ಮುಂಬೈನಲ್ಲಿ ಮನೆ ಕೆಲಸಕ್ಕೆ ಸೇರಿ ಮಾಲೀಕರ ಚಿನ್ನಾಭರಣ ಕದ್ದ ಹೆಚ್.ಡಿ.ಕೋಟೆ ಕಳ್ಳಿ
ಮೈಸೂರು

ಮುಂಬೈನಲ್ಲಿ ಮನೆ ಕೆಲಸಕ್ಕೆ ಸೇರಿ ಮಾಲೀಕರ ಚಿನ್ನಾಭರಣ ಕದ್ದ ಹೆಚ್.ಡಿ.ಕೋಟೆ ಕಳ್ಳಿ

July 31, 2018
  • ಸ್ಥಳೀಯ ಪೊಲೀಸರ ನೆರವಿನಿಂದ ಮುಂಬೈ ಪೊಲೀಸರ ವಶಕ್ಕೆ
  • ಹ್ಯಾಂಡ್‍ಪೋಸ್ಟ್‍ನಲ್ಲಿ ಗಿರವಿ ಇಟ್ಟಿದ್ದ ಬಹುತೇಕ ಚಿನ್ನಾಭರಣಗಳ ಜಪ್ತಿ
  • 30 ಲಕ್ಷದ ಚಿನ್ನಾಭರಣ ಕದ್ದು ಪರಾರಿಯಾಗಿದ್ದ ಖತರ್ನಾಕ್ ಮಹಿಳೆ

ಮೈಸೂರು:  ಮುಂಬೈನಲ್ಲಿ ಕೆಲಸ ಮಾಡಿಕೊಂಡಿದ್ದ ಮನೆಯಲ್ಲೇ ಲಕ್ಷಾಂತರ ರೂ. ಮೌಲ್ಯದ ವಜ್ರ ಹಾಗೂ ಚಿನ್ನದ ಆಭರಣಗಳನ್ನು ದೋಚಿಕೊಂಡು ಬಂದಿದ್ದ ಹೆಚ್.ಡಿ.ಕೋಟೆ ಮೂಲದ ಮಹಿಳೆ ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ.

ತಾಲೂಕಿನ ಹಾದನೂರು ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಕಳ್ಳಿ ತುಳಸಿ(30)ಯನ್ನು ಸ್ಥಳೀಯ ಪೊಲೀಸರ ನೆರವಿನೊಂದಿಗೆ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಬಳಿಕ ವಿಚಾರಣೆಗೊಳಪಡಿಸಿ, ಗಿರವಿ ಯಿಟ್ಟಿದ್ದ 29.75 ಲಕ್ಷ ಮೌಲ್ಯದ ಆಭರಣ ಗಳನ್ನು ವಶಪಡಿಸಿಕೊಂಡು, ನ್ಯಾಯಾ ಧೀಶರ ಅನುಮತಿ ಪಡೆದು ಆರೋಪಿಯನ್ನು ಮುಂಬೈಗೆ ಕರೆದೊಯ್ಯಲಾಯಿತು.

