- ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರ ಇಲ್ಲವೇ ಅನರ್ಹತೆ ವಿಚಾರ
- ಇತ್ಯರ್ಥವಾಗುವವರೆಗೂ ಅತಂತ್ರ ಸ್ಥಿತಿ, ತಪ್ಪಿದರೆ ರಾಷ್ಟ್ರಪತಿ ಆಳ್ವಿಕೆ ಅನಿವಾರ್ಯ
ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ವಿಶ್ವಾಸ ಮತದಲ್ಲಿ ಸೋತು ಪತನಗೊಂಡರೂ, ಈಗ ಬಿಜೆಪಿ ಸರ್ಕಾರ ರಚಿಸಲು ಕಾನೂನಿನ ಕಗ್ಗಂಟು ಎದುರಾಗಿದೆ.
ರಾಜೀನಾಮೆ ನೀಡಿರುವ ಶಾಸಕರ ರಾಜೀ ನಾಮೆ ಅಂಗೀಕಾರ ಅಥವಾ ಅನರ್ಹತೆ ವಿಚಾರ ಇತ್ಯರ್ಥವಾಗುವವರೆಗೂ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವುದು ಅಸಾಧ್ಯ ಎಂಬಂತಹ ಪರಿಸ್ಥಿತಿ ನಿರ್ಮಾಣ ವಾಗಿದೆ. ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಯಾಗಿ ಪ್ರಮಾಣ ವಚನ ಬೋಧಿಸಬೇಕಾದರೆ 113 ಶಾಸಕರ ಪಟ್ಟಿ ನೀಡಬೇಕೆಂದು ರಾಜ್ಯಪಾಲ ವಜೂಭಾಯ್ ವಾಲಾ ಸ್ಪಷ್ಟಪಡಿಸಿದ್ದಾರೆ. ಅಷ್ಟು ಸಂಖ್ಯಾಬಲ ಇಲ್ಲದ ಕಾರಣ ಬಿಜೆಪಿ ಚಿಂತೆಗೀಡಾ ಗಿದೆ ಎನ್ನಲಾಗಿದೆ. ಬಿಜೆಪಿ ವರಿಷ್ಠರೂ ಕೂಡ ಈ ಕಾನೂನು ಕಗ್ಗಂಟಿನಿಂದ ಬಿಡಿಸಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ದೀರ್ಘ ಸಮಾ ಲೋಚನೆ ನಡೆಸುತ್ತಿದ್ದಾರೆ. ಅಲ್ಲದೇ ಕಾನೂನು ಪಂಡಿತರ ಮೊರೆ ಹೋಗಿದ್ದಾರೆ. ಈ ಕಾರಣ ದಿಂದಲೇ ವರಿಷ್ಠರು ಸರ್ಕಾರ ರಚನೆ ಕುರಿತು ಯಡಿಯೂರಪ್ಪ ಅವರಿಗೆ ಇನ್ನು ಹಸಿರು ನಿಶಾನೆ ತೋರಿಸಿಲ್ಲ ಎಂದು ಮೂಲಗಳು ತಿಳಿಸಿವೆ.
