ಸೋಲಾರ್ ಶಕ್ತಿ ಬಳಕೆಯಿಂದ ಆರ್ಥಿಕ ಹೊರೆ ಕಡಿತ
ಮೈಸೂರು

ಸೋಲಾರ್ ಶಕ್ತಿ ಬಳಕೆಯಿಂದ ಆರ್ಥಿಕ ಹೊರೆ ಕಡಿತ

January 25, 2019

ಮೈಸೂರು: ಸೌರಶಕ್ತಿ ಸೇರಿದಂತೆ ನವೀಕರಿಸಬಹುದಾದ ಶಕ್ತಿ ಮೂಲಗಳ ಬಳಕೆ ಯಿಂದ ಪರಿಸರಕ್ಕೂ ಪೂರಕ ವಾತಾವರಣ ನಿರ್ಮಾಣವಾಗಲಿದ್ದು, ನಮ್ಮ ಆರ್ಥಿಕ ಹೊರೆಯನ್ನು ತಗ್ಗಿಸಿಕೊಳ್ಳಬಹುದು ಎಂದು ಮೇಯರ್ ಪುಷ್ಪಲತಾ ಜಗನ್ನಾಥ್ ಅಭಿಪ್ರಾಯಪಟ್ಟರು.

ಮೈಸೂರಿನ ಜೆಎಲ್‍ಬಿ ರಸ್ತೆಯ ಎಂಜಿನಿಯರ್‍ಗಳ ಸಂಸ್ಥೆ ಸಭಾಂಗಣದಲ್ಲಿ ಕರ್ನಾಟಕ ನವೀಕರಿಸಬಹು ದಾದ ಇಂಧನ ಅಭಿವೃದ್ಧಿ ನಿಯಮಿತ (ಕೆಆರ್‍ಇ ಡಿಎಲ್) ವತಿಯಿಂದ ವಿದ್ಯುತ್ ಉಳಿತಾಯ, ಸೋಲಾರ್ ಬಳಕೆ ಹಾಗೂ ಸುರಕ್ಷಿತವಾಗಿ ಅಡುಗೆ ಅನಿಲ ಬಳ ಸುವ ವಿಧಾನ ಕುರಿತಂತೆ ವಿವಿಧ ಮಹಿಳಾ ಸಂಘಟನೆ ಗಳಿಗೆ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯುತ್ ಉತ್ಪಾದನೆ ಸೇರಿದಂತೆ ಅನೇಕ ವಿಧದಲ್ಲಿ ಇಂದು ಸೌರಶಕ್ತಿಯನ್ನು ಬಳಸಿಕೊಳ್ಳಬಹುದಾಗಿದೆ. ಇದು ನವೀಕರಿಸಬಹುದಾದ ಶಕ್ತಿ ಮೂಲವಾದ ಹಿನ್ನೆಲೆ ಯಲ್ಲಿ ಬರೀದಾಗುವ ಆತಂಕವೂ ಇಲ್ಲ. ಇದರ ಬಳಕೆ ಯಿಂದ ಆರ್ಥಿಕ ಹೊರೆ ಕಡಿಮೆ ಮಾಡಿಕೊಳ್ಳಬಹುದು. ಈ ಹಿಂದೆ ಅಡುಗೆ ಉರುವಲಿಗೆ ಮರಗಳನ್ನು ಕಡಿಯ ಲಾಗುತ್ತಿತ್ತು. ಇದೀಗ ಸೋಲಾರ್ ಬಳಕೆ ಸಾಕಷ್ಟು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮರಗಳ ಹನನ ಕಡಿಮೆ ಯಾಗಿದ್ದು, ಇದು ಸಮಾಧಾನಕರ ಸಂಗತಿ ಎಂದರು.

