ಮೈಸೂರು ಕೋರ್ಟ್ ಹಿಂಭಾಗದ ಅಕ್ರಮ  ಮನೆ ತೆರವಿಗೆ ಶಾಸಕ ರಾಮದಾಸ್ ಸೂಚನೆ
ಮೈಸೂರು

ಮೈಸೂರು ಕೋರ್ಟ್ ಹಿಂಭಾಗದ ಅಕ್ರಮ  ಮನೆ ತೆರವಿಗೆ ಶಾಸಕ ರಾಮದಾಸ್ ಸೂಚನೆ

July 31, 2018

ಮೈಸೂರು: ಮೈಸೂರು ನ್ಯಾಯಾಲಯದ ಹಿಂಭಾಗದ ಸರ್ಕಾರದ ಖರಾಬು ಜಮೀನಿನಲ್ಲಿ ಅಕ್ರಮವಾಗಿ ಮನೆ ನಿರ್ಮಾಣ ಮಾಡಿರುವುದು ಗಮನಕ್ಕೆ ಬಂದಿದ್ದು, ಕೂಡಲೇ ತೆರವುಗೊಳಿಸುವಂತೆ ಶಾಸಕ ಎಸ್.ಎ.ರಾಮದಾಸ್ ಅಧಿಕಾರಿಗಳಿಗೆ ಸೂಚಿಸಿದರು.

ಸೋಮವಾರ ಬೆಳಿಗ್ಗೆ ವಾರ್ಡ್ ನಂ 48ನೇ ವಾರ್ಡಿನ ಜಯನಗರ ಮತ್ತಿತರೆ ಪ್ರದೇಶಗಳಲ್ಲಿ ಪಾದಯಾತ್ರೆ ನಡೆಸಿ ಸಾರ್ವಜನಿಕರಿಂದ ಸಮಸ್ಯೆ ಆಲಿಸಿದ ಅವರು, ನ್ಯಾಯಾಲಯದ ಹಿಂಭಾಗದಲ್ಲಿ ಸರ್ಕಾರದ ಖರಾಬು ಜಮೀನಿನಲ್ಲಿ ಅಕ್ರಮವಾಗಿ ಮನೆ ನಿರ್ಮಾಣ ಮಾಡಿರುವುದು, ದನಕರುಗಳನ್ನು ಕಟ್ಟಿರುವುದು ಗಮನಕ್ಕೆ ಬಂದಿದೆ. ಕೂಡಲೇ ಸರ್ಕಾರಿ ಜಾಗದಲ್ಲಿ ಯಾವುದೇ ಕಟ್ಟಡವಿದ್ದರೆ ಅದನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

10 ವರ್ಷದ ಹಿಂದೆ ಕಾಂತರಾಜ ಅರಸ್ ರಸ್ತೆಯಲ್ಲಿನ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದ್ದರಿಂದ ನೂತನ ಕಟ್ಟಡವನ್ನು ನಿರ್ಮಿಸಲಾಗಿತ್ತು. ಆದರೆ ಇಂದು 40 ಮಕ್ಕಳಿದ್ದಾರೆ. ಜತೆಗೆ ಶಾಲೆಯ ಸುತ್ತಮುತ್ತ ಕೆಲವರು ಅಕ್ರಮವಾಗಿ ವ್ಯಾಪಾರಗಳನ್ನು ಮಾಡುತ್ತಿರುವುದು ಗಮನಕ್ಕೆ ಬಂದಿದ್ದು, ಅವುಗಳನ್ನು ತೆರವುಗೊಳಿಸಲಾಗುವುದು ಎಂದು ತಿಳಿಸಿದರು.

