ಮೈಸೂರು,ನ.2(ಎಂಟಿವೈ)-ಕಳೆದ ಕೆಲವು ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದ ಭಾರೀ ಪ್ರಮಾಣದ ಹಾನಿ ಯುಂಟಾಗಿದ್ದು, ಸಂತ್ರಸ್ತರಿಗೆ ಪÀರಿಹಾರ ನೀಡಲು ಅನುದಾನ ಬಿಡುಗಡೆ ಆಗಿಲ್ಲ. ಸಂತ್ರಸ್ತರು ಸಾರ್ವಜನಿಕರು ನಮಗೆ ಹಿಡಿಶಾಪ ಹಾಕುತ್ತಿದ್ದಾರೆ. ಕ್ಷೇತ್ರಾಭಿವೃದ್ಧಿಗೆ ಯಾವುದೇ ಅನುದಾನವೂ ಬಂದಿಲ್ಲ ಎಂದು ಜಿಲ್ಲೆಯ ಬಹುತೇಕ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸಮ್ಮುಖ ದಲ್ಲಿಯೇ ಸರ್ಕಾರ, ಜಿಲ್ಲಾಡಳಿತದ ವಿರುದ್ಧ ಕಿಡಿಕಾರಿದರು.
ಮೈಸೂರು ಜಿ.ಪಂ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅಧ್ಯಕ್ಷತೆಯಲ್ಲಿ ಮಳೆ ಹಾನಿ ಸಂಬಂಧ ಸೋಮವಾರ ನಡೆದ ಅಧಿಕಾರಿಗಳು, ಜನಪ್ರತಿನಿಧಿಗಳ ಸಭೆಯಲ್ಲಿ ಬಹುತೇಕ ಶಾಸಕರು ಆಕ್ರೋಶ ಹೊರಹಾಕಿ ಮಳೆ ಹಾನಿ ಸಂತ್ರಸ್ತರಿಗೆ ತುರ್ತು ಪರಿಹಾರ ಕ್ಕಾಗಿ ಅನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿದರು.
ಆಡಳಿತಾರೂಢ ಬಿಜೆಪಿ ಶಾಸಕರಾದ ಎಲ್.ನಾಗೇಂದ್ರ, ಹರ್ಷವರ್ಧನ್ ಅನುದಾನ ಬಿಡುಗಡೆ ಮಾಡಿಲ್ಲವೆಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರೆ, ವಿರೋಧ ಪಕ್ಷಗಳ ಶಾಸಕರಾದ ಕೆ.ಮಹದೇವ, ಹೆಚ್.ಪಿ.ಮಂಜುನಾಥ್, ಸಾ.ರಾ.ಮಹೇಶ್ ಸರ್ಕಾರದ ವಿರುದ್ಧ ಖಾರವಾಗಿ ಮಾತ ನಾಡಿದರು. ಶಾಸಕ ಜಿ.ಟಿ.ದೇವೇಗೌಡ, ತನ್ವೀರ್ ಸೇಠ್ ಕೂಡ ಅಸಮಾಧಾನ ಹೊರ ಹಾಕಿದರು.
ಶಾಪ ತಟ್ಟಲಿದೆ: ಪಿರಿಯಾಪಟ್ಟಣದ ಶಾಸಕ ಕೆ.ಮಹದೇವ ಮಾತನಾಡಿ, ತಮ್ಮ ಕ್ಷೇತ್ರದಲ್ಲಿ ಕಳೆದ 2 ವರ್ಷದ ಹಿಂದೆ ಸುರಿದ ಭಾರೀ ಮಳೆಯಿಂದ ಮನೆಗಳಿಗೆ ಆಗಿರುವ ಹಾನಿಗೆ ಇದುವರೆವಿಗೂ ಪರಿಹಾರ ನೀಡಿಲ್ಲ. ಪರಿಹಾರ ವಿಳಂಬವಾದರೆ ಸಂತ್ರಸ್ತರು ಜೀವನ ರೂಪಿಸಿಕೊಳ್ಳುವುದಾದರೂ ಹೇಗೆ ಎಂದು ಕ್ಷೇತ್ರದ ಜನರ ಬಗ್ಗೆ ಕಳವಳ ವ್ಯಕ್ತಪಡಿಸಿದರಲ್ಲದೆ, ಕೂಡಲೇ ಪರಿಹಾರ ನೀಡಲು ಅನುದಾನ ಬಿಡುಗಡೆ ಮಾಡಿ ಮನೆ ನಿರ್ಮಿಸಿಕೊಳ್ಳಲು ನೆರವಾಗಬೇಕು. ಇಲ್ಲದಿದ್ದರೆ ಅವರ ಶಾಪ ನಮಗೆ-ನಿಮಗೆ ತಟ್ಟಲಿದೆ ಎಂದು ಎಚ್ಚರಿಸಿದರು.
