ಪೋಷಕರು ಪರಿತ್ಯಕ್ತ ಮಕ್ಕಳ ಸುಪರ್ದಿಗೆ ಪಡೆಯುವ ಸಂಬಂಧ  ನಿಯಮ ರೂಪಿಸಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ
News

ಪೋಷಕರು ಪರಿತ್ಯಕ್ತ ಮಕ್ಕಳ ಸುಪರ್ದಿಗೆ ಪಡೆಯುವ ಸಂಬಂಧ ನಿಯಮ ರೂಪಿಸಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

August 24, 2021

ಬೆಂಗಳೂರು,ಆ.23-ಪೋಷಕರು ಅಥವಾ ಪಾಲಕರು ತ್ಯಜಿಸುವ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿ ತನ್ನ ಸುಪರ್ದಿಗೆ ಪಡೆಯುವ ವೇಳೆ ಅನುಸರಿಸಬೇಕಾದ ನಿಯಮ ಗಳನ್ನು ಬಾಲ ನ್ಯಾಯ ಕಾಯ್ದೆಯಡಿ ರೂಪಿಸಬೇ ಕೆಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಮೈಸೂರಿನಲ್ಲಿ ಲೀವಿಂಗ್ ಟು ಗೆದರ್‍ನಲ್ಲಿದ್ದ ಜೋಡಿ ತಮಗೆ ಜನಿಸಿದ ಹೆಣ್ಣು ಮಗುವನ್ನು ಕೇವಲ 12 ದಿನದಲ್ಲೇ ಮಕ್ಕಳ ಕಲ್ಯಾಣ ಸಮಿತಿ ವಶಕ್ಕೆ ನೀಡಿದ ಪ್ರಕರಣದ ಬಗ್ಗೆ ಬೆಂಗಳೂರಿನ ‘ಲೆಟ್ಜ್ ಕಿಟ್ ಫೌಂಡೇಶನ್’ ಎಂಬ ಸರ್ಕಾರೇತರ ಸಂಸ್ಥೆ ದಾಖಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ನೇತೃತ್ವದ ಪೀಠವು ಕೆಲವು ಮಾರ್ಗಸೂಚಿಗಳನ್ನು ಕೂಡ ನೀಡಿ, ಅಗತ್ಯ ನಿಯಮ ರೂಪಿಸುವಂತೆ ಸರ್ಕಾರಕ್ಕೆ ಆದೇಶ ನೀಡಿ ಅರ್ಜಿ ಯನ್ನು ಇತ್ಯರ್ಥಗೊಳಿಸಿದೆ.

ವಿವರ: ಕಾಲೇಜಿನಲ್ಲಿ ಸಹಪಾಠಿಗಳಾಗಿದ್ದ ಯುವಕ ಮತ್ತು ಯುವತಿ ಮೈಸೂರಿನ ಸರಸ್ವತಿಪುರಂನಲ್ಲಿ ಮನೆಯೊಂದನ್ನು ಬಾಡಿಗೆಗೆ ಪಡೆದು ಲೀವಿಂಗ್ ಟು ಗೆದರ್‍ನಲ್ಲಿದ್ದು, ಶಿಕ್ಷಣವನ್ನು ಮುಂದು ವರೆಸಿದ್ದರು. ಸುಮಾರು 2 ವರ್ಷಗಳ ಕಾಲ ಈ ಜೋಡಿ ಲೀವಿಂಗ್ ಟು ಗೆದರ್‍ನಲ್ಲಿದ್ದು, ಯುವತಿ ಗರ್ಭವತಿಯಾಗಿ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು.

