ಸಾಫ್ಟ್‍ವೇರ್ ಮೇಲ್ದರ್ಜೆಗೆ: ಸ್ಥಗಿತಗೊಂಡಿದ್ದ ಆಸ್ತಿ ನೋಂದಣಿ ಕಾರ್ಯ ಪುನಾರಂಭ
ಮೈಸೂರು

ಸಾಫ್ಟ್‍ವೇರ್ ಮೇಲ್ದರ್ಜೆಗೆ: ಸ್ಥಗಿತಗೊಂಡಿದ್ದ ಆಸ್ತಿ ನೋಂದಣಿ ಕಾರ್ಯ ಪುನಾರಂಭ

January 25, 2019

ಮೈಸೂರು: ಸಾಫ್ಟ್‍ವೇರ್ ಮೇಲ್ದರ್ಜೆಗೇರಿಸುವ ಹಿನ್ನೆಲೆಯಲ್ಲಿ ಮೈಸೂರಿನ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಕಳೆದ ಎರಡು ದಿನಗಳಿಂದ ಸ್ಥಗಿತಗೊಂಡಿದ್ದ ಆಸ್ತಿ ನೋಂದಣಿ ಕಾರ್ಯ ಗುರುವಾರ ಪುನಾರಂಭಗೊಂಡಿತು.

ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಆಸ್ತಿ ನೋಂದಣಿಗೆ ಬಳಸಲಾಗುವ `ಕಾವೇರಿ’ ಸಾಫ್ಟ್‍ವೇರ್ ಮೇಲ್ದರ್ಜೆಗೇರಿಸುವ ಕಾರಣದಿಂದ ರಾಜ್ಯಾದ್ಯಂತ ಆಸ್ತಿ ನೋಂದಣಿ ಸ್ಥಗಿತಗೊಂಡಿತ್ತು. ಅಂತೆಯೇ ಮೈಸೂರು, ಚಾಮರಾಜನಗರಗಳಲ್ಲೂ ಎರಡು ದಿನಗಳಿಂದ ಆಸ್ತಿ ನೋಂದಣಿ ಕಾರ್ಯ ನಡೆದಿರಲಿಲ್ಲ. ಸಾಕಷ್ಟು ಮಂದಿ ತಮ್ಮ ಆಸ್ತಿ ನೋಂದಣಿಗಾಗಿ ಪರದಾಡುವಂತಾಗಿತ್ತು. ಸೋಮವಾರ ಸಂಜೆ ಸಾಫ್ಟ್‍ವೇರ್ ಮೇಲ್ದರ್ಜೆಗೆ ಸಂಬಂಧಿಸಿದ ಸಿಡಿ ಬಿಡುಗಡೆಯಾಗಿತ್ತು. ಮಂಗಳವಾರ ಸಿದ್ಧಲಿಂಗ ಶ್ರೀಗಳು ಶಿವೈಕ್ಯರಾದ್ದರಿಂದ ರಜೆ ನೀಡಲಾಗಿದ್ದ ಹಿನ್ನೆಲೆಯಲ್ಲಿ ಅಂದು ಮೇಲ್ದರ್ಜೆ ಕಾರ್ಯ ನಡೆದಿರಲಿಲ್ಲ. ಹೀಗಾಗಿ ಮೈಸೂರಿನ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಮತ್ತು ಮುಡಾ ಕಟ್ಟಡದಲ್ಲಿರುವ ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಬುಧವಾರ ಜನರು ಪರದಾಡುತ್ತಿದ್ದ ದೃಶ್ಯ ಕಂಡು ಬಂದಿತ್ತು.

ಸಾಫ್ಟ್‍ವೇರ್ ಮೇಲ್ದರ್ಜೆ ಹಿನ್ನೆಲೆಯಲ್ಲಿ ಆಸ್ತಿ ನೋಂದಣಿ ಕಾರ್ಯ ಸ್ಥಗಿತಗೊಂಡಿರುವ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಇಲ್ಲದ ಕಾರಣ, ಆಸ್ತಿ ನೋಂದಣಿಗಾಗಿ ಪರ ಊರುಗಳಿಂದ ಬಂದಿದ್ದ ಸಾಕಷ್ಟು ಮಂದಿ ಪರದಾಡಿದ್ದರು. ಮಾಹಿತಿ ನೀಡದ ಬಗ್ಗೆ ಉಪ ನೋಂದಣಾ ಧಿಕಾರಿಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಆದರೆ ಗುರುವಾರ ಜಿಲ್ಲಾ ಮಟ್ಟದ ಇಂಜಿನಿಯರು ಗಳ ನೆರವಿನಲ್ಲಿ ಆಸ್ತಿ ನೋಂದಣಿಯ ಸಾಫ್ಟ್‍ವೇರ್ ಮೇಲ್ದರ್ಜೆಗೇರಿಸಲಾಗಿದ್ದು, ಕೆಲವು ಸಣ್ಣ ಪುಟ್ಟ ತೊಂದರೆಗಳನ್ನು ಹೊರತುಪಡಿಸಿ ಆಸ್ತಿ ನೋಂದಣಿ ಕಾರ್ಯ ಸುಗಮವಾಗಿ ನಡೆಯಿತು. ಈ ಬಗ್ಗೆ ಮೈಸೂರು ಜಿಲ್ಲಾ ನೋಂದಣಾಧಿಕಾರಿ ವಿಜಯಲಕ್ಷ್ಮಿ ಇನಾಂದಾರ್ ಅವರು `ಮೈಸೂರು ಮಿತ್ರ’ದೊಡನೆ ಮಾತನಾಡಿ, ಸಾಫ್ಟ್‍ವೇರ್ ಮೇಲ್ದರ್ಜೆಗೇರಿಸುವ ಸಿಡಿ ಸೋಮವಾರ ಸಂಜೆ ಬಿಡುಗಡೆಯಾಗಿತ್ತು. ಮಂಗಳವಾರ ಸಿದ್ಧಲಿಂಗ ಶ್ರೀಗಳು ಶಿವೈಕ್ಯರಾಗಿದ್ದ ರಿಂದ ರಜೆ ಇತ್ತು. ಹೀಗಾಗಿ ಮೇಲ್ದರ್ಜೆಗೇರಿಸುವ ಕಾರ್ಯ ಬುಧವಾರ ಪೂರ್ಣಗೊಳಿಸಲಾಗಿ ದ್ದರೂ ಸಿಡಿ ಬರವಣಿಗೆ ಮಾತ್ರ ತೊಂದರೆ ಉಂಟಾಗಿತ್ತು. ಎಲ್ಲವೂ ಇಂದು ಬಗೆಹರಿದಿದ್ದು, ಜನರಿಗೆ ಆಸ್ತಿ ನೋಂದಣಿ ಕಾರ್ಯ ಅಡ್ಡಿಯಿಲ್ಲದೆ ಸಾಗಿದೆ ಎಂದು ಸ್ಪಷ್ಟಪಡಿಸಿದರು.

Translate »