ಮೈಸೂರು: ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರನ್ನು ಮತದಾರರ ಪಟ್ಟಿ ಪರಿಷ್ಕರಿಣೆ ಹಾಗೂ ಇತರೆ ಚುನಾವಣೆ ಕರ್ತವ್ಯ(ಬಿಎಲ್‍ಓ)ಕ್ಕೆ ನೇಮಿಸದಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮೈಸೂರು ಘಟಕದ ಜಿಲ್ಲಾಧ್ಯಕ್ಷ ಹೆಚ್.ಬಿ.ಬಸವರಾಜು ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರನ್ನು ಪದೇಪದೆ ಚುನಾವಣೆ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆಗೆ ಬಿಎಲ್‍ಓ ಆಗಿ ಕರ್ತವ್ಯ ನಿರ್ವಹಿಸುವಂತೆ ಆಯಾಯ ತಾಲೂಕು ಕಚೇರಿ ಸಿಬ್ಬಂದಿ ಕರೆ ಮಾಡಿ ಒತ್ತಾಯಿಸುತ್ತಿದ್ದಾರೆ. ಇದರಿಂದ ಏಕೋಪಾಧ್ಯಯರು, ಇಲ್ಲವೆ ಕಡಿಮೆ ಸಿಬ್ಬಂದಿ ಇರುವ ಶಾಲೆಗಳಲ್ಲಿ ಈ ಕೆಲಸ ಮಾಡುವುದರಿಂದ ಶೈಕ್ಷಣಿಕ ಚಟುವಟಿಕೆಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು.
ಆದ್ದರಿಂದ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ, ಸರ್ಕಾರಿ ಶಾಲಾ ಶಿಕ್ಷಕರಿಗೆ, ಮತದಾರರ ಪಟ್ಟಿ ಪರಿಷ್ಕರಣೆ ಕೆಲಸ(ಬಿಎಲ್‍ಓ)ಗಳಿಗೆ ಶಾಲಾ ಸಮಯದಲ್ಲಿ ನಿಯೋಜಿಸಿದರೆ ಇಲ್ಲಿನ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆ ಯಾಗುತ್ತದೆ. ಈ ಕೆಲಸಕ್ಕೆ ಬೇರೆಯವರನ್ನು ನೇಮಿಸುವಂತೆ ಮನವಿ ಮಾಡಲಾಗಿದೆ ಎಂದರು.
ಈ ಹಿಂದೆ ಪದೇಪದೆ ಶಿಕ್ಷಕರನ್ನು ಚುನಾವಣೆ ಕರ್ತವ್ಯ ನಿಯೋಜಿಸಿದರೆ, ಆಗಬಹುದಾದ ತೊಂದರೆಗಳನ್ನು ಆಲಿಸಿದ ಸುಪ್ರೀಂಕೋರ್ಟ್, ಚುನಾವಣಾ ಕರ್ತವ್ಯ ಹೊರತು ಪಡಿಸಿ, ಇತರೆ ಕೆಲಸಗಳಿಗೆ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಬಳಸಿಕೊಳ್ಳದಂತೆ 2008ರಲ್ಲಿ ತೀರ್ಪು ನೀಡಿತ್ತು. ಇದರ ಆಧಾರದ ಮೇಲೆ ರಾಜ್ಯ ಸರ್ಕಾರದ ಅಂದಿನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಸುತ್ತೋಲೆ ಹೊರಡಿಸಿದ್ದರು. ಈ ಅಂಶವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದರು.
ಹೆಚ್.ಡಿ.ಕೋಟೆ, ಹುಣಸೂರು, ಪಿರಿಯಾಪಟ್ಟಣ ತಾಲೂಕು ಸೇರಿದಂತೆ ಇತರೆ ತಾಲೂಕುಗಳಲ್ಲಿ ಬಿಎಲ್‍ಓ ಕೆಲಸಗಳಿಗೆ ಒಪ್ಪಿಕೊಳ್ಳದ ಶಿಕ್ಷಕರಿಗೆ ನೋಟೀಸ್ ನೀಡುತ್ತೇವೆ ಎಂದು ಆಯಾಯ ತಾಲೂಕು ಕಛೇರಿಯ ಚುನಾವಣಾ ವಿಭಾಗದ ಸಿಬ್ಬಂದಿ, ಶಿಕ್ಷಕರಿಗೆ ಧಮ್ಕಿ ಹಾಕುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದರು.
ನೋಟೀಸ್ ಹಿಂಪಡೆಯುವಂತೆ ಆಗ್ರಹ: ಆದ್ದರಿಂದ ಶಿಕ್ಷಕರು ಕೊರತೆ ಇರುವ ಸ್ಥಳಗಳಲ್ಲಿ ಬಿಎಲ್‍ಓ ಕೆಲಸಗಳಿಗೆ ಒತ್ತಾಯಿಸದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಹಾಗೂ ಇದೀಗ ಜೂನ್ ತಿಂಗಳಲ್ಲಿ ನಡೆದ ಬಿಎಲ್‍ಓ ತರಬೇತಿ ಹಾಜರಾಗದ ಸಿಬ್ಬಂದಿಗೆ ನೀಡಿರುವ ನೋಟೀಸ್ ಅನ್ನು ಹಿಂಪಡೆಯುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿರುವುದಾಗಿ ತಿಳಿಸಿದರು.
