ಕೈಗಾರಿಕಾ ಘಟಕಗಳ ತೆರಿಗೆ ಪರಿಷ್ಕರಿಸಲು ಮನವಿ
ಮೈಸೂರು

ಕೈಗಾರಿಕಾ ಘಟಕಗಳ ತೆರಿಗೆ ಪರಿಷ್ಕರಿಸಲು ಮನವಿ

January 8, 2021

ಮೈಸೂರು, ಜ.7(ಆರ್‍ಕೆ)-ಅತೀ ಸಣ್ಣ, ಸಣ್ಣ, ಮಧ್ಯಮ ಹಾಗೂ ಭಾರೀ ಪ್ರಮಾಣದ ಕೈಗಾರಿಕೆಗಳಿಗೆ ವಿಧಿಸಿರುವ ದುಬಾರಿ ತೆರಿಗೆಯನ್ನು ಕಡಿಮೆ ಮಾಡುವಂತೆ ಕಡಕೊಳ, ಅಡಕನಹಳ್ಳಿ, ತಾಂಡ್ಯ ಮತ್ತು ಇಮ್ಮಾವು ಕೈಗಾರಿಕಾ ಪ್ರದೇಶಗಳ ಸಂಘದ(ಕಾಟ್ಕಿ) ಪದಾಧಿಕಾರಿಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಸಂಬಂಧ ಬುಧ ವಾರ ಸಂಜೆ ಮೈಸೂರಿನ ಸರ್ಕಾರಿ ಅತಿಥಿಗೃಹದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರನ್ನು ಭೇಟಿ ಮಾಡಿದ ಸಂಘದ ಗೌರವಾಧ್ಯಕ್ಷ ಹೆಚ್.ರಾಮ ಕೃಷ್ಣೇಗೌಡ ನೇತೃತ್ವದ ಪದಾಧಿಕಾರಿಗಳು ಮನವಿ ಪತ್ರ ಸಲ್ಲಿಸಿದರು. ಶೇ.04. ರಷ್ಟಿರುವ ಅತೀ ಸಣ್ಣ ಮತ್ತು ಸಣ್ಣ ಕೈಗಾ ರಿಕೆಗಳ ತೆರಿಗೆಯನ್ನು ಶೇ.0.1, ಶೇ.0.5ರಷ್ಟಿರುವ ಮಧ್ಯಮ ಕೈಗಾರಿಕೆಗಳಿಗೆ ಶೇ.0.2 ಹಾಗೂ ಶೇ.0.6 ಇರುವ ಭಾರೀ ಕೈಗಾರಿಕೆಗಳ ತೆರಿಗೆಯನ್ನು ಶೇ.03ಕ್ಕೆ ಇಳಿಕೆ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ. 2015-16ನೇ ಸಾಲಿನಲ್ಲಿ 1 ಲಕ್ಷ ರೂ. ಆಸ್ತಿ ತೆರಿಗೆ ಪಾವತಿಸುತ್ತಿದ್ದ ಕೈಗಾರಿಕೆಗಳು ಪ್ರಸ್ತುತ ಚಾಲ್ತಿ ದರದ ಪ್ರಕಾರ 6 ಲಕ್ಷ ರೂ. ಪಾವತಿಸಬೇಕಾಗಿದ್ದು, ಕೊರೊನಾ ಸಂಕಷ್ಟದಿಂದ ಆರ್ಥಿಕ ಹಿನ್ನಡೆಯಾಗಿರುವ ಕಾರಣ ಕೈಗಾರಿಕೋದ್ಯಮಿಗಳು ಶೋಚನೀಯ ಪರಿಸ್ಥಿತಿಯಲ್ಲಿದ್ದಾರೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

ಪರಿಷ್ಕøತ ದರದಲ್ಲಿ ನಿವೇಶನ: 2006-07ರಲ್ಲಿ ಎಕರೆಗೆ 30ರಿಂದ 70 ಲಕ್ಷ ರೂ. ನಿಗದಿಪಡಿಸಿದ್ದ ಕೈಗಾರಿಕಾ ನಿವೇಶನಗಳ ಬೆಲೆಯನ್ನು ಏಕಾಏಕಿ 1 ಕೋಟಿ ರೂ.ಗಳಿಂದ 1.20 ಕೋಟಿ ರೂ.ಗಳಿಗೆ ನಿಗದಿಪಡಿಸಿರುವುದು ಕೈಗಾರಿಕೆಗಳ ಅಭಿವೃದ್ಧಿಗೆ ತೊಡಕಾಗಿ ರುವುದರಿಂದ ದರ ಪರಿಷ್ಕರಿಸುವಂತೆ ಕೆಐಎಡಿಬಿಗೆ ನಿರ್ದೇಶನ ನೀಡುವಂತೆಯೂ ಪದಾಧಿಕಾರಿಗಳು ಸಚಿವರಿಗೆ ಮನವಿ ಮಾಡಿದ್ದಾರೆ. ಕಾಟ್ಕಿ ಕೈಗಾರಿಕೆಗಳ ಸಂಘದ ಅಧ್ಯಕ್ಷ ಪ್ರಶಾಂತ್, ಉಪಾಧ್ಯಕ್ಷ ಬಿ.ಚಂದ್ರನ್, ಪ್ರಧಾನ ಕಾರ್ಯದರ್ಶಿ ಜಿ.ವಿ.ಪಿಂಟೊ ಹಾಗೂ ಇತರರು ಈ ಸಂದರ್ಭ ಉಪಸ್ಥಿತರಿದ್ದರು.

 

Translate »