ಮೈಸೂರು, ಜ.20- ಜನವರಿ 26 ರಂದು ನಡೆ ಯುವ ಗಣರಾಜ್ಯೋತ್ಸವ ಸಮಾರಂಭವನ್ನು ಕೋವಿಡ್-19 ಹಿನ್ನೆಲೆಯಲ್ಲಿ ಸರಳವಾಗಿ ಆಚರಿ ಸಲಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಎಸ್. ಮಂಜುನಾಥ್‍ಸ್ವಾಮಿ ತಿಳಿಸಿದರು.
ಗಣರಾಜ್ಯೋತ್ಸವ ದಿನಾಚರಣೆ ಕುರಿತು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೋವಿಡ್-19 ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗ ಸೂಚಿಗಳನ್ನು ಅಳವಡಿಸಿಕೊಂಡು ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲು ಅಗತ್ಯ ವಿರುವ ಸಿದ್ಧತೆ ಮಾಡಿಕೊಳ್ಳಬೇಕು ಎಂದು ವಿವಿಧ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು. ಈ ಬಾರಿಯ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಪ್ರತೀ ವರ್ಷ ದಂತೆ ಬನ್ನಿಮಂಟಪದ ಪಂಜಿನ ಕವಾಯತು ಮೈದಾನ ದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಧ್ವಜಾರೋಹಣ ನೆರವೇರಿಸಿ, ಸಾರ್ವ ಜನಿಕರಿಗೆ ಸಂದೇಶ ನೀಡುವರು. ಈ ಬಾರಿ ಪೆÇಲೀಸ್ ಪರೇಡ್ ಮಾತ್ರ ಇರಲಿದ್ದು, ಕೋವಿಡ್-19 ಹಿನ್ನೆಲೆ ಶಾಲಾ ಮಕ್ಕಳ ಪರೇಡ್ ನಡೆಸಲಾಗುತ್ತಿಲ್ಲ ಎಂದರು.
ಇತ್ತೀಚೆಗೆ ಜಿಲ್ಲೆಯಲ್ಲಿ ಕೋವಿಡ್-19 ಪೀಡಿತರ ಸಂಖ್ಯೆ ಇಳಿಮುಖವಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಕೊರೊನಾ ಸೋಂಕು ನಿಯಂ ತ್ರಿಸಲು ಕೇಂದ್ರ ಸರ್ಕಾರ ಹೊರಡಿಸಿದ್ದ ಮಾರ್ಗ ಸೂಚಿ ಇನ್ನೂ ಸಡಿಲವಾಗಿಲ್ಲ. ಹಾಗಾಗಿ ಸೋಂಕು ನಿಯಂತ್ರಿಸುವ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ ಎಂದು ತಿಳಿಸಿದರು.
ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ರಾಜ್ಯ ಸರ್ಕಾರಿ ನೌಕರರಿಗೆ ಪ್ರತೀ ವರ್ಷದಂತೆ ಜನವರಿ 26ರಂದು ನೀಡುತ್ತಿದ್ದ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು, ಈ ಬಾರಿ ಏಪ್ರಿಲ್ 21ರಂದು ನೀಡಲಾಗುವುದು. ಸರ್ಕಾರ ಏಪ್ರಿಲ್ 21 ರಂದು ಸರ್ಕಾರಿ ನೌಕರರ ದಿನವನ್ನಾಗಿ ಆಚರಿಸಲು ಆದೇಶ ಹೊರಡಿಸಿದ ಹಿನ್ನೆಲೆ ಈ ಕ್ರಮ ಕೈಗೊಳ್ಳ ಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಲು ಈಗಾಗಲೇ ಆನ್‍ಲೈನ್ ಪೋರ್ಟಲ್‍ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಪ್ರತೀ ಇಲಾಖೆಯಲ್ಲಿ ಅತ್ಯುತ್ತಮ ವಾಗಿ ಸೇವೆ ಸಲ್ಲಿಸಿದ ನೌಕರರು ಇಲಾಖೆಯಲ್ಲಿನ ಮುಖ್ಯಸ್ಥರ ಶಿಫಾರಸ್ಸಿನ ಮೇರೆಗೆ ಅರ್ಜಿ ಸಲ್ಲಿಸ ಬಹುದು ಎಂದರು. ಈ ಸಂದರ್ಭದಲ್ಲಿ ಮುಡಾ ಆಯುಕ್ತ ಡಾ.ಡಿ.ಬಿ.ನಟೇಶ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಪ್ರೇಮ್‍ಕುಮಾರ್, ಡಿಡಿಪಿಐ ಡಾ.ಪಾಂಡುರಂಗ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಚೆನ್ನಪ್ಪ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಕನ್ನಡ ಪರ ಹೋರಾಟಗಾರ ತಾಯೂರು ವಿಠಲಮೂರ್ತಿ ಸೇರಿದಂತೆ ಇತರರು ಹಾಜರಿದ್ದರು.