7 ಶಿಕ್ಷಕರಿಗೆ ನೋಟೀಸ್: ಹೆಚ್.ಡಿ.ಕೋಟೆ ವಿಧಾನ ಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ-89ರಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ 2018ರ ಜು.27 ರಂದು ನಡೆದ ತರಬೇತಿಗೆ ಹಾಜರಾಗದೆ, ಗೈರಾಗಿ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ ಎಂಬ ಆರೋಪದ ಮೇಲೆ 7 ಮಂದಿ ಶಿಕ್ಷಕರಿಗೆ, ತಾಲೂಕು ಕಚೇರಿಯಿಂದ ನೋಟೀಸ್ ಜಾರಿ ಮಾಡಿದ್ದಾರೆ.
ಹೆಚ್.ಡಿ.ಕೋಟೆ, ನಾಯಕರ ಬೀದಿ ಸರ್ಕಾರಿ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರಾದ ಬಿ.ಎಸ್.ಮಂಜುನಾಥ್ ಹಾಗೂ ಇತರೆ ಶಾಲಾ ಶಿಕ್ಷಕರಾದ ಎ.ಎಸ್.ಮಹದೇವ, ಎಸ್.ಬಿ.ಲತಾ, ಎಸ್.ಬಬಿತಾರಾಣಿ, ಎಸ್.ವಸಂತಕುಮಾರ್, ಸಿ.ಭಾಸ್ಕರ್, ಜಿ.ಕೆ.ಲೋಕೇಶ್ ಅವರಿಗೆ ಪ್ರಜಾಪ್ರತಿನಿಧಿ ಕಾಯ್ದೆ 1950ರ ಕಲಂ 13(8)ರ ಪ್ರಕಾರ ಹೆಚ್.ಡಿ.ಕೋಟೆ ತಾಲೂಕು ತಹಸೀಲ್ದಾರ್ ಅವರು, ಹುಣಸೂರು ವಿಭಾಗದ ಉಪವಿಭಾಗಾಧಿಕಾರಿ ಅವರಿಗೆ, ಇವರ ವಿರುದ್ಧ ಕ್ರಮ ಜರುಗಿಸುವಂತೆ ವರದಿ ನೀಡಿದ್ದರು. ಈ ವರದಿ ಆಧಾರದ ಮೇಲೆ ಉಪವಿಭಾಗಾಧಿಕಾರಿ ಕೆ.ನಿತೀಶ್ ಅವರು ಏಳು ಮಂದಿ ಶಿಕ್ಷಕರಿಗೆ ಜು.27 ರಂದು ನೋಟೀಸ್ ಜಾರಿ ಮಾಡಿದ್ದಾರೆ.
ಚುನಾವಣಾ ಕಾರ್ಯದಿಂದ ಮುಕ್ತಿಗೊಳಿಸಲು ಮನವಿ
ಮೈಸೂರು:ಶೈಕ್ಷಣಿಕ ವರ್ಷದಲ್ಲಿ 158ಕ್ಕೂ ಹೆಚ್ಚು ಪ್ರಾಥಮಿಕ ಶಾಲಾ ಶಿಕ್ಷಕರ ಕೊರತೆಯಿದ್ದು, ಬಿಎಲ್‍ಓ ಆಗಿ ಚುನಾವಣಾ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರನ್ನು ಈ ಕೆಲಸದಿಂದ ಬಿಡುಗಡೆಗೊಳಿಸುವಂತೆ ತಾಲೂಕು ಆಡಳಿತಕ್ಕೆ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹೆಚ್.ಡಿ.ಕೋಟೆ ತಾಲೂಕು ಘಟಕ ಮನವಿ ಮಾಡಿದೆ.
ತಾಲೂಕಿನ 16 ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರಿಲ್ಲದೆ, ಅತಿಥಿ ಶಿಕ್ಷಕರ ಸಹಾಯದಿಂದ ಶಾಲೆಗಳು ನಡೆಯುತ್ತಿದ್ದು, ಇಂತಹ ಪರಿಸ್ಥಿತಿಯಲ್ಲಿ ಶಿಕ್ಷಕರು ಚುನಾವಣಾ ಕರ್ತವ್ಯದಲ್ಲಿ ತೊಡಗುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗೆ ತೊಂದರೆಯಾಗುತ್ತದೆ. ಹಾಗಾಗಿ ಬಿಎಲ್‍ಓ ಹುದ್ದೆಯಿಂದ ಶಿಕ್ಷಕರನ್ನು ಬಿಡುಗಡೆಗೊಳಿಸಿ, ಪರ್ಯಾಯ ವ್ಯವಸ್ಥೆ ರೂಪಿಸುವಂತೆ ಮನವಿ ಮಾಡಿದೆ.