್ಟು ತೀವ್ರತೆ ಇಲ್ಲವಾದ್ದರಿಂದ ಸಾರ್ವಜನಿಕರು ಆತಂಕಪಡಬೇಕಾಗಿಲ್ಲ. ಆದರೆ ಕೋವಿಡ್ ಮುನ್ನೆಚ್ಚರಿಕೆ ವಹಿಸುವುದು ಅವಶ್ಯ ಎಂದು ಡಾ. ಕೆ.ಹೆಚ್. ಪ್ರಸಾದ್ `ಮೈಸೂರು ಮಿತ್ರ’ನಿಗೆ ತಿಳಿಸಿದರು.

Translate »