ವಿಜಯಶ್ರೀಪುರ ನಿವಾಸಿಗಳಿಗೆ ಮತ್ತೆ ಸಂಕಷ್ಟ
ಮೈಸೂರು

ವಿಜಯಶ್ರೀಪುರ ನಿವಾಸಿಗಳಿಗೆ ಮತ್ತೆ ಸಂಕಷ್ಟ

September 6, 2018

ಮೈಸೂರು: ಮೈಸೂರಿನ ವಿವಾದಿತ ವಿಜಯಶ್ರೀಪುರ ಬಡಾವಣೆಯಲ್ಲಿ ನಿರ್ಮಿಸಿರುವ ಮನೆಗಳನ್ನು ತೆರವುಗೊಳಿಸಬೇಕೆಂಬ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಬೇಕೆಂದು ಅಲ್ಲಿನ ನಿವಾಸಿಗಳು ಸಲ್ಲಿಸಿದ್ದ ಅರ್ಜಿಯನ್ನು ಇಂದು ಹೈಕೋರ್ಟ್ ವಜಾ ಮಾಡಿದ್ದು, ವಿಜಯಶ್ರೀಪುರ ಬಡಾವಣೆ ನಿವಾಸಿಗಳಿಗೆ ಮತ್ತೊಮ್ಮೆ ಸಂಕಷ್ಟ ಎದುರಾಗಿದೆ.

ಹಿನ್ನೆಲೆ: ರಾಜ್ಯ ಸರ್ಕಾರವು 1988 ರಲ್ಲಿ ರಾಜ ವಂಶಸ್ಥರಿಗೆ ಸೇರಿದ 94.28 ಎಕರೆ ಭೂಮಿಯನ್ನು ವಶಪಡಿಸಿ ಕೊಂಡಿತ್ತು. ಅದರಲ್ಲಿ ಜೆಎಸ್‍ಎಸ್ ಮಹಾವಿದ್ಯಾಪೀಠಕ್ಕೆ ಭೂಮಿ ಮಂಜೂರು ಮಾಡಲಾಗಿದೆ. ಅದೇ ವೇಳೆ 23 ಎಕರೆ ಪ್ರದೇಶದಲ್ಲಿ ವಿಜಯಶ್ರೀಪುರ ಬಡಾವಣೆ ತಲೆ ಎತ್ತಿ, ಅಲ್ಲಿ ನೂರಾರು ಮನೆಗಳು ನಿರ್ಮಾಣವಾಗಿದ್ದವು.

ಸರ್ಕಾರವು ರಾಜ ವಂಶಸ್ಥರಿಗೆ ಸೇರಿದ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿರುವ ಕ್ರಮವನ್ನು ಪ್ರಶ್ನಿಸಿ ಕೆ.ಜಿ. ರಾಮ ಚಂದ್ರರಾಜೇ ಅರಸ್ ಅವರು 1994 ರಲ್ಲಿ ಹೈಕೋರ್ಟ್ ಮೊರೆ ಹೋಗಿದ್ದರು. ಈ ಪ್ರಕರಣವು ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದ್ದು, 2015ರ ಡಿಸೆಂಬರ್ 16ರಂದು ಸುಪ್ರೀಂ ಕೋರ್ಟ್ ರಾಮ ಚಂದ್ರರಾಜೇ ಅರಸ್ ಪರ ತೀರ್ಪು ನೀಡಿತ್ತು. ಜೆಎಸ್‍ಎಸ್ ಮಹಾವಿದ್ಯಾ ಪೀಠಕ್ಕೆ ಮಂಜೂರಾಗಿದ್ದ 15 ಎಕರೆ ಭೂಮಿಯನ್ನು ಮುಡಾ ತನ್ನ ವಶಕ್ಕೆ ಪಡೆಯಿತು. ವಿಜಯಶ್ರೀಪುರ ಬಡಾವಣೆ ನಿರ್ಮಾಣವಾಗಿರುವ ಮನೆಗಳನ್ನು ಕೂಡ ಮುಡಾ ತೆರವು ಗೊಳಿಸಬೇಕೆಂದು ಸುಪ್ರೀಂಕೋರ್ಟ್ ಆದೇಶ ನೀಡಿದ್ದ ಹಿನ್ನೆಲೆಯಲ್ಲಿ ಅಲ್ಲಿನ ನಿವಾಸಿಗಳು ‘ವಿಜಯಶ್ರೀಪುರ ಕ್ಷೇಮಾಭಿವೃದ್ಧಿ ಸಂಘ’ ರಚಿಸಿಕೊಂಡು ತಮ್ಮ ಕಟ್ಟಡಗಳನ್ನು ಉಳಿಸಿಕೊಳ್ಳಲು ಹೈಕೋರ್ಟ್ ಮೊರೆಹೋಗಿದ್ದರು. ಅವರ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿದ್ದ ಹೈಕೋರ್ಟ್ ಕಟ್ಟಡಗಳ ತೆರವಿಗೆ ತಡೆಯಾಜ್ಞೆ ನೀಡಿತ್ತು. ಆದರೆ ಇಂದು ಹೈಕೋರ್ಟ್ ವಿಜಯಶ್ರೀಪುರ ನಿವಾಸಿಗಳ ಅರ್ಜಿಯನ್ನು ವಜಾ ಮಾಡಿದೆ.

Translate »