ಮದುವೆಯಾಗದೆ ಜನಿಸಿದ ಮಗುವನ್ನು ಸ್ವೀಕರಿಸಲು ಈ ಜೋಡಿ ಹಾಗೂ ಅವರ ಕುಟುಂಬದವರು ನಿರಾಕರಿಸಿ, ಕೇವಲ 12 ದಿನದಲ್ಲೇ ಮಗುವನ್ನು ಮಕ್ಕಳ ಕಲ್ಯಾಣ ಸಮಿತಿ ಸುಪರ್ದಿಗೆ ನೀಡಿದ್ದರು. ಮಗುವನ್ನಿಟ್ಟುಕೊಂಡು ಶಿಕ್ಷಣ ಮುಂದುವರೆಸಲು ಕಷ್ಟಸಾಧ್ಯವೆಂಬ ಕಾರಣವನ್ನು ನೀಡಿದ್ದ ಈ ಜೋಡಿ ಮಗುವನ್ನು ದತ್ತು ನೀಡಲು ಕೂಡ ಒಪ್ಪಿಗೆ ಸೂಚಿಸಿತ್ತು. ಮೈಸೂರಿನ ಪೊಲೀ ಸರು ಮತ್ತು ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು ಎಷ್ಟೇ ತಿಳುವಳಿಕೆ ಹೇಳಿದರೂ ಈ ಜೋಡಿಯಾಗಲೀ ಅವರ ಕುಟುಂಬಸ್ಥರಾಗಲೀ ಮಗುವನ್ನು ಸಾಕಲು ಸ್ಪಷ್ಟವಾಗಿ ನಿರಾಕರಿಸಿದ್ದರು. ಅನ್ಯ ಮಾರ್ಗ ವಿಲ್ಲದೆ ಮಕ್ಕಳ ಕಲ್ಯಾಣ ಸಮಿತಿ ಮಗುವನ್ನು ಸುಪರ್ದಿಗೆ ಪಡೆದು ಸ್ವಯಂ ಸೇವಾ ಸಂಸ್ಥೆಯೊಂದಕ್ಕೆ ನೀಡಿದ್ದರು. ಅಲ್ಲದೆ ಸ್ವಯಂ ಸೇವಾ ಸಂಸ್ಥೆಗೆ ಮಗುವನ್ನು ಒಪ್ಪಿಸುವ ಪ್ರಕ್ರಿಯೆ ಮುಗಿದಿದ್ದು, ಈ ಮಗುವನ್ನು ದತ್ತು ಪ್ರಕ್ರಿಯೆಗೆ ಒಳಪಡಿಸಬಹುದು ಎಂಬ ಪ್ರಮಾಣಪತ್ರವನ್ನೂ ಕೂಡ ನೀಡಲಾಗಿತ್ತು. ಈ ವಿಚಾರ ಮಾಧ್ಯಮ ಗಳಲ್ಲಿ ಪ್ರಸಾರಗೊಂಡ ಹಿನ್ನೆಲೆಯಲ್ಲಿ ಅದನ್ನು ಆಧಾರವಾಗಿಟ್ಟು ಕೊಂಡು ಲೆಟ್ಜ್ ಕಿಟ್ ಫೌಂಡೇಶನ್ ಸಂಸ್ಥೆಯು ಹೈಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಪ್ರಕರಣ ದಾಖಲಿಸಿತ್ತು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಗಳು ಮಕ್ಕಳ ಕಲ್ಯಾಣ ಸಮಿತಿಗಳು ಮಗುವನ್ನು ವಶಕ್ಕೆ ಪಡೆಯುವ ವೇಳೆ ಅನುಸರಿಸಬೇಕಾದ ಮಾರ್ಗಸೂಚಿಗಳ ಬಗ್ಗೆ ಯಾವುದೇ ನಿಯಮ ಗಳು ಇಲ್ಲದಿರುವುದನ್ನು ಗಮನಿಸಿ, ಬಾಲನ್ಯಾಯ ಕಾಯ್ದೆ 2015ರ ಸೆಕ್ಷನ್ 110(2)ರಡಿ ಅಧಿಕಾರ ವನ್ನು ಬಳಸಿ ಈ ಸಂಬಂಧ 3 ತಿಂಗಳ ಒಳಗಾಗಿ ನಿಯಮ ರೂಪಿಸ ಬೇಕೆಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದರು. ಅಲ್ಲದೆ, ಈ ಕೆಳಕಂಡಂತೆ ಮಾರ್ಗಸೂಚಿಗಳನ್ನು ಹೈಕೋರ್ಟ್ ನೀಡಿದೆ.

