ಕಾರ್ಮಿಕ ವಿರೋಧಿ ಕಾಯ್ದೆ ತಿದ್ದುಪಡಿ ವಾಪಸ್ ಪಡೆಯಲು ಆಗ್ರಹ ಡಿಸಿ ಕಚೇರಿ ಬಳಿ ವಿವಿಧ ಸಂಘಟನೆಗಳ ಪ್ರತಿಭಟನೆ
ಮೈಸೂರು

ಕಾರ್ಮಿಕ ವಿರೋಧಿ ಕಾಯ್ದೆ ತಿದ್ದುಪಡಿ ವಾಪಸ್ ಪಡೆಯಲು ಆಗ್ರಹ ಡಿಸಿ ಕಚೇರಿ ಬಳಿ ವಿವಿಧ ಸಂಘಟನೆಗಳ ಪ್ರತಿಭಟನೆ

August 11, 2020

ಮೈಸೂರು, ಆ.10(ಆರ್‍ಕೆಬಿ)- ಸರ್ಕಾರ ಕಾರ್ಮಿಕ ವಿರೋಧಿ ನೀತಿಯ ಕಾಯ್ದೆ ತಿದ್ದುಪಡಿಯನ್ನು ತಕ್ಷಣ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ, ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ (ಜೆಸಿ ಟಿಯು) ಜಿಲ್ಲಾ ಘಟಕದ ಆಶ್ರಯದಲ್ಲಿ ಸೋಮವಾರ ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಯಿತು.

ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಯನ್ನು ಖಂಡಿಸಿದ ಪ್ರತಿಭಟನಾಕಾರರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಮಾಲೀ ಕರ ಪರವಾಗಿ ಕಾಯ್ದೆ ತಿದ್ದುಪಡಿಯಿಂದ ಈಗಾಗಲೇ ಹಲವಾರು ಕೈಗಾರಿಕೆಗಳ ಮಾಲೀ ಕರು ಕೋವಿಡ್-19 ನೆಪದಲ್ಲಿ ಕಾಯ್ದೆಗಳ ಉಲ್ಲಂಘನೆ, ಸಂಬಳ ಕಡಿತ, ಸವಲತ್ತುಗಳ ನಿರಾಕರಣೆ ಜೊತೆಗೆ ಗುತ್ತಿಗೆ ಕಾರ್ಮಿಕ ರನ್ನು ಕೆಲಸದಿಂದ ತೆಗೆಯುತ್ತಿದ್ದಾರೆ. ಅವರು ಮಾಡಿದ ಕೆಲಸಕ್ಕೂ ಸಂಬಳ ನೀಡದ ಹಲ ವಾರು ನಿದರ್ಶನಗಳಿವೆ. ಈ ಸಂಬಂಧ ಕಾರ್ಮಿಕ ಇಲಾಖೆ ಮತ್ತು ಸರ್ಕಾರಕ್ಕೆ ಹಲವಾರು ದೂರುಗಳನ್ನು ನೀಡಿದ್ದರೂ ಯಾವುದೇ ಕ್ರಮ ತೆಗೆದುಕೊಳ್ಳದೆ, ಅದು ಮಾಲೀಕರ ಪರವಾದ ನಿಲುವನ್ನೇ ತೆಗೆದು ಕೊಂಡಿದೆ ಎಂದು ದೂರಿದರು.

ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಮತ್ತು ಮಾಲೀಕರಿಗೆ ಅನುಕೂಲಕರವಾಗುವ ರೀತಿಯ ಕಾಯ್ದೆಗಳ ಜಾರಿಯಿಂದ ಮಾಲೀ ಕರು ಕಾರ್ಮಿಕರನ್ನು ಇನ್ನಷ್ಟು ಶೋಷಣೆ ಮಾಡುವ ಅವಕಾಶವನ್ನು ಸರ್ಕಾರವೇ ಮಾಡಿಕೊಟ್ಟಂತಾಗಿದೆ. ಆದ್ದರಿಂದ ಕಾರ್ಮಿ ಕರ ಹಿತರಕ್ಷಣೆ ಮಾಡಬೇಕಾದರೆ ಸರ್ಕಾರ ಕೂಡಲೇ ಕಾರ್ಮಿಕ ವಿರೋಧಿ ನೀತಿಯ ಕಾಯ್ದೆ ತಿದ್ದುಪಡಿಗಳನ್ನು ವಾಪಸ್ ಪಡೆಯ ಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಹೆಚ್.ಆರ್.ಶೇಷಾದ್ರಿ, ಸಿಐ ಟಿಯು ಪ್ರಧಾನ ಕಾರ್ಯದರ್ಶಿ ಜಯರಾಂ, ಎಐಯುಟಿಯುಸಿ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಮೇಟಿ, ಐಎನ್‍ಟಿಯುಸಿ ಸೇರಿದಂತೆ ಹಲವು ಸಂಘಟನೆಗಳ ಪದಾ ಧಿಕಾರಿಗಳು ಭಾಗವಹಿಸಿದ್ದರು.

Translate »