ಕೆಆರ್‍ಇಡಿಎಲ್ ಮೈಸೂರು ವಿಭಾಗೀಯ ಯೋಜನಾ ಅಭಿಯಂತರ ಡಿ.ಕೆ.ದಿನೇಶ್‍ಕುಮಾರ್ ಮಾತನಾಡಿ, ಪ್ರಸ್ತುತ ರಾಜ್ಯ ಎದುರಿಸುತ್ತಿರುವ ವಿದ್ಯುತ್ ಕೊರತೆ ನೀಗಿಸುವ ನಿಟ್ಟಿನಲ್ಲಿ ನವೀಕರಿಸಬಹುದಾದ ಇಂಧನ ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕಿದೆ. ಇಂದು ವಿದ್ಯುತ್ ಉತ್ಪಾದನೆಗಾಗಿ ಕಲ್ಲಿದ್ದಲು, ಡೀಸೆಲ್, ಅನಿಲ ಮೊದಲಾದ ಮೂಲಗಳನ್ನು ಹೆಚ್ಚಾಗಿ ಅವ ಲಂಬಿಸಲಾಗಿದೆ. ಈ ಮೂಲಗಳು ಕ್ರಮೇಣ ನಶಿಸುವ ಆತಂಕ ಎದುರಾಗಿದೆ ಎಂದು ಹೇಳಿದರು.

ಇಂಧನ ಉತ್ಪಾದನೆ ಮತ್ತು ಬಳಕೆಯಲ್ಲಿ ಅಗಾಧ ಪ್ರಮಾಣದಲ್ಲಿ ವ್ಯತ್ಯಾಸವಿದ್ದು, ಇಂತಹ ಪರಿಸ್ಥಿತಿಯಲ್ಲಿ ನವೀಕರಿಸಬಹುದಾದ ಮೂಲಗಳ ಬಳಕೆಗೆ ಹೆಚ್ಚು ಒತ್ತು ನೀಡಬೇಕಿದೆ. ಸೌರಶಕ್ತಿ, ಜಲಶಕ್ತಿ, ಗಾಳಿಶಕ್ತಿ, ಜೈವಿಕ ಶಕ್ತಿ ನವೀಕರಿಸಬಹುದಾದ ಮೂಲಗಳಾ ಗಿದ್ದು, ಇವುಗಳತ್ತ ಗಮನ ಹರಿಸುವುದು ಪ್ರಸ್ತುತದ ಅಗತ್ಯವಾಗಿದೆ ಎಂದು ತಿಳಿಸಿದರು.

ವಾರ್ಷಿಕ 3.41 ಲಕ್ಷ ಮೆ.ವ್ಯಾ. ವಿದ್ಯುತ್ ಉತ್ಪಾದನೆ: ದೇಶದಲ್ಲಿ ಎಲ್ಲಾ ಬಗೆಯ ಮೂಲಗಳಿಂದ ಪ್ರತಿ ವರ್ಷ 3.41 ಲಕ್ಷ ಮೆ.ವ್ಯಾ. ವಿದ್ಯುತ್ ಉತ್ಪಾದನೆ ಮಾಡು ತ್ತಿದ್ದು, ಈ ಪೈಕಿ ನವೀಕರಿಸಬಹುದಾದ ಇಂಧನ ಮೂಲ ಗಳಿಂದ 71 ಸಾವಿರ ಮೆ.ವ್ಯಾ. ವಿದ್ಯುತ್ ಉತ್ಪಾದಿಸ ಲಾಗುತ್ತಿದೆ. ಅದೇ ರೀತಿ ರಾಜ್ಯದಲ್ಲಿ 12,700 ಮೆ.ವ್ಯಾ. ವಿದ್ಯುತ್ ಅನ್ನು ನವೀಕರಿಸಬಹುದಾದ ಇಂಧನ ಮೂಲ ಗಳಿಂದ ಉತ್ಪಾದನೆ ಮಾಡಲಾಗುತ್ತಿದೆ. ಈ 12,700 ಮೆ.ವ್ಯಾ. ವಿದ್ಯುತ್‍ನಲ್ಲಿ 5,500 ಮೆ.ವ್ಯಾ. ವಿದ್ಯುತ್ ಅನ್ನು ಸೌರಶಕ್ತಿ ಮೂಲದಿಂದ ಉತ್ಪಾದಿಸಲಾಗುತ್ತಿದೆ ಎಂದರು.