ಹೆಚ್.ಡಿ.ಕೋಟೆ ಪಟ್ಟಣದ ವ್ಯಕ್ತಿಯೊಬ್ಬ ರೊಂದಿಗೆ ವಿವಾಹವಾಗಿದ್ದ ತುಳಸಿ, ಕೆಲ ವರ್ಷಗಳ ನಂತರ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು. ಈ ನಡುವೆ ಕೆಲಸಕ್ಕಾಗಿ ಮಂಗಳೂರು ಮೂಲದ ಏಜೆಂಟ್‍ನನ್ನು ಸಂಪರ್ಕಿಸಿದ್ದಳು. 2 ತಿಂಗಳ ಹಿಂದೆ ಆತ, ತುಳಸಿಯನ್ನು ಮುಂಬೈಗೆ ಕರೆದೊಯ್ದು, ವಾಸ್ತುಶಿಲ್ಪಿ ದಂಪತಿ ಮನೆಯಲ್ಲಿ ಕೆಲಸಕ್ಕೆ ಸೇರಿಸಿದ್ದ. ಇದಕ್ಕೆ ಮುನ್ನ ಆ ಮನೆಯಲ್ಲಿ ಕರ್ನಾಟಕದ ಮಹಿಳೆಯೇ ಕೆಲಸಕ್ಕಿದ್ದರು. ಕಾರಣಾಂತರದಿಂದ ಆಕೆ ಕೆಲಸಕ್ಕೆ ಗೈರಾಗಿ ದ್ದರು. ಆದ್ದರಿಂದ ಪ್ರಾಮಾಣಿಕಳಂತೆ ನಟಿಸಿದ್ದ ತುಳಸಿಗೆ ಆ ಕೆಲಸ ದಕ್ಕಿತ್ತು. ಆದರೆ ಇದ್ದಕ್ಕಿದ್ದಂತೆ ಈಕೆ ಮನೆಯ ಮಾಲೀಕ ರಿಗೂ ತಿಳಿಸದೆ ಕೆಲಸ ಬಿಟ್ಟಿದ್ದಳು. ಇದರಿಂದ ಅನುಮಾನಗೊಂಡ ಮನೆ ಮಾಲೀಕರು, ಬೀರುವನ್ನು ಪರಿಶೀಲಿಸಿದಾಗ ಅದರಲ್ಲಿದ್ದ ಸುಮಾರು 30.75 ಲಕ್ಷ ಮೌಲ್ಯದ ಚಿನ್ನಾಭರಣಗಳು ಕಳುವಾಗಿದ್ದವು. ನಂತರ ಮಹಿಮಾ ಪೊಲೀಸ್ ಠಾಣೆಗೆ ದೂರು ನೀಡಿ, ಮನೆಗೆಲಸದಾಕೆ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಮನೆಯನ್ನು ಪರಿಶೀಲಿಸಿದಾಗ ತುಳಸಿಯ ಬಟ್ಟೆಗಳಿದ್ದ ಬ್ಯಾಗ್ ಸಿಕ್ಕಿತ್ತಾದರೂ, ಆಕೆಯ ವಿಳಾಸದ ಬಗ್ಗೆ ಯಾವುದೇ ಸುಳಿವು ದೊರೆತಿರಲಿಲ್ಲ. ಮೂರ್ನಾಲ್ಕು ದಿನಗಳ ಕಾಲ ಸ್ವಿಚ್‍ಆಫ್ ಆಗಿದ್ದ ತುಳಸಿ ಮೊಬೈಲ್ ಆನ್ ಆಗುತ್ತಿದ್ದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದರು. ಮೊಬೈಲ್ ಸಿಗ್ನಲ್ ಜಾಡು ಹಿಡಿದು ತನಿಖೆ ನಡೆಸಿದಾಗ ತುಳಸಿ, ಹೆಚ್.ಡಿ.ಕೋಟೆ ಭಾಗದಲ್ಲಿರುವುದು ತಿಳಿದಿದೆ. ಮುಂಬೈ ಕ್ರೈಂಬ್ರಾಂಚ್ ಇನ್ಸ್ ಪೆಕ್ಟರ್ ಪ್ರವೀಣ್, ಸಬ್‍ ಇನ್ಸ್‌ಪೆಕ್ಟರ್ ಸಾವತ್ ಹಾಗೂ ಮಹಿಳಾ ಸಿಬ್ಬಂದಿ ತಂಡ ಜು.27 ರಂದು ಹೆಚ್.ಡಿ.ಕೋಟೆ ಪೊಲೀಸ್ ಠಾಣೆಗೆ ಬಂದು ಪ್ರಕರಣದ ವಿವರ ನೀಡಿ, ಸಹಕಾರ ಕೋರಿದ್ದರು.

