ಮೈಸೂರು: ಉತ್ತರ ಪ್ರದೇಶದಲ್ಲಿ ರಾಜಕೀಯ ಅಸ್ತಿತ್ವ ಉಳಿಸಿ ಕೊಳ್ಳಲು ಕಾಂಗ್ರೆಸ್‍ನವರು ಪ್ರಿಯಾಂಕಾಗಾಂಧಿ ಅವರನ್ನು ಕರೆ ತರುತ್ತಿದ್ದಾರೆ ಎಂದು ಸಂಸದ ಪ್ರತಾಪ್‍ಸಿಂಹ ವ್ಯಂಗ್ಯವಾಡಿದ್ದಾರೆ. ಮೈಸೂರಿನ ರೈಲು ನಿಲ್ದಾಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಬರ್ಟ್‍ವಾದ್ರಾ ಎಂಬ ಕರಪ್ಷನ್ ಬ್ಯಾಗೇಜ್ ಹಿಡಿದು ಕೊಂಡು ಪ್ರಿಯಾಂಕಾಗಾಂಧಿ ರಾಜಕೀಯಕ್ಕೆ ಬರುತ್ತಿದ್ದಾರೆ ಎಂದರು.
ಉತ್ತರ ಪ್ರದೇಶದಲ್ಲಿ ಎಸ್ಪಿ ಮತ್ತು ಬಿಎಸ್ಪಿ ಪಕ್ಷಗಳು ಕಾಂಗ್ರೆಸ್ ಅನ್ನು ತಮ್ಮ ಜೊತೆ ಸೇರಿಸಿಕೊಳ್ಳುತ್ತಿಲ್ಲವಾದ್ದರಿಂದ ಅಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಹಾಗೂ ಪ್ರಿಯಾಂಕಾ ಗಾಂಧಿಯಿಂದ ತಮ್ಮ ಪಕ್ಷಕ್ಕೆ ಲಾಭವಾಗಬಹುದೆಂದು ಕಾಂಗ್ರೆಸ್‍ನವರು ಲೆಕ್ಕಾಚಾರ ಹಾಕಿರಬೇಕು ಎಂದು ಪ್ರತಾಪ್ ಸಿಂಹ ಹೇಳಿದರು.
ಪ್ರಿಯಾಂಕಾ ಗಾಂಧಿ ಮುಂದಿನ ದಿನಗಳಲ್ಲಿ ಅಲ್ಲಿನ ಜನರನ್ನು ಯಾವ ರೀತಿ ಎದುರಿಸುವರೆಂದು ಕಾದು ನೋಡೋಣ ಎಂದು ತಿಳಿಸಿದರು. ಬರ ಪರಿಸ್ಥಿತಿ ಅರಿಯದೆ ರೆಸಾರ್ಟ್‍ನಲ್ಲಿ ಕುಳಿತು ರಾಜಕೀಯ ಮಾಡುತ್ತಿದ್ದಾರೆಂದು ಹೇಳುತ್ತಿದ್ದ ಕಾಂಗ್ರೆಸ್ಸಿಗರು, ತಾವು ಮಾಡಿದ್ದೇನು? ರೆಸಾರ್ಟ್‍ನಲ್ಲಿ ಶಾಸಕರನ್ನು ಕೂಡಿಟ್ಟು ಶಾಸಕರು ಬಡಿದಾಡಿಕೊಳ್ಳುವಂತೆ ಮಾಡಿರುವುದನ್ನು ಜನ ನೋಡುತ್ತಿದ್ದಾರೆ. ನಾವು ಅಭಿವೃದ್ಧಿಯತ್ತ ಗಮನ ನೀಡಿದ್ದೇವೆ ಎಂದು ಎದಿರೇಟು ನೀಡಿದರು.