ಮಾರ್ಗಸೂಚಿಗಳು: ಮಗುವನ್ನು ಮಕ್ಕಳ ಕಲ್ಯಾಣ ಸಮಿತಿ ಸುಪರ್ದಿಗೆ ಪಡೆಯುವ ಮುನ್ನ ಪೋಷಕರು ಅಥವಾ ಪಾಲಕರ ಆಳವಾದ ವಿಚಾರಣೆ ನಡೆಸುವುದರ ಜೊತೆಗೆ ಕೌನ್ಸಿಲಿಂಗ್ ನಡೆಸ ಬೇಕು. ಪೋಷಕರಿಬ್ಬರ ಬಳಿಯೂ ಪ್ರತ್ಯೇಕವಾಗಿ ಅಥವಾ ಒಟ್ಟಿಗೆ ಸಮಾಲೋಚನೆ ನಡೆಸಬೇಕು. ಮಗುವನ್ನು ತ್ಯಜಿಸುತ್ತಿರುವುದಕ್ಕೆ ಭೌತಿಕ, ಭಾವನಾತ್ಮಕ ಹಾಗೂ ಸಾಮಾಜಿಕ ಕಾರಣಗಳನ್ನು ವಿವರವಾಗಿ ಪಡೆಯಬೇಕು. ಒಂದೊಮ್ಮೆ ಪ್ರಕರಣದಲ್ಲಿ ಮತ್ತೊಬ್ಬರ ವಿಚಾರಣೆ ನಡೆಸಬೇಕೆಂಬ ಅಭಿಪ್ರಾಯ ಬಂದಲ್ಲಿ ಅದನ್ನೂ ಮಾಡಬೇಕು. ಈ ವೇಳೆ ಸರ್ಕಾರದ ಆರೋಗ್ಯ ಸಂಸ್ಥೆ, ವೈದ್ಯಕೀಯ ಕಾಲೇಜಿನ ಮನಶಾಸ್ತ್ರಜ್ಞರ ನೆರವು ಪಡೆಯಬೇಕು. ಮಗುವನ್ನು ತ್ಯಜಿಸಲು ಮುಂದಾದವರಿಗೆ 2 ತಿಂಗಳ ಕಾಲಾವಕಾಶ ನೀಡಿ ನಂತರವೂ ಅವರು ತಮ್ಮ ನಿರ್ಧಾರ ಮರುಪರಿಶೀಲಿಸದೇ ಇದ್ದಾಗ ಅಂತಹವರನ್ನು ಮಕ್ಕಳ ಕಲ್ಯಾಣ ಸಮಿತಿ ಮರು ವಿಚಾರಣೆಗೆ ಒಳಪಡಿಸಿ, ಆನಂತರವೇ ಪರಿಣಿತ ಸಂಸ್ಥೆಗೆ ದತ್ತು ನೀಡಬೇಕು. ಮಗುವನ್ನು ದತ್ತು ನೀಡಬಹು ದಾದ ಸಂಸ್ಥೆಯ ಹಿನ್ನೆಲೆ ಬಗ್ಗೆ ಸಮಿತಿಯ ಸದಸ್ಯರಿಗೆ ಸಂಪೂರ್ಣ ಅರಿವಿರಬೇಕು. ದತ್ತು ಪಡೆಯಲು ಅರ್ಜಿ ಸಲ್ಲಿಸಿದ ಸಂಸ್ಥೆಗಳು ಅಕ್ರಮ ಚಟುವಟಿಕೆಯಲ್ಲಿ ಪಾಲ್ಗೊಂಡಿವೆಯೇ ಎಂಬುದನ್ನು ಪರಿಶೀಲಿಸ ಬೇಕು. ಅರ್ಜಿಯ ನೈಜತೆ, ಸಂಸ್ಥೆಯ ನೋಂದಣಿ ಪತ್ರ ಹಾಗೂ ಅದರ ವಿಶ್ವಾಸಾರ್ಹತೆಯನ್ನು ಪರಿಶೀಲಿಸಬೇಕು. ಅರ್ಜಿ ಸಲ್ಲಿಕೆಯ ಹಿಂದೆ ಸಂಸ್ಥೆ ಯಾವುದಾದರೂ ಲಾಭಗಳಿಸುವ ಉದ್ದೇಶ ಹೊಂದಿ ದೆಯೇ ಎಂಬ ಬಗ್ಗೆ ಸಮಿತಿ ತನ್ನ ವಿವೇಚನೆ ಬಳಸಿ ನಿರ್ಧಾರಕ್ಕೆ ಬರಬೇಕು ಎಂದು ಹೈಕೋರ್ಟ್‍ನ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

Translate »