ಭೂ ಪರಿಹಾರ ನೀಡದ ಭೂ ಸ್ವಾಧೀನ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ
ಮೈಸೂರು

ಭೂ ಪರಿಹಾರ ನೀಡದ ಭೂ ಸ್ವಾಧೀನ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

February 5, 2021

ಮೈಸೂರು,ಫೆ.4(ಆರ್‍ಕೆಬಿ)-ಚಾಮರಾಜನಗರ-ಜೇವರ್ಗಿ ರಾಷ್ಟ್ರೀಯ ಹೆದ್ದಾರಿಗಾಗಿ ಸಂಖ್ಯೆ 150/ಎನ ಚಾಮಲಾಪುರ ನಂಜನಗೂಡು ಭಾಗದಲ್ಲಿ ವಶಪಡಿಸಿ ಕೊಂಡಿರುವ ಭೂಮಿಗೆ ಸಂಬಂ ಧಿಸಿದಂತೆ ರೈತರಿಗೆ ಇನ್ನೂ ಪರಿಹಾರ ನೀಡಿಲ್ಲ. ಹೀಗಾಗಿ ಇಲ್ಲಿ ನಡೆದಿರುವ ಅವ್ಯವಹಾರಕ್ಕೆ ಸಂಬಂಧಪಟ್ಟ ಭೂ ಸ್ವಾಧೀನ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಸರ್ವಜನಾಂಗ ಹಿತರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ವೇಣುಗೋಪಾಲ್ ಆಗ್ರಹಿಸಿದ್ದಾರೆ. ಮೈಸೂರು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸುಮಾರು 69 ರೈತರಿಂದ ಈ ಭಾಗದ ಜಮೀನನ್ನು ವಶಪಡಿಸಿಕೊಂಡಿದ್ದು, 2 ವರ್ಷವಾದರೂ ಈವರೆಗೂ ಪರಿಹಾರ ನೀಡದೆ, ರಸ್ತೆ ಕಾಮಗಾರಿ ನಡೆದಿದೆ ಎಂದು ದೂರಿದರು.

ಹೀಗಾಗಿ ಯಾವುದೇ ಪರಿಹಾರ ದೊರೆಯದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಲ್ಲದೆ ಚಾಮುಂಡಿ ಟೌನ್‍ಷಿಪ್‍ನ ಮಾಲೀಕರೊಬ್ಬರಿಗೆ ಸುಮಾರು 40 ಕೋಟಿ ರೂ. ನೀಡಿದ್ದು, ರೈತರ ಪರಿಹಾರದ ಹಣವನ್ನು ಗುತ್ತಿಗೆದಾರರ ಬಿಲ್‍ಗೆ ಸೇರಿಸಲಾಗಿದೆ. ಇದು ಸ್ಪಷ್ಟವಾಗಿ ರೈತರನ್ನು ವಂಚಿಸುವ ಉದ್ದೇಶವಾಗಿದ್ದು, ಕೂಡಲೇ ಹೆದ್ದಾರಿ ಕಾಮಗಾರಿ ನಿಲ್ಲಿಸಿ, 2 ವರ್ಷದ ಬಡ್ಡಿ ಹಣದೊಡನೆ ರೈತರಿಗೆ ಪರಿಹಾರ ನೀಡುವಂತೆ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ನಂಜನಗೂಡು ಕ್ಷೇತ್ರದ ಅಧ್ಯಕ್ಷ ಕೆ.ಚಲುವಪ್ಪ, ಕೆ.ಆರ್.ಕ್ಷೇತ್ರದ ಅಧ್ಯಕ್ಷ ಎಲ್.ಮಹದೇವಪ್ಪ, ನರಸಿಂಹರಾಜ ಕ್ಷೇತ್ರದ ಅಧ್ಯಕ್ಷ ಅಕ್ರಂ ಪಾಷಾ, ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಸುಹೇಲ್ ಖಲೀದ್, ಅಕ್ರಂ ಪಾಷಾ, ಮಹಿಳಾ ಘಟಕದ ಕಾರ್ಯದರ್ಶಿ ಗೌರಮ್ಮ ಇನ್ನಿತರರು ಇದ್ದರು.

Translate »