1_Page

ಬಳಿಕ ಮೇಲಧಿಕಾರಿಗಳ ಸೂಚನೆ ಮೇರೆಗೆ ಹೆಚ್.ಡಿ.ಕೋಟೆ ಠಾಣೆಯ ಹೆಡ್ ಕಾನ್‍ಸ್ಟೇಬಲ್ ನಾರಾಯಣ ಹಾಗೂ ಕಾನ್‍ಸ್ಟೇಬಲ್ ಎನ್.ಶ್ರೀನಿವಾಸ್, ಮುಂಬೈ ಪೊಲೀಸ್ ತಂಡದೊಂದಿಗೆ ಖತರ್ನಾಕ್ ಕಳ್ಳಿ ತುಳಸಿ ಹುಡುಕಾಟಕ್ಕೆ ಬಲೆ ಬೀಸಿದ್ದರು.
ತುಳಸಿ ಹಾದನೂರು ಗ್ರಾಮದಲ್ಲಿರುವುದನ್ನು ಅರಿತ ಪೊಲೀಸರ ತಂಡ ಆಕೆಯ ಚಲನವಲನದ ಬಗ್ಗೆ ನಿಗಾವಹಿಸಿದ್ದರು.

ಹಗಲಿನಲ್ಲಿ ಮನೆಯಿಂದ ಹೊರ ಬಾರದ ತುಳಸಿ, ರಾತ್ರಿಯಾದರೆ ಗ್ರಾಮಸ್ಥರ ಕಣ್ಣಿಗೂ ಬೀಳದಂತೆ ಮೈಸೂರಿಗೆ ಹೋಗಿ ಬರುತ್ತಿದ್ದಳು. ಈಕೆಯ ನಿಗೂಢ ಓಡಾಟದ ಬಗ್ಗೆ ಪೋಷಕರಿಗೂ ತಿಳಿದಿರಲಿಲ್ಲ. ಕಡೆಗೆ ಭಾನುವಾರ ಮಧ್ಯಾಹ್ನ ತುಳಸಿ ಮನೆಯಲ್ಲಿದ್ದಾಗ ಪೊಲೀಸರು ವಶಪಡಿಸಿಕೊಂಡರು. ಪೊಲೀಸರ ಪ್ರಾಥಮಿಕ ತನಿಖೆಯಲ್ಲೇ ತಾನು ಮುಂಬೈನಲ್ಲಿ ಕಳ್ಳತನ ಮಾಡಿದ್ದನ್ನು ಒಪ್ಪಿಕೊಂಡಳು. ಬಳಿಕ ಆಕೆ ನೀಡಿದ ಮಾಹಿತಿ ಮೇರೆಗೆ ಹ್ಯಾಂಡ್‍ಪೋಸ್ಟ್‍ನಲ್ಲಿರುವ ಮಹಾವೀರ ಜೈನ್ ಚಿನ್ನಾಭರಣ ಅಂಗಡಿಯಲ್ಲಿ ಗಿರವಿಯಿಟ್ಟಿದ್ದ 5 ಜೊತೆ ವಜ್ರದ ಓಲೆಗಳು (ಒಂದು ಜೊತೆಗೆ ಸುಮಾರು 1.30 ಲಕ್ಷ ರೂ), 5 ಲಕ್ಷ ರೂ ಮೌಲ್ಯದ ಬ್ರಾಸ್ಲೆಟ್, 12 ಜೊತೆ ಚಿನ್ನದ ಬಳೆ (ಒಂದು ಜೊತೆಗೆ 50 ಸಾವಿರ ರೂ), ಐದು ಉಂಗುರ(ಒಂದಕ್ಕೆ 25 ಸಾವಿರ ರೂ), 3 ಲಕ್ಷ ರೂ ಮೌಲ್ಯದ ಎರಡು ಚಿನ್ನದ ಸರವನ್ನು ವಶಪಡಿಸಿಕೊಳ್ಳ ಲಾಯಿತು. ಇನ್ನೊಂದು ಜೊತೆ ಓಲೆಯನ್ನು ಗಿರವಿಯಿಟ್ಟಿರುವ ಅಂಗಡಿಯನ್ನು ಆಕೆ ಮರೆತುಬಿಟ್ಟಿದ್ದಾಳೆ. ಕಳ್ಳಿ ತುಳಸಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ಅವರ ಅನುಮತಿ ಪಡೆದು ಮುಂಬೈಗೆ ಕರೆದೊಯ್ಯಲಾಯಿತು.

Translate »