ಒಂದು ರೂಪಾಯಿನೂ ಬಂದಿಲ್ಲ: ನಂಜನಗೂಡು ಕ್ಷೇತ್ರದ ಶಾಸಕ ಬಿ.ಹರ್ಷವರ್ಧನ್ ಮಾತನಾಡಿ, ಕಳೆದ 3 ವರ್ಷ ಗಳಿಂದ ತಮ್ಮ ಕ್ಷೇತ್ರಕ್ಕೆ ಒಂದು ರೂಪಾಯಿ ಅನುದಾನವೂ ಬಂದಿಲ್ಲ. ಮಳೆಯಿಂದ ಅಪಾರ ನಷ್ಟವಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿದ್ದು, ಸರ್ಕಾರದಲ್ಲಿ ದುಡ್ಡು ಇದೆಯೋ, ಇಲ್ಲವೋ ಎಂಬ ಅನುಮಾನ ನನ್ನನ್ನು ಕಾಡುತ್ತಿದೆ. ವಿವಿಧ ಕಾಮಗಾರಿಗಳ ಬಗ್ಗೆ ಜಿಪಂ, ತಾಪಂಗೆ ಕ್ರಿಯಾ ಯೋಜನೆ ಕಳುಹಿಸಿದ್ದು, ಅದಕ್ಕೂ ಅನುಮೋದನೆ ದೊರೆತಿಲ್ಲ. ನಮ್ಮ ಕ್ಷೇತ್ರದಲ್ಲಿ ಹಲವು ಶಾಲೆಗಳ ಗೋಡೆಗಳು ಕುಸಿದಿದೆ. ಅದನ್ನು ನಿರ್ಮಿಸಬೇಕು. ಅದಕ್ಕಾಗಿ 3 ಕೋಟಿ ರೂ. ಅಗತ್ಯವಿದೆ. ಕಪಿಲಾ ನದಿಯಿಂದ ಉಂಟಾಗುವ ಪ್ರವಾಹ ಹಾನಿ ತಡೆಗೆ ತಡೆಗೋಡೆ ನಿರ್ಮಿಸಲು ಉz್ದÉೀಶಿಸಿರುವ ಪ್ರಸ್ತಾವನೆ ಏನು ಆಗಿದೆಯೋ ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಹಣ ಬಿಡುಗಡೆ ಮಾಡಿಸಿ: ಶಾಸಕ ಎಲ್.ನಾಗೇಂದ್ರ ಮಾತ ನಾಡಿ, ಮಳೆಯಿಂದ ಮೈಸೂರು ನಗರದಲ್ಲಿ ಅಪಾರ ಪ್ರಮಾಣ ದಲ್ಲಿ ಹಾನಿಯಾಗಿದೆ. ಮಳೆ ನೀರಿನ ಚರಂಡಿಗಾಗಿ 152 ಕೋಟಿ ರೂ. ಮತ್ತು ಒಳಚರಂಡಿ ಕೊಳವೆ ಮಾರ್ಗ ನಿರ್ಮಾ ಣಕ್ಕೆ 130 ಕೋಟಿ ರೂ. ಸೇರಿದಂತೆ 284 ಕೋಟಿ ರೂ. ಪ್ರಸ್ತಾ ವನೆಯನ್ನು ಪಾಲಿಕೆ ಸಲ್ಲಿಸಿದೆ. ಇದನ್ನು ಹೊರತು ಪಡಿಸಿ ಬಹಳಷ್ಟು ಸಾರ್ವಜನಿಕ ಆಸ್ತಿ ಹಾನಿಯಾಗಿದ್ದು, ಸಮಸ್ಯೆ ಪರಿ ಹಾರಕ್ಕೆ ಸಾವಿರಾರು ಕೋಟಿ ರೂ.ಬೇಕಾಗಿದೆ. ನಮ್ಮದೇ ಸರ್ಕಾರ ವಿರುವುದರಿಂದ ತ್ವರಿತವಾಗಿ ಬಿಡುಗಡೆ ಮಾಡಿಸಿ. ಇಲ್ಲವಾ ದರೆ ಜನರಿಗೆ ಉತ್ತರ ಕೊಡುವುದು ಕಷ್ಟಕರವಾಗುತ್ತದೆ. ಲ್ಯಾನ್ಸ್ ಡೌನ್ ಕಟ್ಟಡದ ಒಂದು ಭಾಗ ಕುಸಿದು ಬಿದ್ದು ಅನೇಕ ವರ್ಷವೇ ಆಗಿದೆ. ಇನ್ನೂ ಅಭಿವೃದ್ಧಿ ಆಗಿಲ್ಲ. ಇದು ನಾಚಿಕೆ ಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಸ್ಟರ್ ಪ್ಲಾನ್ ತಯಾರಿಸಿ: ಮಳೆಯಿಂದ ಉಂಟಾಗುವ ಸಮಸ್ಯೆ ಬಗೆಹರಿಸಲು 10 ವರ್ಷದಲ್ಲಿ 1 ಸಾವಿರ ಕೋಟಿ ರೂ.