ಕಾಂಗ್ರೆಸ್ ವೀರಶೈವ-ಲಿಂಗಾಯತರ ಒಡೆಯಲೆತ್ನಿಸಿದರೆ ಜೆಡಿಎಸ್ ರಾಜ್ಯವನ್ನೇ ಒಡೆಯಲು ಹೊರಟಿದೆ
ಮೈಸೂರು

ಕಾಂಗ್ರೆಸ್ ವೀರಶೈವ-ಲಿಂಗಾಯತರ ಒಡೆಯಲೆತ್ನಿಸಿದರೆ ಜೆಡಿಎಸ್ ರಾಜ್ಯವನ್ನೇ ಒಡೆಯಲು ಹೊರಟಿದೆ

July 31, 2018

ಬೆಂಗಳೂರು:  ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ವೀರಶೈವ-ಲಿಂಗಾಯತ ರನ್ನು ಒಡೆಯಲು ಪ್ರಯತ್ನಿಸಿದರೆ, ಜೆಡಿಎಸ್ ರಾಜ್ಯವನ್ನು ಒಡೆಯಲು ಹೊರಟಿದ್ದು, ಇದನ್ನು ರಾಜ್ಯದ ಜನತೆ ಒಪ್ಪುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

ಇಂದು ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ಅವರು, ಅಖಂಡ ಕರ್ನಾಟಕ ನಿರ್ಮಾಣಕ್ಕೆ ಹಿರಿಯರೆಲ್ಲ ಸೇರಿ ರಕ್ತ ಹರಿಸಿದ್ದಾರೆ. ಆದರೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಇತ್ತೀಚಿನ ಹೇಳಿಕೆಗಳನ್ನು ಗಮನಿಸಿದರೆ ಏಕೀಕೃತ ಕರ್ನಾಟಕ ಒಡೆಯಲು ಷಡ್ಯಂತರ ನಡೆಸಿ ದಂತಿದೆ ಎಂದಿದ್ದಾರೆ.

ರಾಜ್ಯದ ಜನತೆ 104 ಶಾಸಕರನ್ನು ಚುನಾಯಿಸುವ ಮೂಲಕ ಬಿಜೆಪಿಗೆ ಬೆಂಬಲ ಸೂಚಿಸಿದರೂ, 37 ಶಾಸಕರನ್ನು ಹೊಂದಿದ ಜೆಡಿಎಸ್ ಹಾಗೂ 79 ಶಾಸಕರನ್ನು ಒಳಗೊಂಡ ಕಾಂಗ್ರೆಸ್ ಸೇರಿ ಮೈತ್ರಿ ಸರ್ಕಾರ ರಚಿಸುವ ಮೂಲಕ ಜನತೆಗೆ ಮೋಸ ಮಾಡಿದ್ದಾರೆ. ಉತ್ತರ ಕರ್ನಾಟಕದ ಜನತೆ ಯನ್ನು ಸವತಿ ಮಕ್ಕಳಂತೆ ಕಾಣುತ್ತಿರುವ ಕುಮಾರಸ್ವಾಮಿ, ನಿಮ್ಮ ಸಾಲ ಮನ್ನಾ ಮಾಡಲು, ನೀವೇನು ನನಗೆ ವೋಟು ಹಾಕಿದ್ದೀರಾ, ವೋಟು ಹಾಕುವಾಗ ನನ್ನ ನೆನಪಾಗಲಿಲ್ಲವೆ? ಎಂಬ ದುರಹಂಕಾರದ ಮಾತುಗಳನ್ನು ಆಡುವ ಮೂಲಕ ಸಂವಿಧಾನಕ್ಕೆ ಅಪಚಾರ ಎಸಗಿದ್ದಾರೆ. ಯಾವುದೇ ಮುಖ್ಯಮಂತ್ರಿ ಹಿಂದೆಂದೂ ಈ ರೀತಿಯ ಹೇಳಿಕೆ ನೀಡಿರಲಿಲ್ಲ, ಬೆಂಗಳೂರಿನ ಹಣವನ್ನು ಉತ್ತರ ಕರ್ನಾಟಕದ ಅಭಿವೃದ್ಧಿಗೆ ನೀಡುತ್ತೇನೆ ಎಂಬ
ಹೇಳಿಕೆ ಮೂಲಕ ಮುಖ್ಯಮಂತ್ರಿ ಮನೆ ಒಡೆಯುವ ಸಂಚಿಗೆ ಕೈ ಹಾಕಿದ್ದಾರೆ.

ಈ ಹೇಳಿಕೆಗೆ ಬೆಂಬಲ ಸೂಚಿಸುವಂತೆ ಕಾಂಗ್ರೆಸ್ ನಾಯಕರು ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ರಾಜ್ಯವನ್ನು ಪ್ರತ್ಯೇಕಿಸುವ ಮೂಲಕ ಜೆಡಿಎಸ್ ಬಲಪಡಿಸುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.

ಬೆಳಗಾವಿಯ ಸುವರ್ಣ ವಿಧಾನಸೌಧದ ಮುಂದೆ ನಾಳೆ ವಿವಿಧ ಮಠಾಧೀಶರು ಹಾಗೂ ವಿವಿಧ ಸಂಘಟನೆಗಳ ಹೋರಾಟಗಾರರು, ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ಹೋರಾಟ ಹಮ್ಮಿಕೊಂಡಿದ್ದು, ಅವರ ಮನವೊಲಿಕೆಗೆ ಬೆಳಗಾವಿಗೆ ತೆರಳುತ್ತಿದ್ದು, ಏಕೀಕೃತ ಕರ್ನಾಟಕ ಹೋರಾಟಕ್ಕೆ ಬದ್ಧರಾಗಿರುವಂತೆ ಸ್ವಾಮೀಜಿಗಳಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದಿದ್ದಾರೆ. ಯಾವುದೇ ಕಾರಣಕ್ಕೂ ರಾಜ್ಯ ಇಬ್ಭಾಗವಾಗಲು ಬಿಜೆಪಿ ಅವಕಾಶ ನೀಡುವುದಿಲ್ಲ ಎಂದು ಅವರು ತಮ್ಮ ಪಕ್ಷದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

Translate »