ಏನದು ಕಗ್ಗಂಟು?: ಚುನಾವಣೆ ಮುಗಿದು ಹೊಸದಾಗಿ ಸರ್ಕಾರ ರಚನೆ ಸಂದರ್ಭ ರಾಜ್ಯದಲ್ಲಿ ಅತಂತ್ರ ಫಲಿತಾಂಶ ಬಂದಿದ್ದರೂ ರಾಜ್ಯಪಾಲರು ಅತೀ ದೊಡ್ಡ ಪಕ್ಷಕ್ಕೆ ಸರ್ಕಾರ ರಚಿಸುವ ಅವ ಕಾಶವನ್ನು ಮೊದಲು ನೀಡುತ್ತಾರೆ. ಆದರೆ ವಿಶ್ವಾಸ ಅಥವಾ ಅವಿಶ್ವಾಸದಿಂದ ಒಂದು ಸರ್ಕಾರ ಪತನವಾದಾಗ
ಮತ್ತೊಂದು ಸರ್ಕಾರ ಅಸ್ತಿತ್ವಕ್ಕೆ ಬರಬೇಕಾದರೆ ಸದನದ ಒಟ್ಟು ಸದಸ್ಯರ ಬಲದಲ್ಲಿ ಶೇ.50ಕ್ಕಿಂತ ಹೆಚ್ಚು ಸದಸ್ಯರನ್ನು ಹೊಂದಿರುವ ಪಕ್ಷವನ್ನು ಮಾತ್ರ ಸರ್ಕಾರ ರಚನೆಗೆ ರಾಜ್ಯಪಾಲರು ಆಹ್ವಾನಿಸಬೇಕು ಅಥವಾ ಹಕ್ಕು ಮಂಡಿಸಿದ ಪಕ್ಷದ ಬಳಿ ಅಷ್ಟು ಸದಸ್ಯರ ಬಲ ಇರಲೇ ಬೇಕು ಎಂದು ಕಾನೂನು ಹೇಳು ತ್ತದೆ ಎಂದು ಸಂವಿಧಾನ ಪಂಡಿತರು ತಿಳಿಸಿದ್ದಾರೆ. ರಾಜ್ಯ ವಿಧಾನಸಭೆಯ ಒಟ್ಟು ಸದಸ್ಯರ ಬಲ 225 ಆಗಿದ್ದು, ಬಿಜೆಪಿ ಸರ್ಕಾರ ರಚಿಸಬೇಕಾದರೆ ಆ ಪಕ್ಷದ ಬಳಿ 113 ಸದಸ್ಯರ ಬಲ ಇರಲೇಬೇಕಾಗುತ್ತದೆ. ಆದರೆ ಬಿಜೆಪಿ ಬಳಿ 105 ಸದಸ್ಯರಿದ್ದು, ಇಬ್ಬರು ಪಕ್ಷೇತರರನ್ನೂ ಸೇರಿಸಿಕೊಂಡರೆ ಆ ಪಕ್ಷದ ಬಲ 107 ಆಗುತ್ತದೆ. ಆಗ ಬಿಜೆಪಿಗೆ 6 ಸದಸ್ಯರ ಕೊರತೆ ಉಂಟಾಗುವ ಕಾರಣ ಅವರಿಗೆ ಸರ್ಕಾರ ರಚನೆ ಮಾಡಲು ರಾಜ್ಯಪಾಲರು ಅವಕಾಶ ನೀಡುವ ಸಾಧ್ಯತೆಗಳಿಲ್ಲ. ವಿಧಾನಸಭೆಯ ಒಟ್ಟು ಸದಸ್ಯರ ಬಲ 213 ಇದ್ದಾಗ ಮಾತ್ರ ಬಿಜೆಪಿ ಸರ್ಕಾರ ರಚಿಸಲು ಸಾಧ್ಯ. ಕಾಂಗ್ರೆಸ್ ಮತ್ತು ಜೆಡಿಎಸ್‍ನ 15 ಶಾಸಕರು ರಾಜೀನಾಮೆ ನೀಡಿದ್ದರೂ ಅವರ ರಾಜೀನಾಮೆ ಅಂಗೀಕಾರವಾಗಿಲ್ಲ. ಹಾಗಾಗಿ ಈಗಲೂ ಸದನದ ಸದಸ್ಯರ ಬಲ 225 ಆಗಿದೆ. ಈಗ ಕನಿಷ್ಠ 12 ಶಾಸಕರ ರಾಜೀನಾಮೆ ಅಂಗೀಕಾರವಾಗಬೇಕು. ಅಥವಾ ಅವರುಗಳ ಶಾಸಕ ಸ್ಥಾನ ಅನರ್ಹಗೊಳ್ಳಬೇಕು. ಆಗ ಮಾತ್ರ ಸದನದ ಒಟ್ಟು ಸಂಖ್ಯೆ 113ಕ್ಕೆ ಇಳಿದು ಬಿಜೆಪಿಗೆ ಸರ್ಕಾರ ರಚಿಸುವ ಅವಕಾಶ ಲಭಿಸುತ್ತದೆ. ವಿಧಾನಸಭಾಧ್ಯಕ್ಷರು ರಾಜೀನಾಮೆ ಅಥವಾ ಅನರ್ಹತೆಯ ಬಗ್ಗೆ ನಿರ್ಧಾರ ಮಾಡಿ ಆದೇಶ ಹೊರಡಿಸಿದ ನಂತರವೇ ಅದು ಸಾಧ್ಯವಾಗಲಿದೆ. ರಾಜೀನಾಮೆ ಅಂಗೀಕಾರ ಅಥವಾ ಅನರ್ಹತೆ ವಿಚಾರದಲ್ಲಿ ಇಂತಿಷ್ಟೇ ದಿನಗಳಲ್ಲಿ ತೀರ್ಮಾನ ಕೈಗೊಳ್ಳಬೇಕು ಎಂಬ ಕಾಲಮಿತಿ ಸ್ಪೀಕರ್‍ಗೆ ಕಾನೂನಿನಡಿ ಇಲ್ಲದೇ ಇರುವುದರಿಂದ ಅವರು ಆ ಪ್ರಕ್ರಿಯೆಗಳನ್ನು ಮುಗಿಸಲು ಎಷ್ಟು ಕಾಲಾವಕಾಶ ಬೇಕಾದರೂ ತೆಗೆದುಕೊಳ್ಳಬಹುದು. ಅದಕ್ಕೆ ಅವರಿಗೆ ಪರಮಾಧಿಕಾರವಿದೆ. (ಈ ವಿಚಾರವಾಗಿ ಸ್ಪೀಕರ್ ತೀರ್ಪೇ ಅಂತಿಮ ಎಂದು ಈಗಾಗಲೇ ಸುಪ್ರೀಂಕೋರ್ಟ್ ಹೇಳಿದೆ). ಇಂತಹ ಪರಿಸ್ಥಿತಿಯಲ್ಲಿ ಯಡಿ ಯೂರಪ್ಪ ಅವರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಬೋಧಿಸಲು ರಾಜ್ಯಪಾಲರು ಸುತರಾಂ ಒಪ್ಪುವುದಿಲ್ಲ. ಅವರೂ ಕೂಡ ಕಾನೂನಿನ ಅಂಶಗಳು ಹಾಗೂ ಮುಂದೆ ಆಗಬಹುದಾದ ರಾಜಕೀಯ ಮಾರ್ಪಾಡುಗಳ ಬಗ್ಗೆಯೂ ಚಿಂತನೆ ನಡೆಸಿಯೇ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಕಾನೂನು ಪಂಡಿತರು ಹೇಳುತ್ತಾರೆ.
ತಮ್ಮ ಬಳಿ ಇರುವ 105 ಶಾಸಕರ ಪಟ್ಟಿಯನ್ನು ಬಿಜೆಪಿ ರಾಜ್ಯಪಾಲರಿಗೆ ನೀಡಬಹುದು. ಬಿಜೆಪಿಯನ್ನು ಬೆಂಬಲಿಸುವುದಾಗಿ ಇಬ್ಬರು ಪಕ್ಷೇತರರು ಹೇಳಿದರೆ ಅವರ ಹೆಸರನ್ನೂ ಸೇರಿಸಿ 107 ಶಾಸಕರ ಪಟ್ಟಿಯನ್ನು ಮಾತ್ರ ಕೊಡಲು ಸಾಧ್ಯ. ರಾಜೀನಾಮೆ ನೀಡಿರುವ ಶಾಸಕರು ಈಗಲೂ ಕಾಂಗ್ರೆಸ್ ಮತ್ತು ಜೆಡಿಎಸ್‍ಗೆ ಸೇರಿರುವುದರಿಂದ ಅವರ ಹೆಸರುಗಳನ್ನು ಬಿಜೆಪಿ ಪಟ್ಟಿಯಲ್ಲಿ ಕಾನೂನು ಪ್ರಕಾರ ಸೇರಿಸಲು ಸಾಧ್ಯವೇ ಇಲ್ಲ. ಹಾಗಿರುವಾಗ ಬಿಜೆಪಿ 113 ಶಾಸಕರ ಪಟ್ಟಿ ನೀಡಿ ಸರ್ಕಾರ ರಚಿಸಲು ಸಾಧ್ಯವೇ ಇಲ್ಲ ಎಂಬ ಮಾತುಗಳು ಕಾನೂನು ಪಂಡಿತರ ವಲಯದಿಂದ ಕೇಳಿಬಂದಿದೆ.
