ಕನಿಷ್ಠ ವೇತನ, ಸೇವಾ ಭದ್ರತೆಗೆ ಆಗ್ರಹಿಸಿ ಬಿಸಿಯೂಟ ತಯಾರಕರ ಪ್ರತಿಭಟನೆ
ಮೈಸೂರು

ಕನಿಷ್ಠ ವೇತನ, ಸೇವಾ ಭದ್ರತೆಗೆ ಆಗ್ರಹಿಸಿ ಬಿಸಿಯೂಟ ತಯಾರಕರ ಪ್ರತಿಭಟನೆ

January 25, 2019

ಮೈಸೂರು: ಕನಿಷ್ಠ ವೇತನ ಹಾಗೂ ಸೇವಾ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇ ರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್‍ನ (ಎಐಟಿಯುಸಿ ಅಂಗ ಸಂಘಟನೆ) ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಅಕ್ಷರ ದಾಸೋಹ ಬಿಸಿ ಯೂಟ ಯೋಜನೆಯಡಿ ದೇಶದಾದ್ಯಂತ 12 ಲಕ್ಷ ಸರ್ಕಾರಿ ಶಾಲೆಗಳಲ್ಲಿ 11 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ಪ್ರಯೋ ಜನ ಪಡೆಯುತ್ತಿದ್ದಾರೆ. ಇಂತಹ ಮಹತ್ವದ ಯೋಜನೆಯಲ್ಲಿ ದುಡಿಯುವ ಕಾರ್ಯಕರ್ತರಿಗೆ ಅತ್ಯಂತ ಕಡಿಮೆ ಗೌರವ ಧನ ನೀಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯ ಅಡುಗೆಯವರಿಗೆ 2,700 ರೂ. ಹಾಗೂ ಸಹಾ ಯಕರಿಗೆ 2,600 ರೂ. ಗೌರವಧನ ನೀಡುತ್ತಿದ್ದು, ಕೇಂದ್ರ ಸರ್ಕಾರ ಬಿಸಿಯೂಟ ತಯಾರಕರಿಗೆ 18 ಸಾವಿರ ರೂ. ಕನಿಷ್ಠ ವೇತನ ನೀಡಬೇಕು. ಅಲ್ಲದೆ, ಶಾಲಾ ಸಿಬ್ಬಂದಿ ಎಂದು ಪರಿಗಣಿಸಿ ಸೇವಾ ಭದ್ರತೆ ನೀಡಬೇಕು ಎಂದು ಒತ್ತಾಯಿಸಿದರು. ರಾಜ್ಯ ಸರ್ಕಾರ ಈ ಹಿಂದೆ ಭರವಸೆ ನೀಡಿದಂತೆ ಬಿಸಿಯೂಟ ತಯಾರಕರಿಗೆ ಮುಂಬರುವ ಬಜೆಟ್‍ನಲ್ಲಿ ವೇತನ ಹೆಚ್ಚಿಸಲು ಕ್ರಮ ವಹಿಸಬೇಕು. ಕಾರ್ಮಿಕರೆಂದು ಪರಿಗಣಿಸಿ ಕಾರ್ಮಿಕ ಕಾಯ್ದೆಯಡಿ ಸೌಲಭ್ಯ ನೀಡಬೇಕು. 2 ಲಕ್ಷ ರೂ. ಅಪಘಾತ ಪರಿಹಾರ ಹಾಗೂ 5 ಲಕ್ಷ ರೂ. ಮರಣ ಪರಿಹಾರ ನೀಡಬೇಕು. ಅಲ್ಲದೆ, ಬಿಸಿಯೂಟ ಪೂರೈಕೆಯನ್ನು ಖಾಸಗಿ ಸಂಸ್ಥೆಗಳಿಗೆ ವಹಿಸುವುದನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

ಸಂಘಟನೆ ಜಿಲ್ಲಾ ಸಂಚಾಲಕ ಕೆ.ಜಿ.ಸೋಮರಾಜೇ ಅರಸ್, ಸಂಘಟನೆಯ ಜಿಲ್ಲಾ ಮುಖಂಡರಾದ ಮಂಜುಳಾ, ಪದ್ಮಮ್ಮ, ಸಾವಿತ್ರಮ್ಮ, ಜಯಂತಿ, ಭಾಗ್ಯ, ಪ್ರಭಾಮಣಿ, ಪ್ರೇಮಾ, ವನಜಾಕ್ಷಿ, ಚಂದ್ರಮ್ಮ, ಪಾರ್ವತಮ್ಮ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »