ಪ್ಲಾಸ್ಟರ್ ಆಫ್ ಪ್ಯಾರಿಸ್, ರಟ್ಟಿನ ಗಣಪನ ಮಾರಾಟ ನಿಷೇಧ
ಮೈಸೂರು

ಪ್ಲಾಸ್ಟರ್ ಆಫ್ ಪ್ಯಾರಿಸ್, ರಟ್ಟಿನ ಗಣಪನ ಮಾರಾಟ ನಿಷೇಧ

July 31, 2018
  • ಪರಿಸರ ಸ್ನೇಹಿ ಮಣ್ಣಿನ ಗಣಪನ ತಯಾರಿಕೆ, ಬಳಕೆಗೆ ಅವಕಾಶ
  •  4 ಅಡಿಗಿಂತ ಹೆಚ್ಚಿನ ಎತ್ತರದ ಗಣಪನ ಪ್ರತಿಷ್ಠಾಪನೆಗೆ ಅನುಮತಿ ನಕಾರ
  • ರಸ್ತೆ ಬದಿ ಮಾರಾಟ ನಿಷೇಧ, ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮದ ಎಚ್ಚರಿಕೆ

ಮೈಸೂರು: ಮೈಸೂರು ನಗರದಲ್ಲಿ ಪರಿಸರಕ್ಕೆ ಮಾರಕವಾದ ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಪೇಪರ್ ಮೋಲ್ಡ್‍ನಿಂದ ತಯಾರಿಸಿರುವ ಬಣ್ಣದ ಗಣಪತಿ ಮೂರ್ತಿಯ ಮಾರಾಟವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದ್ದು, ನಾಲ್ಕು ಅಡಿಗಿಂತ ಅಧಿಕ ಎತ್ತರದ ಗಣಪತಿ ಮೂರ್ತಿ ತಯಾರಿಸದಂತೆ ಮೈಸೂರು ನಗರ ಪಾಲಿಕೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಮೈಸೂರು ನಗರ ಪಾಲಿಕೆಯ ಹಳೆಯ ಕೌನ್ಸಿಲ್ ಸಭಾಂಗಣದಲ್ಲಿ ಸೋಮ ವಾರ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಟಿ. ಚೆಲುವೇಗೌಡ ಅಧ್ಯಕ್ಷತೆಯಲ್ಲಿ `ಪರಿಸರ ಸ್ನೇಹಿ’ ಗಣೇಶ ಚತುರ್ಥಿ ಆಚರಣೆಗೆ ಸಂಬಂಧಿಸಿ ದಂತೆ ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ಈ ಬಾರಿ ಪ್ಲಾಸ್ಟರ್ ಆಫ್ ಪ್ಯಾರಿಸ್, ಪೇಪರ್ ಮೋಲ್ಡ್, ರಾಸಾಯನಿಕ ಅಂಶವುಳ್ಳ ಬಣ್ಣ ಗಳಿಂದ ಲೇಪನ ಮಾಡಿದ ಗಣಪನ ಮೂರ್ತಿ ತಯಾರಿಕೆ ಹಾಗೂ ಮಾರಾಟಕ್ಕೆ ಅವಕಾಶ ನೀಡುವುದಿಲ್ಲ.

ಪರಿಸರ ಸಂರಕ್ಷಣೆಯಲ್ಲಿ ಯಾವುದೇ ರಾಜಿ ಇಲ್ಲ ಎಂದು ಖಡಕ್ ಎಚ್ಚರಿಕೆ ನೀಡ ಲಾಯಿತು. ಸಭೆಯಲ್ಲಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಟಿ.ಚೆಲುವೇಗೌಡ ಮಾತ ನಾಡಿ, ಜನರು ಬಣ್ಣ ಬಣ್ಣದ ಗಣಪನನ್ನು ಪೂಜಿಸಲು ಇಚ್ಛೆಪಡುತ್ತಿದ್ದಾರೆ. ಇದರಿಂದ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಬೇರೆ ಬೇರೆ ರಾಜ್ಯಗಳಿಂದ ಪ್ಲಾಸ್ಟರ್ ಆಫ್ ಪ್ಯಾರೀಸ್(ಪಿಒಪಿ)ನಿಂದ ತಯಾರಿಸಿರುವ ಗಣಪನ ಮೂರ್ತಿಯನ್ನು ಮೈಸೂರಿಗೆ ತಂದು ಮಾರಾಟ ಮಾಡಲಾಗುತ್ತಿದೆ. ಕಳೆದ ಕೆಲವು ವರ್ಷಗಳಿಂದ ನಗರ ಪಾಲಿಕೆ ಎಚ್ಚರಿಕೆ ನೀಡಿದ್ದರೂ ಮಾರಾಟಗಾರರು ಅದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಪ್ರತಿ ವರ್ಷ ಪಿಒಪಿ ಗಣಪನ ಮೂರ್ತಿ ಮಾರಾಟ ಎಗ್ಗಿಲ್ಲದೆ ನಡೆಯು ತ್ತಿದೆ. ಆದರೆ ಈ ಬಾರಿ ಇದಕ್ಕೆ ಅವಕಾಶ ನೀಡುವುದಿಲ್ಲ.

ವ್ಯಾಪಾರಿಗಳು ಹಾಗೂ ಗಣಪನ ಮೂರ್ತಿಯ ತಯಾರಕರು ಸಹಕರಿಸುವಂತೆ ಮನವಿ ಮಾಡಿದರು. ಪಾಲಿಕೆ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಸ್ನೇಕ್ ಶ್ಯಾಮ್ ಮಾತನಾಡಿ, ಹಿಂದು ಸಂಪ್ರದಾಯದಲ್ಲಿ ದೀಪಾವಳಿ ಹಾಗೂ ಗಣೇಶ ಚತುರ್ಥಿ ಬಹುಮುಖ್ಯ.

ದುರಾದೃಷ್ಟವಶಾತ್ ಈ ಎರಡು ಹಬ್ಬಗಳಿಂದ ಭಾರೀ ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಪಟಾಕಿ ಸಿಡಿಸುವುದರಿಂದ ವಾಯು ಮಾಲಿನ್ಯ, ಪಿಒಪಿ ಗಣಪನ ಮೂರ್ತಿಯಿಂದ ಜಲ ಮಾಲಿನ್ಯ. ಇತ್ತೀಚಿನ ದಿನಗಳಲ್ಲಿ ಭಕ್ತಿಯಿಂದ ಗಣಪನ ಪೂಜೆ ಮಾಡದೆ, ಸ್ಪರ್ಧಾತ್ಮಕ ನಿಲುವಿನಿಂದ ಪೂಜೆ ಮಾಡುತ್ತಿರುವುದು ಕಂಡು ಬರುತ್ತಿದೆ. ಪಕ್ಕದ ಬಡಾವಣೆಯಲ್ಲಿ 10 ಅಡಿ ಎತ್ತರದ ಗಣೇಶನ ಮೂರ್ತಿಯನ್ನು ಪೂಜಿಸಿದ್ದರೆ, ನಮ್ಮ ಬಡಾವಣೆಯಲ್ಲಿ 15 ಅಡಿಯ ಆಕರ್ಷಕ, ರಾಸಾಯನಿಕ ಅಂಶವುಳ್ಳ ಬಣ್ಣ ಲೇಪಿತ ಗಣೇಶನ ಪೂಜಿಸಲು ಬಯಸುತ್ತಾರೆ. ಇದರಿಂದ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಮಣ್ಣಿನಿಂದಲೇ ಮಾಡಿರುವ ಪರಿಸರ ಸ್ನೇಹಿ ಗಣೇಶನನ್ನೇ ಪೂಜಿಸಲು ಮನವಿ ಮಾಡಿದರಲ್ಲದೆ, ಪಿಒಪಿ ಗಣೇಶನ ಮೂರ್ತಿ ಕಾಲುವೆ, ಕೆರೆಗಳಲ್ಲಿ ವಿಸರ್ಜಿಸುತ್ತಾರೆ. ಸಾಕಷ್ಟು ದಿನವಾದರೂ ಇವು ಕರಗುವುದಿಲ್ಲ. ಇದರಿಂದ ಜಲಚರಗಳ ಮಾರಣ ಹೋಮಕ್ಕೂ ಕಾರಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಣ್ಣಿನ ಗಣೇಶನಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು. ಅಲ್ಲದೆ ಪುರಭವನ, ಜೆ.ಕೆ.ಮೈದಾನ ಸೇರಿದಂತೆ ಯಾವುದಾದರೂ ನಿಗದಿತ ಸ್ಥಳದಲ್ಲಿ ಗಣೇಶನ ಮೂರ್ತಿ ಮಾರಾಟಕ್ಕೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಪಾಲಿಕೆ ಸದಸ್ಯ ಎಸ್‍ಬಿಎಂ ಮಂಜು ಮಾತನಾಡಿ, ಪರಿಸರ ಸ್ನೇಹಿ ಗಣಪ ಪೂಜಿಸುವವರನ್ನು ಪ್ರೋತ್ಸಾಹಿಸುವುದಕ್ಕಾಗಿ ನಗರ ಪಾಲಿಕೆಯಿಂದ ಪ್ರಮಾಣ ಪತ್ರ ಅಥವಾ ಪದಕ ನೀಡುವ ಕ್ರಮ ಕೈಗೊಳ್ಳಬೇಕು. ಆಗ ಮಾತ್ರ ಮತ್ತಷ್ಟು ಸ್ವಯಂ ಪ್ರೇರಣೆಯಿಂದ ಪಿಒಪಿ ಗಣೇಶನ ಪೂಜಿಸುವುದನ್ನು ಬಿಡುತ್ತಾರೆ ಎಂದು ಅಭಿಪ್ರಾಯಪಟ್ಟರು.

ಕಳೆದ ವರ್ಷದ ಸ್ಟಾಕ್ ಇದೆ: ಸಭೆಯಲ್ಲಿ ಪಾಲ್ಗೊಂಡಿದ್ದ ಹಲವು ವ್ಯಾಪಾರಿಗಳು ಮಾತನಾಡಿ, ಕಳೆದ ವರ್ಷದ ಸ್ಟಾಕ್ ಇದೆ. ಈ ಹಿನ್ನೆಲೆಯಲ್ಲಿ ಅವುಗಳ ಮಾರಾಟಕ್ಕೆ ಅವಕಾಶ ಮಾಡಿಕೊಡಬೇಕು. ಪೇಪರ್ ಮೋಲ್ಡ್ ಗಣೇಶನ ಮೂರ್ತಿಯ ಮಾರಾಟಕ್ಕೆ ಈಗಾಗಲೇ ಅಡ್ವಾನ್ಸ್ ನೀಡಿದ್ದೇವೆ. ಇದಕ್ಕೆ ವಿನಾಯಿತಿ ನೀಡಿ. ಮಣ್ಣಿನ ಗಣಪನ ತಯಾರಿಕೆಯಲ್ಲಿ ಬಿರುಕುಗಳುಂಟಾದಾಗ ಅವುಗಳನ್ನು ಸರಿಪಡಿಸಿ ಬಣ್ಣ ಬಳಿದು ಮಾರಾಟ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಪರಿಸರ ಸ್ನೇಹಿ ಬಣ್ಣ ಹಚ್ಚುವುದಕ್ಕೆ ಅವಕಾಶ ನೀಡಬೇಕು. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚಿಸಿದ ಬಣ್ಣವನ್ನೇ ಬಳಸುತ್ತೇವೆ ಎಂದು ಅಭಿಪ್ರಾಯಪಟ್ಟರು.

ನಿರ್ಣಯಗಳು: ಸಭೆಯಲ್ಲಿ ಅಂತಿಮವಾಗಿ 4 ಅಡಿಗಿಂತ ಅಧಿಕ ಎತ್ತರದ ಗಣೇಶನ ಮೂರ್ತಿ ತಯಾರಿಕೆಗೆ ನಿರ್ಬಂಧ ಹೇರಲಾಯಿತು. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚಿಸಿದ ಪರಿಸರ ಸ್ನೇಹಿ ಬಣ್ಣ ಬಳಸಲು ಅನುಮತಿ ನೀಡುವುದು. ಪಿಒಪಿ ಹಾಗೂ ಪೇಪರ್ ಮೋಲ್ಡ್ ಗಣೇಶ ಮೂರ್ತಿಯ ತಯಾರಿಕೆ, ಮಾರಾಟವನ್ನು ನಿಷೇಧಿಸುವುದು. ರಸ್ತೆ ಬದಿಯಲ್ಲಿ ಗಣೇಶ ಮಾರಾಟ ನಿಷೇಧ. ವ್ಯಾಪಾರಿಗಳಿಗೆ ಖಾಲಿ ಸ್ಥಳದಲ್ಲಿ ಮಾರಾಟ ಮಾಡಲು ವ್ಯವಸ್ಥೆ. ವಿಸರ್ಜನೆ ಮಾಡಲು ತಾತ್ಕಾಲಿಕ ಹೊಂಡ ನಿರ್ಮಾಣ, ಕಡ್ಡಾಯವಾಗಿ ಅನುಮತಿ ಪಡೆದಿದ್ದವರಿಗೆ ಮಾತ್ರ ಗಣೇಶನ ಪ್ರತಿಷ್ಠಾಪನೆ ಮಾಡುವ ಅವಕಾಶ. ನಿಯಮ ಉಲ್ಲಂಘಿಸಿದ ವ್ಯಾಪಾರಿಗಳು, ತಯಾರಕರು ಹಾಗೂ ಪೂಜಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಿರ್ಣಯ ಕೈಗೊಳ್ಳಲಾಯಿತು.

ಸಭೆಯಲ್ಲಿ ಪಾಲಿಕೆ ಸದಸ್ಯೆ ಅಶ್ವಿನಿ ಆರ್.ಅನಂತು, ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್, ಹೆಚ್ಚುವರಿ ಆಯುಕ್ತ ರವೀಂದ್ರ, ಪಾಲಿಕೆ ಆರೋಗ್ಯಾಧಿಕಾರಿ ಡಾ.ಹೆಚ್.ರಾಮಚಂದ್ರ, ಡಾ.ನಾಗರಾಜು, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಾದ ಬಿ.ಎಂ. ಪ್ರಕಾಶ್, ಜಗದೀಶ್, ಪರಿಸರ ಅಭಿಯಂತರರಾದ ಸ್ಪೂರ್ತಿ, ಮೈತ್ರಿ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

ಮಣ್ಣಿನ ಗಣಪನ ಮಾರಾಟಕ್ಕಷ್ಟೇ ಅವಕಾಶ
ಸ್ವಚ್ಛತೆ ಹಾಗೂ ಪರಿಸರ ಸಂರಕ್ಷಣೆಯ ಹಿತದೃಷ್ಟಿಯಿಂದ ಈ ಬಾರಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಹಾಗೂ ಪೇಪರ್ ಮೋಲ್ಡ್‍ನಿಂದ ತಯಾರಿಸಿರುವ ಗಣೇಶನ ಮೂರ್ತಿಯ ಮಾರಾಟ ಹಾಗೂ ತಯಾರಿಕೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದ್ದು, ಪರಿಸರ ಸ್ನೇಹಿಯಾದ ಮಣ್ಣಿನಿಂದಲೇ ತಯಾರಿಸಿರುವ ನಾಲ್ಕು ಅಡಿವರೆಗಿನ ಗಣಪತಿ ಮೂರ್ತಿ ಮಾರಾಟಕ್ಕೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್ ತಿಳಿಸಿದ್ದಾರೆ.

