ಕನಿಷ್ಠ ಬೆಂಬಲ ಬೆಲೆಯಡಿ ಭತ್ತ ಖರೀದಿಗೆ ನ.23ರಿಂದ ನೋಂದಣಿ ಆರಂಭ
ಮೈಸೂರು

ಕನಿಷ್ಠ ಬೆಂಬಲ ಬೆಲೆಯಡಿ ಭತ್ತ ಖರೀದಿಗೆ ನ.23ರಿಂದ ನೋಂದಣಿ ಆರಂಭ

November 19, 2021

ಮೈಸೂರು,ನ.18-ಸರ್ಕಾರದ ಆದೇಶದಂತೆ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ 2021-22ನೇ ಸಾಲಿನ ಮುಂಗಾರು ಋತುವಿನಲ್ಲಿ ರೈತರು ಬೆಳೆದ ಭತ್ತವನ್ನು ರೈತರಿಂದ ನೇರವಾಗಿ ಖರೀದಿಸಲು ನ.23 ರಿಂದ ನೋಂದಣಿ ಆರಂಭವಾಗಲಿದೆ ಎಂದು ಜಿಲ್ಲಾ ಟಾಸ್ಕ್‍ಫೋರ್ಸ್ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಹೇಳಿದರು.

ಮೈಸೂರಿನ ಬಂಡಿಪಾಳ್ಯ ಎ.ಪಿ.ಎಂ.ಸಿ. ಆವರಣ, ನಂಜನಗೂಡು ಎ.ಪಿ.ಎಂ.ಸಿ. ಆವರಣ, ಬಿಳಿಗೆರೆ ಎಪಿಎಂಸಿ ಆವರಣ, ಟಿ.ನರಸೀ ಪುರ ಎ.ಪಿ.ಎಂ.ಸಿ. ಆವರಣ, ಬನ್ನೂರು ಎಪಿ ಎಂಸಿ ಆವರಣ, ಕೆ.ಆರ್.ನಗರ ಎ.ಪಿ.ಎಂ.ಸಿ. ಆವರಣ, ಚುಂಚನಕಟ್ಟೆಯ ಶ್ರೀರಾಮ ಚುಂಚನ ಕಟ್ಟೆ ಸಕ್ಕರೆ ಕಾರ್ಖಾನೆ ಆವರಣ, ಹೆಚ್.ಡಿ. ಕೋಟೆ ಎ.ಪಿ.ಎಂ.ಸಿ. ಆವರಣ, ಸರಗೂರು ಎಪಿಎಂಸಿ ಆವರಣ, ಹುಣಸೂರು ಎ.ಪಿ. ಎಂ.ಸಿ. ಆವರಣ, ರತ್ನಪುರಿ ಎಪಿಎಂಸಿ ಆವರಣ, ಪಿರಿಯಾಪಟ್ಟಣ ಎ.ಪಿ.ಎಂ.ಸಿ. ಆವರಣ, ಬೆಟ್ಟದಪುರ ಎಪಿಎಂಸಿ ಆವರಣದಲ್ಲಿ ಭತ್ತ ಖರೀದಿಸಲು ರೈತರ ನೋಂದಣಿ ಮಾಡಿಕೊಳ್ಳಲಾಗುತ್ತದೆ.

ನೋಂದಾಯಿಸಿಕೊಂಡ ರೈತರಿಂದ ಮಾತ್ರ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲಾಗುತ್ತಿದ್ದು, ರೈತರು ಸರಬರಾಜು ಮಾಡುವ ಭತ್ತದ ಗುಣಮಟ್ಟವನ್ನು ಪರಿವೀಕ್ಷಕರು ಪರಿಶೀಲಿಸಿ ದೃಢೀಕರಿಸಿದ ನಂತರವೇ ಖರೀ ದಿಸಲಾಗುವುದು. ರೈತರಿಂದ ಖರೀದಿಸುವ ಭತ್ತದ ಮೊತ್ತವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಪಾವತಿಸಲಾಗುವುದು ಎಂದರು. ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಹಂತೇಶಪ್ಪ, ಮೈಸೂರು ಉಪವಿಭಾಗಾಧಿಕಾರಿ ಕಮಲಾ ಬಾಯಿ, ಹುಣಸೂರು ಉಪವಿಭಾಗಾಧಿಕಾರಿ ವರ್ನಿತ್ ನೇಗಿ, ಆಹಾರ ಮತ್ತು ನಾಗರಿಕ ಸರಬರಾಜು ಜಂಟಿ ನಿರ್ದೇಶಕಿ ಕುಮುದಾ ಶರತ್ ಮತ್ತಿತರರು ಉಪಸ್ಥಿತರಿದ್ದರು.

Translate »