ಕೇಂದ್ರ ಸರ್ಕಾರದ ನವ ಮತ್ತು ನವೀಕರಿಸಬಹು ದಾದ ಇಂಧನ ಮಂತ್ರಾಲಯವು ಮೈಸೂರು ನಗರ ವನ್ನು ಮಾದರಿ ಸೋಲಾರ್ ನಗರ ಎಂದು ಘೋಷಿ ಸಿದೆ. ಇದರಡಿ ಈಗಾಗಲೇ ಪಾಲಿಕೆ ಮುಖ್ಯ ಕಚೇರಿ ಸೇರಿದಂತೆ ಪಾಲಿಕೆಯ 7 ವಲಯ ಕಚೇರಿಗಳಿಗೆ ಸೋಲಾರ್ ಮೇಲ್ಛಾವಣಿ ಸ್ಥಾವರ ಅಳವಡಿಸಲಾಗಿದೆ. ಕಚೇರಿಗೆ ಬೇಕಾದ ವಿದ್ಯುತ್ ಅನ್ನು ಈ ಮೂಲಕವೇ ಪೂರೈಕೆ ಮಾಡಿಕೊಳ್ಳಲಾಗುತ್ತಿದೆ. ಇದೇ ಮಾದರಿ ಮಹಿಳೆಯರು ತಮ್ಮ ಮನೆಗೆ ಅಗತ್ಯವಿರುವ ವಿದ್ಯುತ್ ಅನ್ನು ತಮ್ಮ ಮನೆಯಲ್ಲೇ ಉತ್ಪಾದಿಸಿಕೊಳ್ಳಬಹುದಾಗಿದೆ. ಸೋಲಾರ್ ವಿದ್ಯುತ್ ಅನ್ನು ಪರಿವರ್ತಿಸಿಕೊಂಡು ಎಲ್ಲಾ ರೀತಿ ಯಲ್ಲೂ ಬಳಕೆ ಮಾಡಬಹುದು ಎಂದು ದಿನೇಶ್ ಕುಮಾರ್ ವಿವರಿಸಿದರು. ರಾಜ್ಯ ಸರ್ಕಾರದ ವರ್ಷದ ಮಹಿಳೆ ಪ್ರಶಸ್ತಿ ಪುರಸ್ಕøತರಾದ ಎ.ಆರ್.ಸುಧಾಮಣಿ ಅತಿಥಿಯಾಗಿ ಪಾಲ್ಗೊಂಡಿದ್ದರು.

ಇದೇ ವೇಳೆ ಸೌರಶಕ್ತಿ ಅಡುಗೆ ಉಪಕರಣಗಳು, ಸೋಲಾರ್ ವಿದ್ಯುತ್ ಉತ್ಪಾ ದನೆಯ ಉಪಕರಣಗಳು, ಎಲ್‍ಇಡಿ ಬಲ್ಬ್‍ಗಳನ್ನು ಪ್ರದರ್ಶಿಸಿ ಅವುಗಳ ಮಹತ್ವವನ್ನು ತಿಳಿಸಿಕೊಡಲಾಯಿತು. ಮೈತ್ರಿ ಮಹಿಳಾ ಕೂಟದ ಅಧ್ಯಕ್ಷೆ ಲತಾ ಸಿದ್ಧೇ ಗೌಡ, ಕಾರ್ಯದರ್ಶಿ ಪದ್ಮಾಸುರೇಶ್, ಎನ್‍ವಿಎಸ್ ಕ್ರಿಯೇಷನ್ಸ್‍ನ ರಂಜಿತಾ, ಇನ್ನರ್‍ವೀಲ್ ಕ್ಲಬ್ ಆಫ್ ಮೈಸೂರು ವೆಸ್ಟ್‍ನ ಅಧ್ಯಕ್ಷೆ ಸುನಿತಾ ಭಾಸ್ಕರ್, ನಾದ ಹಂಸಿಣಿ ಭಜನಾ ಸಂಘದ ಅಧ್ಯಕ್ಷೆ ಉಮಾದೇವಿ ಸೇರಿದಂತೆ ಈ ಎಲ್ಲಾ ಸಂಘಟನೆಗಳ ಪದಾಧಿಕಾರಿ ಗಳು ಹಾಗೂ ಕಾರ್ಯಕರ್ತರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

Translate »