ರಾಜೀನಾಮೆ ಸಲ್ಲಿಸಿ ಮುಂಬೈಗೆ ತೆರಳಿರುವ ಶಾಸಕರು ಒಂದು ವೇಳೆ ಯಾವುದಾದರೂ ಕಾರಣಕ್ಕಾಗಿ ಮನಸ್ಸು ಬದಲಾಯಿಸಿ ಮೈತ್ರಿ ಪಕ್ಷಗಳಿಗೆ ತಮ್ಮ ಬೆಂಬಲವನ್ನು ಪುನಃ ಸೂಚಿಸಿಬಿಟ್ಟರೆ ಕುಮಾರಸ್ವಾಮಿ ಹೊರತುಪಡಿಸಿ ಕಾಂಗ್ರೆಸ್ ಅಥವಾ ಜೆಡಿಎಸ್‍ನ ಯಾರಾದರೂ ಸರ್ಕಾರ ರಚನೆಗೆ ಹಕ್ಕು ಮಂಡಿಸಬಹುದು. ಅವರಿಗೆ ಅವಕಾಶವನ್ನು ರಾಜ್ಯಪಾಲರು ನೀಡಲೇಬೇಕಾಗುತ್ತದೆ ಎಂದು ಹೇಳುವ ಕಾನೂನು ಪಂಡಿತರು, ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಅವರ ವಿರುದ್ಧ ಸಿಡಿದೆದ್ದು, ಅನರ್ಹಗೊಂಡಿದ್ದ ಶಾಸಕರು, ಸುಪ್ರೀಂಕೋರ್ಟ್‍ನಲ್ಲಿ ಗೆಲುವು ಸಾಧಿಸಿ ಮತ್ತೆ ಶಾಸಕ ಸ್ಥಾನ ಪಡೆದ ನಂತರವೂ ಬಂದು ಯಡಿಯೂರಪ್ಪನವರಿಗೇ ಬೆಂಬಲ ಸೂಚಿಸಿದ ಘಟನೆಯನ್ನು ಉಲ್ಲೇಖಿಸುತ್ತಿದ್ದಾರೆ. ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ಈಗ ರಾಜೀನಾಮೆ ನೀಡಿರುವ ಶಾಸಕರು ತಮ್ಮ ರಾಜೀನಾಮೆ ಹಿಂಪಡೆದು ಮೈತ್ರಿ ಕೂಟಕ್ಕೆ ಬೆಂಬಲ ಸೂಚಿಸುವ ಸಾಧ್ಯತೆಗಳನ್ನು ತಳ್ಳಿ ಹಾಕುವ ಹಾಗಿಲ್ಲ ಎಂಬುದನ್ನೂ ಕೂಡ ರಾಜ್ಯಪಾಲರು ಗಣನೆಗೆ ತೆಗೆದುಕೊಂಡಿರುತ್ತಾರೆ.
ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ನೀಡಲು ಸದ್ಯಕ್ಕೆ ಸಾಧ್ಯವಿಲ್ಲ. ವಿಧಾನಸಭಾಧ್ಯಕ್ಷರು ರಾಜೀನಾಮೆ ಅಂಗೀಕಾರ ಅಥವಾ ಅನರ್ಹತೆ ಬಗ್ಗೆ ದೀರ್ಘ ಕಾಲ ಯಾವುದೇ ತೀರ್ಮಾನ ಕೈಗೊಳ್ಳದೇ ಇದ್ದು, ಮೈತ್ರಿ ಪಕ್ಷಗಳೂ ಸರ್ಕಾರ ರಚನೆಗೆ ಹಕ್ಕು ಮಂಡಿಸದೇ ಇದ್ದರೆ, ಅನಿವಾರ್ಯವಾಗಿ ರಾಜ್ಯಪಾಲರು ವಿಧಾನಸಭೆ ವಿಸರ್ಜನೆಗೆ ಶಿಫಾರಸು ಮಾಡಬಹುದು ಎಂದು ಕಾನೂನು ಪಂಡಿತರು ಹೇಳುತ್ತಿದ್ದಾರೆ.