ಖರ್ಚಾಗಿದೆ. ಆದರೆ, ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ನಾಲೆ, ರಾಜಕಾಲುವೆ, ಒಳಚರಂಡಿ ಸಮಸ್ಯೆ ಹಾಗೆ ಇದೆ. ಇದಕ್ಕೆಲ್ಲ ಶಾಶ್ವತ ಪರಿಹಾರಕ್ಕಾಗಿ ಮಾಸ್ಟರ್ ಪ್ಲಾನ್ ತಯಾರಿ ಸಬೇಕು. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕಾರ್ಯಪಡೆ ಮಾದರಿ ಯಲ್ಲಿ ತಂಡ ರಚಿಸಿ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗ ಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ಸಲಹೆ ನೀಡಿದರು.
ಸಚಿವರಿಗೆ ಕಳಂಕ: ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಎಸ್.ಟಿ.ಸೋಮಶೇಖರ್ ಅವಧಿಯಲ್ಲಿ ಜಿಲ್ಲೆಗೆ ಅತ್ಯಂತ ಕಡಿಮೆ ಅನುದಾನ ಬಂದಿದೆ. ಇದು ಕಳಂಕ ತರುವ ವಿಷಯ ಎಂದು ಟೀಕಿಸುವ ಮೂಲಕ ಮಾತು ಆರಂಭಿಸಿದ ಹುಣಸೂರು ಶಾಸಕ ಹೆಚ್.ಪಿ.ಮಂಜುನಾಥ್, ಯಾವ ಇಲಾಖೆಗಳಿಗೂ ಅನುದಾನ ಕೊಟ್ಟಿಲ್ಲ. ಇದರಿಂದ ಸಚಿವರು ಅಪಖ್ಯಾತಿಗೆ ಒಳ ಗಾಗಬಾರದು. ಸರ್ಕಾರದ ಮೇಲೆ ಒತ್ತಡ ಹೇರಿ ಬಾಕಿ ಇರುವ ಅನುದಾನವನ್ನು ಬಿಡುಗಡೆ ಮಾಡಿಸಿ ಸ್ಥಗಿತಗೊಂಡಿರುವ ವಿವಿಧ ಕಾಮಗಾರಿಗಳಿಗೆ ಮರುಚಾಲನೆ ನೀಡಬೇಕು. ಹುಣ ಸೂರು ಪಟ್ಟಣದಲ್ಲಿ 82 ಅನಧಿಕೃತ ಬಡಾವಣೆಯಲ್ಲೇ ಮಳೆ ಯಿಂದ ಹೆಚ್ಚು ಹಾನಿಯಾಗಿದ್ದು, ಅಲ್ಲಿಯ ನಿವಾಸಿಗಳನ್ನು ಅನಾಥವಾಗಿ ಬಿಟ್ಟು ಹೋಗಿರುವ ಡೆವಲಪರ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕೋವಿಡ್ ಪರಿಹಾರ ಬಂದಿಲ್ಲ: ಶಾಸಕ ಸಾ.ರಾ.ಮಹೇಶ್ ಮಾತನಾಡಿ, 7-8 ತಿಂಗಳಿಂದ ವಿವಿಧ ಯೋಜನೆಯಡಿ ಪಿಂಚಣಿ, ಮಾಸಾಶನ ಬಂದಿಲ್ಲ. ಕೋವಿಡ್‍ನಿಂದ ಮೃತರ ಕುಟುಂಬಕ್ಕೆ ಇನ್ನೂ 1 ಲಕ್ಷ ರೂ.