ಕನ್ನೇಗೌಡನ ಕೊಪ್ಪಲಿನ ರೈಲು ಸೇತುವೆ ಕೆಳಭಾಗದ ರಸ್ತೆ ಕಿರಿದಾಗಿದ್ದು, ಸಮೀಪದಲ್ಲೇ ಸಿಗ್ನಲ್ ಇರುವುದರಿಂದ ತೊಂದರೆಯಾಗುತ್ತಿದೆ. ಹಾಗಾಗಿ ರೈಲ್ವೆ ಇಲಾಖೆಯಿಂದ 2 ವೆಂಟ್ ಅಳವಡಿಸಲು ಮನವಿ ಮಾಡಲಾಗುವುದು. ಜತೆಗೆ ಕನ್ನೇಗೌಡ ಕೊಪ್ಪಲಿನ ಸ್ಮಶಾನದ ಕಾಂಪೌಂಡ್ ಕುಸಿದಿದ್ದು, ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಮಂಜೂರಾತಿ ಪತ್ರ ವಿತರಣೆ: ಚಿನ್ನಗಿರಿಕೊಪ್ಪಲಿಗೆ ತೆರಳಿದ ಶಾಸಕರು, ಬಡತನರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಮಂಜೂರಾತಿ ಪತ್ರವನ್ನು ವಿತರಿಸಿದರು. ನಂತರ ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಸ್ವಂತ ಮನೆ ಪುನನಿರ್ಮಾಣ ಮಾಡುವ ಯೋಜನೆಗೆ ಅರ್ಜಿ ಹಾಕಿದ್ದು, ದಾಖಲಾತಿಗಳನ್ನು ಪರಿಶೀಲಿಸಿ ಅತೀ ಶೀಘ್ರದಲ್ಲಿಯೇ ಮಂಜೂರು ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಚಿನ್ನಗಿರಿಕೊಪ್ಪಲಿನ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕೇಂದ್ರ ಸರ್ಕಾರದ ಯೋಜನೆಗಳು ಅನುಷ್ಠಾನವಾಗದೆ ತೊಂದರೆಯಾಗಿದ್ದು, ಎಲ್ಲ ಯೋಜನೆಗಳು ಅನುಷ್ಠಾನಗೊಳ್ಳುವಂತೆ ಮಾಡಲಾಗುವುದು. ಜತೆಗೆ ಅಂಗನವಾಡಿ ಕಟ್ಟಡ ನಿರ್ಮಿಸಲು ಸ್ಥಳ ನಿಯೋಜನೆಯಾಗಿದ್ದು, ಯಾವುದಾದರು ಸರ್ಕಾರದ ನಿಧಿಯಿಂದ ಕಟ್ಟಡ ಕಾಮಗಾರಿ ಆರಂಭಿಸಲಾಗುವುದು ಎಂದ ಅವರು, ಮಳೆಗಾಲದಲ್ಲಿ ಮಳೆನೀರು ಬಯಲು ಪ್ರದೇಶದ ಕಡೆಗೆ ಹೋಗುತ್ತಿದ್ದು, ಇದನ್ನು ತಡೆಯಲು ಚಿಕ್ಕಹರದನಳ್ಳಿ ಮತ್ತು ಮಳಲವಾಡಿ ಭಾಗದಲ್ಲಿ ಮುಡಾ ಮತ್ತು ಸರ್ಕಾರ ಜಂಟಿಯಾಗಿ ರಾಜಕಾಲುವೆ ಗುರುತಿಸಿ ಸಮಸ್ಯೆ ಬಗೆಹರಿಸಬೇಕು ಎಂದರು.

ನರ್ಮ್ ಯೋಜನೆಯಡಿ ಮನೆಗಳಿಗೆ ಜಸ್ಕೋ ವತಿಯಿಂದ ಹೊಸದಾಗಿ ನೀರಿನ ಸಂಪರ್ಕ ನೀಡುತ್ತಿದ್ದು, ಜಯನಗರ ಮತ್ತು ಕನ್ನೇಗೌಡನ ಕೊಪ್ಪಲಿನ ಭಾಗಗಳಲ್ಲಿ ಮನೆಯೊಳಗೆ ನಲ್ಲಿಗಳಿದೆ. ಹೊರಗೂ ಮೀಟರ್ ಕನೆಕ್ಷನ್‍ಗಳಿಲ್ಲದ ನಲ್ಲಿಗಳಿರುವುದು ಗಮನಕ್ಕೆ ಬಂದಿದೆ. ಸಾರ್ವಜನಿಕರ ಸಹಕಾರದಿಂದ ಮನೆಯ ಹೊರಗಿರುವ ನಲ್ಲಿಗಳ ಸಂಪರ್ಕವನ್ನು 15 ದಿನಗಳೊಳಗೆ ಸಂಪೂರ್ಣವಾಗಿ ಕಡಿತಗೊಳಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದರು.

ಚಿನ್ನಗಿರಿಕೊಪ್ಪಲು ಮತ್ತು ಜಯನಗರ ಭಾಗಗಳಲ್ಲಿ ತಿಂಗಳಿಗೊಮ್ಮೆ ನೀರಿನ ಬಿಲ್ ನೀಡದೇ ಒಟ್ಟಿಗೆ ನೀಡಿದ್ದು, ಸಣ್ಣ ಸಣ್ಣ ಮನೆಗಳಿಗೆ 50 ಸಾವಿರ ರೂ. ಬಿಲ್ ನೀಡಿದ್ದಾರೆ. ಕಟ್ಟದಿದ್ದಲ್ಲಿ ನೀರಿನ ಸಂಪರ್ಕ ಕಡಿತಗೊಳಿಸುವುದಾಗಿ ಹೇಳುತ್ತಿದ್ದಾರೆ ಎಂಬ ಸಾರ್ವಜನಿಕರ ಸಮಸ್ಯೆಗೆ ಶಾಸಕರು ಪ್ರತಿಕ್ರಿಯಿಸಿ, 50 ಸಾವಿರಕ್ಕೂ ಹೆಚ್ಚು ಬಿಲ್ ಬರಲು ಕಾರಣವೇನು ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರಲ್ಲದೆ, ಹಂತ ಹಂತವಾಗಿ ಹಣ ಪಾವತಿಸಲು ಅನುಕೂಲ ಮಾಡಿಕೊಡಬೇಕು. ಬಿಲ್ ಪಾವತಿಸಲಿಲ್ಲವೆಂದು ನೀರಿನ ಸಂಪರ್ಕ ಕಡಿತಗೊಳಿಸದಂತೆ ಸೂಚಿಸಿದರು.

Translate »