ಪರಿಸರ ಸ್ನೇಹಿ ಗಣೇಶ ಹಬ್ಬದ ಆಚರಣೆಗೆ ಸಂಬಂಧಿಸಿದಂತೆ ಸೋಮವಾರ ನಡೆದ ಪೂರ್ವಾಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸ್ವಚ್ಛತೆ, ಪಾರಂಪರಿಕತೆ ಸೇರಿದಂತೆ ವಿವಿಧ ವಿಷಯಗಳಲ್ಲಿ ದೇಶದ ಗಮನ ಸೆಳೆದಿರುವ ಮೈಸೂರು ನಗರದಲ್ಲಿ ಈ ಗಣೇಶ ಚತುರ್ಥಿಯಲ್ಲಿ ಹೊಸ ಸಂದೇಶವನ್ನು ರವಾನಿಸಲಾಗುವುದು. ಈ ಹಿನ್ನೆಲೆಯಲ್ಲಿ ಕಡ್ಡಾಯವಾಗಿ ಪರಿಸರ ಸ್ನೇಹಿ, ಜೇಡಿಮಣ್ಣಿನಿಂದ ತಯಾರಿಸಿರುವ ಗಣೇಶನ ಮೂರ್ತಿಯನ್ನು ಬಳಸುವುದು, 4 ಅಡಿಗಿಂತ ಹೆಚ್ಚಿನ ಎತ್ತರದ ಗಣೇಶನ ಮೂರ್ತಿಯ ತಯಾರಿಕೆ ಹಾಗೂ ಮಾರಾಟ ನಿರ್ಬಂಧಿಸಲಾಗಿದೆ. ಪರಿಸರ ಸಂರಕ್ಷಣೆಯ ಹಿನ್ನೆಲೆಯಲ್ಲಿ ಈ ಬಾರಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ. ಯಾವುದೇ ಕಾರಣಕ್ಕೂ ಒತ್ತಡಕ್ಕೆ ಮಣಿದು ರಾಜೀ ಪ್ರಶ್ನೆಯೇ ಇಲ್ಲ ಎಂದರು. ರಸ್ತೆ ಬದಿ ಗಣೇಶ ಮೂರ್ತಿ ಮಾರಾಟವನ್ನು ನಿರ್ಬಂಧಿಸಲಾಗಿದ್ದು, ನಗರ ಪಾಲಿಕೆಯ ವತಿಯಿಂದಲೇ ವಿವಿಧೆಡೆ ಗಣೇಶನ ಮೂರ್ತಿ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಈಗಾಗಲೇ ವ್ಯಾಪಾರಿಗಳಿಗೆ ನೋಟಿಸ್ ನೀಡಿ ಜಾಗೃತಿ ಮೂಡಿಸಲಾಗಿದೆ. ಅನುಮತಿ ಪಡೆಯದೆ ಇರುವವರಿಗೆ ಗಣೇಶನ ಪೂಜೆಗೆ ಅವಕಾಶ ನೀಡುವುದಿಲ್ಲ. ಮೈಸೂರು ನಗರ ಪಾಲಿಕೆಯ ವ್ಯಾಪ್ತಿಯಿಂದ ಹೊರಗೆ ಪಿಒಪಿ ಗಣೇಶ ಮೂರ್ತಿ ಮಾರಾಟ ಮಾಡು ತ್ತಿರುವುದು ಕಂಡು ಬಂದರೆ ಜಿಲ್ಲಾಡಳಿತದ ಗಮನಕ್ಕೆ ತಂದು ದಾಳಿ ಮಾಡಿಸ ಲಾಗುವುದು. ಕಾನೂನು ಎಲ್ಲರಿಗೂ ಒಂದೆ. ಅದನ್ನು ಉಲ್ಲಂಘಿಸುವವರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

“ಪಿಒಪಿ ಗಣೇಶನ ಮೂರ್ತಿ ನಿಷೇಧಿಸುವಂತೆ ಕಳೆದ 10 ವರ್ಷದ ಹಿಂದೆಯೇ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ಮಾಡಿ, ಗಮನ ಸೆಳೆದಿದ್ದೆವು. ಆದರೆ ಇದುವರೆಗೂ ಪರಿಪೂರ್ಣವಾಗಿ ಪಿಒಪಿ ಗಣೇಶ ಮೂರ್ತಿ ಗಳನ್ನು ನಿಷೇಧಿಸಲು ಸಾಧ್ಯವಾಗಿಲ್ಲ. ಕಳೆದ ವರ್ಷ ಪಡುವಾರಹಳ್ಳಿ, ಹೆಬ್ಬಾಳು, ಗೋಕುಲಂ ಸೇರಿದಂತೆ ವಿವಿಧೆಡೆ ಸಾವಿರಾರು ಪಿಒಪಿ ಗಣೇಶನ ಮೂರ್ತಿಯನ್ನು ಮಾರಾಟ ಮಾಡಲಾಗಿದೆ. ಅದರಲ್ಲಿಯೂ ಗ್ರಾಮೀಣ ಭಾಗದ ಜನರು ಪಿಒಪಿ ಗಣಪತಿಗಳನ್ನು ಹೆಚ್ಚಾಗಿ ಖರೀದಿಸುತ್ತಾರೆ. ಈ ಬಾರಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು”. – ಶ್ರೀಧರ್.

Translate »