ಪರಿಹಾರ ಬಂದಿಲ್ಲ. ಕೆ.ಆರ್.ನಗರ ತಾಲೂ ಕಿನ ಚುಂಚನಕಟ್ಟೆಯ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ಪುನರಾರಂಭಕ್ಕೆ ಕೂಡಲೇ ಕ್ರಮ ವಹಿಸಬೇಕು. ಇಲ್ಲವಾದರೆ, 8 ತಾಲೂಕಿನ ಜನರಿಗೆ ತೊಂದರೆಯಾಗಲಿದೆ ಎಂದು ತಮ್ಮ ಕ್ಷೇತ್ರದ ಜನರ ಬವಣೆ ಬಿಚ್ಚಿಟ್ಟರು.
ಸಮಗ್ರ ಕ್ರಿಯಾಯೋಜನೆ ರೂಪಿಸಿ: ಶಾಸಕ ತನ್ವೀರ್ ಸೇಠ್ ಮಾತನಾಡಿ, ಮೈಸೂರು ನಗರದ ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ಕಲ್ಪಿಸಬೇಕು. ಅದಕ್ಕಾಗಿ ಪ್ರತ್ಯೇಕ ಪ್ರಸ್ತಾವನೆ ಸಲ್ಲಿಸುವುದರಿಂದ ಏನೂ ಪ್ರಯೋಜನ ವಾಗಲ್ಲ. ನಗರದ ಅಭಿವೃದ್ಧಿ ಕುರಿತು ಸಮಗ್ರ ಕ್ರಿಯಾ ಯೋಜನೆ ರೂಪಿಸಿ ಪಾಲಿಕೆ, ಮುಡಾಗೆ ಕೆಲಸ ಹಂಚಿಕೆ ಮಾಡಬೇಕು ಎಂದು ಸಲಹೆ ನೀಡಿದರು.
ಸಿಎಂನೊಂದಿಗೆ ಚರ್ಚಿಸಿ ಕ್ರಮ: ಶಾಸಕರ ಸಮಸ್ಯೆಯನ್ನು ಆಲಿ ಸಿದ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ಮಳೆ ಯಿಂದಾಗಿ ಮೈಸೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿದೆ.
ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ರಲ್ಲದೆ, ಕೋವಿಡ್ ಸಾವಿನ ಪರಿಹಾರ ವಿತರಣೆಗೆ ತಹಸೀಲ್ದಾರ್, ತಾಲೂಕು ಆರೋಗ್ಯ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಸೂಚಿಸಿದರು. ಸಚಿವರ ಸೂಚನೆ ಮೇರೆಗೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಮಾತನಾಡಿ, ಪರಿಹಾರಕ್ಕಾಗಿ ಸಂತ್ರಸ್ತ ರಿಂದ ಅನಗತ್ಯ ದಾಖಲಾತಿ ಕೇಳುವಂತಿಲ್ಲ. ಮರಣ ಪ್ರಮಾಣ ಪತ್ರ, ಪಡಿತರ ಚೀಟಿ ಮತ್ತು ಬ್ಯಾಂಕ್ ಖಾತೆ ಮಾಹಿತಿ ಯಷ್ಟೇ ಸಾಕು. ಇದನ್ನು ಆಧರಿಸಿ ಪರಿಹಾರ ಬಿಡುಗಡೆ ಮಾಡ ಬೇಕು ಎಂದು ತಹಸೀಲ್ದಾರ್‍ಗಳಿಗೆ ಸೂಚನೆ ನೀಡಿದರು